ಫಿಕ್ಸಿಂಗ್: 12ಕ್ಕೂ ಹೆಚ್ಚು ಜನರ ಬಂಧನ
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ಹಾಗೂ ಗೋವಾ ಪೊಲೀಸರು ಸೋಮವಾರ ಪ್ರತ್ಯೇಕವಾಗಿ ನಡೆಸಿರುವ ಕಾರ್ಯಾಚರಣೆಗಳಲ್ಲಿ ಒಟ್ಟು 12 ಜನರು ಬಂಧಿತರಾಗಿದ್ದಾರೆ. ಪಾಟ್ನಾದಲ್ಲಿ 6 ಬುಕಿಗಳನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರೆ, ಗೋವಾದಲ್ಲೂ 6 ಜನ ಬುಕ್ಕಿಗಳು ಸಿಕ್ಕಿಬಿದ್ದಿದ್ದಾರೆ.
ಪಾಟ್ನಾ ಕಾರ್ಯಾಚರಣೆ: ಇಲ್ಲಿನ ಪಾಟಲೀಪುರ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ನೆಹರೂ ನಗರದ ಮನೆಯೊಂದರ ಮೇಲೆ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ ಪೊಲೀಸರು ಒಟ್ಟು 6 ಬುಕ್ಕಿಗಳನ್ನು ಬಂಧಿಸಿದರು. ಬಂಧಿತರನ್ನು ಬಿಪಿನ್ ಕುಮಾರ್, ನೀರಜ್ ಕುಮಾರ್, ಗೌರವ್ ಕುಮಾರ್, ವಿಕಾಸ್ ಕುಮಾರ್, ಅಮಿತ್ ಕುಮಾರ್ ಹಾಗೂ ಧೀರಜ್ ಕುಮಾರ್ ಎಂದು ಗುರುತಿಸಲಾಗಿದೆ. ಅಲ್ಲದೇ, ಬಂಧಿತರಿಂದ, ರು. 1.67 ಕೋಟಿ ನಗದು ಹಾಗೂ ಐಪಿಎಲ್ ಪಂದ್ಯಗಳ ವೇಳಾಪಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ.
ಗೋವಾ ಕಾರ್ಯಾಚರಣೆ: ಐಪಿಎಲ್ ಬೆಟ್ಟಿಂಗ್ನಲ್ಲಿ ಭಾಗವಹಿಸಿದ್ದರೆಂಬ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. ಪಣಜಿಯಿಂದ ಸುಮಾರು 9 ಕಿ.ಮೀ. ದೂರದಲ್ಲಿರುವ ಕ್ಯಾಂಡೋಲಿಮ್ ಎಂಬ ಪ್ರಾಂತ್ಯದಲ್ಲಿದ್ದ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದ ಈ ಬುಕ್ಕಿಗಳು ಅಲ್ಲೇ ಕೆಲ ದಿನಗಳಿಂದ ವಾಸ್ತವ್ಯ ಹೂಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಪಾರೇಖ್ ಆಸೋಕೋಟಾ, ಚೇತನ್ ಚಾವ್ಡಾ, ರಿತೇಶ್ ಪಟೇಲ್, ಅಮಿತ ಥಾಪಟ್, ಸಂದೀಪ್ ಅಸರ್ಕೋಟಾ ಹಾಗೂ ನಿಕುಂಜ್ ಲಲಾನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮುಂಬೈ ಮೂಲದವರೇ ಆಗಿದ್ದು, ಕ್ಯಾಂಡೋಲಿಮ್ ಪ್ರಾಂತ್ಯದಲ್ಲಿನ ಮನೆಯೊಂದನ್ನು ತಿಂಗಳಿಗೆ ರು. 2 ಲಕ್ಷ ಬಾಡಿಗೆಗೆ ಪಡೆದು ಅಲ್ಲಿ ವಾಸ್ತವ್ಯ ಹೂಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 24 ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು, ಐ ಪ್ಯಾಡ್ಗಳು ಹಾಗೂ ದೊಡ್ಡ ಮೊತ್ತದ ನಗದನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಂಬೈನಲ್ಲೂ ಬಂಧನ: ಏತನ್ಮಧ್ಯೆ, ಮುಂಬೈನಲ್ಲೂ ಐಪಿಎಲ್ ಸ್ಪಾಟ್ ಫಿಕ್ಸಿಂಗ್ಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಇವರ ಮೊಬೈಲ್ ಕರೆಗಳ ತನಿಖೆಯನ್ನು ಕೈಗೊಳ್ಳಲಾಗಿದ್ದು, ಪಾಕಿಸ್ತಾನಕ್ಕೆ ಇವರು ಪದೇ ಪದೇ ಕರೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಮೂವರ ಬಂಧನ: ಬಂಧಿತ ಬುಕ್ಕಿಯೊಬ್ಬ ನೀಡಿದ್ದ ಆಧಾರದ ಮೇರೆಗೆ ಮೂವರು ಬುಕ್ಕಿಗಳನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇತ್ತೀಚೆಗೆ, ದೇಶ ಬಿಟ್ಟು ಪರಾರಿಯಾಗಲು ಯತ್ನಿಸಿದ್ದ ಬುಕ್ಕಿ ಮಹಮ್ಮದ್ ಯಾಹ್ಯಾ ಎಂಬಾತನನ್ನು ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದರು. ಆತ, ಬಾಯಿಬಿಟ್ಟ ಮಾಹಿತಿಯ ಆಧಾರದಲ್ಲಿ ದೆಹಲಿ ಪೊಲೀಸರು ಸೋಮವಾರ ಮೂವರು ಬುಕ್ಕಿಗಳನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

