ದ್ವಿತೀಯ ಸುತ್ತಿಗೆ ನಡಾಲ್

ಪ್ಯಾರಿಸ್: ವಿಶ್ವದ ಮಾಜಿ ನಂಬರ್ಒನ್ ಆಟಗಾರ ಸ್ಪೇನ್ ನ ರಾಫೆಲ್ ನಡಾಲ್, ಚೀನಾದ ಖ್ಯಾತ ಟೆನಿಸ್ ಆಟಗಾರ್ತಿ ಲೀ ನಾ ಹಾಗೂ ಸ್ವಿಡ್ಜರ್ಲೆಂಡ್ ನ ಜೊ-ವಿಲ್ಫ್ರಿಡ್ ಸೋಂಗಾ ಅವರು ಫ್ರೆಂಚ್ ಓಪನ್ ನ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ನಡಾಲ್, ಜರ್ಮನಿಯ ಡೇನಿಯಲ್ ಬ್ರಾಂಡ್ಸ್ ಅವರನ್ನು 4-6, 7-6 (7-4), 6-4, 6-3 ಅಂತರದಲ್ಲಿ ಸೋಲಿಸಿ, ದ್ವಿತೀಯ ಸುತ್ತಿಗೆ ಪ್ರವೇಶಿಸಿದರು.
ಮೊದಲ ಸೆಟ್ ನಲ್ಲಿ ಕೆಲ ತಪ್ಪುಗಳಿಂದಾಗಿ ರಾಫೆಲ್ ನಡಾಲ್ ಅವರು ಎದುರಾಳಿ ವಿರುದ್ಧ 4-6 ಅಂತರದಲ್ಲಿ ಸೋಲು ಕಾಣಬೇಕಾಯಿತು. ಆದರೆ, ದ್ವಿತೀಯ ಸೆಟ್ನಲ್ಲಿ ಅವರು ಪುಟಿದೆದ್ದರೂ, ಬ್ರಾಂಡ್ಸ್ ಅವರಿಂದ ಹೆಚ್ಚು ವಿರೋಧ ಎದುರಿಸಬೇಕಾಯಿತು. ಆದರೂ ಪಟ್ಟುಬಿಡದ ನಡಾಲ್, ಆ ಸೆಟ್ನಲ್ಲಿ ಜಯ ಕಂಡುಕೊಂಡರು.
ಆದರೆ, ಮೂರನೇ ಸೆಟ್ ನಲ್ಲಿ ನಡಾಲ್ ಕೈ ಮೇಲಾಯಿತು. 6-4 ಅಂತರದಲ್ಲಿ ಸುಲಭದಲ್ಲಿ ಬ್ರಾಂಡ್ಸ್ ಅವರನ್ನು ಮಣಿಸಿದ ನಡಾಲ್, ಅದರ ಮುಂದಿನ ಸೆಟ್ ನಲ್ಲೂ 6-3 ಅಂತರದಲ್ಲಿ ಜಯ ಕಂಡುಕೊಂಡರು.
ಲೀ ಗೆಲವು: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ, ಸ್ಪೇನ್ನ ಅನಾಬೆಲ್ ಮೆಡಿನಾ ವಿರುದ್ಧ ಸೆಣೆಸಿದ 6ನೇ ಶ್ರೇಯಾಂಕದ ಲೀ ನಾ, ಪಂದ್ಯದಲ್ಲಿ 6-3, 6-4 ಅಂತರದಲ್ಲಿ ಜಯ ಸಾಧಿಸಿದರು. ಪಂದ್ಯದ ಆರಂಭದಿಂದಲೂ ಎದುರಾಳಿ ವಿರುದ್ಧ ಹಿಡಿತ ಸಾಧಿಸಿದ್ದ ಲೀ, ಮೊದಲ ಸೆಟ್ನಲ್ಲಿ 6-3 ಅಂತರದ ಜಯ ಕಂಡುಕೊಂಡರು.
ಆದರೆ, ದ್ವಿತೀಯ ಸೆಟ್ನಲ್ಲಿ ಮೆಡಿನಾ ಅವರು ಕೊಂಚ ಪ್ರತಿರೋಧ ತೋರಿದರು. ಉತ್ತಮವಾಗಿ ಆಡಿದ ಮೆಡಿನಾ, ಪ್ರತಿಯೊಂದು ಹಂತದಲ್ಲೂ ಲೀ ಅವರಿಗೆ ಸವಾಲೆಸೆದರು. ಆದರೆ, ತಮ್ಮ ಮೇಲೆ ಹಿಡಿತ ಸಾಧಿಸಲು ಲೀ ಅವಕಾಶ ಕೊಡಲಿಲ್ಲ. ಅಂತಿಮವಾಗಿ, ಲೀ ಅವರೇ ಆ ಸೆಟ್ನಲ್ಲಿ 6-4 ಅಂತರದಲ್ಲಿ ಜಯ ಸಾಧಿಸುವ ಮೂಲಕ, ಪಂದ್ಯದಲ್ಲೂ ಗೆಲವು ಪಡೆದರು.
ಸೋಂಗಾಗೆ ಜಯ: ಪುರುಷರ ಸಿಂಗಲ್ಸ್ ಸೋಮವಾರ ನಡೆದ ಪಂದ್ಯದಲ್ಲಿ ಸ್ಲೊವೇನಿಯಾದ ಅಲಿಯಾಜ್ ಬೆಡೆನೆ ವಿರುದ್ಧ ಸೆಣೆಸಿದ ಫ್ರಾನ್ಸ್ನ ಜೋ-ವಿಲ್ ಫ್ರೆಂಡ್ ಸೋಂಗಾ ಅವರು, 6-2, 6-2, 6-3 ಅಂತರದಲ್ಲಿ ಜಯ ಸಾಧಿಸಿದರು.
ಪಂದ್ಯದ ಆರಂಭದ ಸೆಟ್ನಲ್ಲಿ ಉತ್ತಮವಾದ ಪ್ರದರ್ಶನ ನೀಡಿದ ಸೋಂಗಾ ಅವರು, ಆ ಸೆಟ್ನಲ್ಲಿ 6-2ರ ಸುಲಭ ಜಯ ಕಂಡುಕೊಂಡರು. ಆದರೆ, ದ್ವಿತೀಯ ಸೆಟ್ನಲ್ಲಿ ಬೆಡೆನೆ ಅವರು ತಿರುಗಿಬೀಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ದ್ವಿತೀಯ ಸೆಟ್ನಲ್ಲೂ ಉತ್ತಮ ಪ್ರದರ್ಶನ ನೀಡಿದ ಸೋಂಗಾ ಅವರು ಆ ಸೆಟ್ನಲ್ಲೂ ಜಯಗಳಿಸಿ ಬೆಡೆನೆ ಬಗ್ಗೆ ಇದ್ದ ನಿರೀಕ್ಷೆಯನ್ನು ಹುಸಿಗೊಳಿಸಿದರು. ಆದರೆ, ಮೂರನೇ ಸೆಟ್ನಲ್ಲಿ ಬೆಡೆನೆ ಅವರು ಕೊಂಚ ಸವಾಲಾಗಿ ಪರಿಣಮಿಸಿದರು. ಆದರೆ, ಅವರ ಆಟ ಸೋಂಗಾ ಮುಂದೆ ನಡೆಯಲಿಲ್ಲ. ಆರಂಭದ ಎರಡೂ ಸೆಟ್ಗಳಲ್ಲಿ ಅನಾಯಾಸವಾಗಿ ಜಯ ಕಂಡಿದ್ದ ಸೋಂಗಾ, ಬೆನೆಡೆಗೆ ಮಣ್ಣು ಮುಕ್ಕಿಸುವಲ್ಲಿ ಯಶಸ್ವಿಯಾದರು.
ರಾಡ್ವಾಸ್ಕಾಗೆ ಜಯ: ಮಹಿಳೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಪೋರ್ಚುಗೀಸ್ನ ಅಗ್ನಿಸ್ವಾ ರಾಡ್ವಾಂಸ್ಕಾ, ಇಸ್ರೇಲ್ನ ಶಾಹರ್ ಪೀರ್ ವಿರುದ್ಧ 6-1, 6-1 ಸೆಟ್ಗಳ ಅಂತರದಲ್ಲಿ ಜಯ ಗಳಿಸಿದರು.
ಪಂದ್ಯದ ಆರಂಭದಿಂದಲೂ ಉತ್ತಮವಾಗಿ ಆಡಿದ ರಾಡ್ವಾಂಸ್ಕಾ ಅವರ ಆಟದ ಮುಂದೆ ಪೀರ್ ಅವರ ಆಟ ಸಪ್ಪೆಯಾಗಿತ್ತು. ಆಕ್ರಮಣಕಾರಿ ಆಟವನ್ನು ಆರಂಭದಿಂದಲೂ ಪ್ರದರ್ಶಿಸಿದ ರಾಡ್ವಾಂಸ್ಕಾ ಅವರಿಗೆ ಪಂದ್ಯದ ಯಾವ ಹಂತದಲ್ಲೂ ಪೀರ್ ಪ್ರತಿರೋಧ ತೋರಲೇ ಇಲ್ಲ. ಪೀರ್ ಅವರ ದುರ್ಬಲ ಆಟದ ಲಾಭ ಪಡೆದ ರಾಡ್ವಾಂಸ್ಕಾ, ಮೊದಲ ಸೆಟ್ನಲ್ಲಿ 6-1ರ ಅಂತರದಲ್ಲಿ ಜಯಗಳಿಸಿದರು. ಇನ್ನು, ಎರಡನೇ ಸೆಟ್ನಲ್ಲೂ ಇದು ಪುನರಾವರ್ತನೆಯಾಯಿತು. ಎರಡನೇ ಸೆಟ್ನಲ್ಲೂ 6-1ರ ಅಂತರದಲ್ಲೇ ಜಯಗಳಿಸಿದ ರಾಡ್ವಾಂಸ್ಕಾ ಪಂದ್ಯದಲ್ಲಿ ಜಯಶಾಲಿಯಾಗಿ, ದ್ವಿತೀಯ ಸುತ್ತಿಗೆ ಕಾಲಿಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


