ಕ್ರೀಡೆ

ಧೋನಿ... ಫಿಕ್ಸಿಂಗ್ ಬಗ್ಗೆ ಮೌನಿ!

ಧೋನಿ... ಫಿಕ್ಸಿಂಗ್ ಬಗ್ಗೆ ಮೌನಿ!
Published On :

ಮುಂಬೈ: ಅಬ್ಬಾ... ಅಂತೂ ಇಂತೂ ಧೋನಿ ದರುಶನವಾಯ್ತು... ಸ್ಪಾಟ್ ಫಿಕ್ಸಿಂಗ್ ಬಗ್ಗೆ ಹೊಟ್ಟೆಯಲ್ಲಿ ಅಡಗಿಸಿಕೊಂಡಿದ್ದ ಪ್ರಶ್ನೆಗಳನ್ನೆಲ್ಲಾ ಧೋನಿ ಮುಂದೆ ಒಮ್ಮೆಗೇ ಕಕ್ಕಿ ಉತ್ತರ ಪಡೆಯಬೇಕು... ಅಂತೂ ಇಂತೂ ಕ್ರೀಡಾಪುಟಕ್ಕೆ ದೊಡ್ಡದೊಂದು ಸುದ್ದಿಯಾಗೋದಂತೂ ನಿಜ... - ಅಂತೆಲ್ಲಾ ಕನಸು ಕಾಣುತ್ತಿದ್ದ ಬುಧವಾರ ಭ್ರಮನಿರಸನವಾಯಿತು.
ವಿಷಯ ಇಷ್ಟೇ... ಜೂ. 6ರಿಂದ ಆರಂಭಗೊಳ್ಳುತ್ತಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಬುಧವಾರ ತಡರಾತ್ರಿ ಇಂಗ್ಲೆಂಡ್‌ಗಾಗಿ ಪ್ರಯಾಣ ಬೆಳೆಸಿತು. ಈ ಹಿನ್ನೆಲೆಯಲ್ಲಿ, ಬುಧವಾರ ಸಂಜೆ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು.  
ಸ್ಪಾಟ್ ಫಿಕ್ಸಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಗುರುನಾಥ್ ಮೇಯಪ್ಪನ್ ಬಂಧನವಾದ ಮೇಲಂತೂ ಧೋನಿ ಕೈಗೇ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ, ಬುಧವಾರ ಸುದ್ದಿಗೋಷ್ಠಿ ನಿಗದಿಯಾದ ಹಿನ್ನೆಲೆಯಲ್ಲಿ ಒಂದು ದೊಡ್ಡ ಸುದ್ದಿಗಾಗಿ ಎಲ್ಲರೂ ಕಾಯುತ್ತಿದ್ದರು. ಆದರೆ, ಧೋನಿ ಎಲ್ಲರನ್ನೂ ನಿರಾಸೆಗೊಳಿಸಿದರು.
ಪತ್ರಿಕಾಗೋಷ್ಠಿ ತುಂಬೆಲ್ಲಾ, ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಹೊರತಾಗಿ ಮತ್ಯಾವುದರ ಬಗ್ಗೆಯೂ ತುಟಿಪಿಟಕ್ಕೆನ್ನಲಿಲ್ಲ.
ಚಾಂಪಿಯನ್ಸ್ ಟ್ರೋಫಿ ಹಿನ್ನೆಲೆಯಲ್ಲಿ ಮಾತನಾಡಿದ ಧೋನಿ, ಟೀಂ ಇಂಡಿಯಾ ಸಮತೋಲಿತ ತಂಡವಾಗಿದ್ದು, ಈ ಬಾರಿ ಪಂದ್ಯಾವಳಿಯನ್ನು ಗೆಲ್ಲುವ ಸಾಮರ್ಥ್ಯವುಳ್ಳದ್ದಾಗಿದೆ ಎಂದರು.
ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಇಶಾಂತ್ ಶರ್ಮಾ ಅವರು ಐಪಿಎಲ್‌ನಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಅವರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ತೋರುವ ಅವಕಾಶ ಸಿಗಲಿದೆ ಎಂದರು.
ಆರಂಭಿಕರಾಗಿರುವ ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಅವರು ಈ ಹಿಂದೆ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಏಕದಿನ ಪಂದ್ಯಗಳಲ್ಲಿ ಆಡುವುದು ಬೇರೆಯದ್ದೇ ರೀತಿಯಾಗಿರುತ್ತದೆ. ಆದ್ದರಿಂದ, ಅವರಿಗೂ ತಮ್ಮ ಸಾಮರ್ಥ್ಯ ತೋರಿಸಲು ಮತ್ತೊಂದು ಅವಕಾಶ ಸಿಗಲಿದೆ' ಎಂದು ಧೋನಿ ಹೇಳಿದರು.
ಏಕದಿನ ಪಂದ್ಯಗಳ ನಿಮಯಗಳನ್ನು ಐಸಿಸಿ ಮಾರ್ಪಾಟು ಮಾಡಿದ ನಂತರ ಇದೇ ಮೊದಲ ಬಾರಿಗೆ ನಾವು ಏಷ್ಯಾ ಉಪಖಂಡವನ್ನು ದಾಟಿ ಹೊರ ದೇಶದಲ್ಲಿ ಪಂದ್ಯಾವಳಿಯೊಂದನ್ನು ಆಡುತ್ತಿದ್ದೇವೆ.
ಪ್ರತಿಯೊಂದು ಪಂದ್ಯವೂ ನಮಗೆ ಮಹತ್ವದ್ದೇ. ಅದರಲ್ಲೂ ಪಾಕಿಸ್ತಾನ ವಿರುದ್ಧದ ಪಂದ್ಯವಂತೂ ನಮಗೆ ಪ್ರಮಖವಾದದ್ದು ಎಂದರು.  ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಧೋನಿ, 'ಕಳೆದ ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ, ಟೆಸ್ಟ್ ಹಾಗೂ ಏಕದಿನ ಎರಡರಲ್ಲೂ ಸರಿಯಾದ ಪ್ರದರ್ಶನ ನೀಡಿರಲಿಲ್ಲ.
ಆಗ ಅಲ್ಲಿ ಮಳೆ ಸುರಿಯುತ್ತಿದ್ದುದು ನಮಗೆ ವ್ಯತಿರಿಕ್ತವಾಗಿ ಪರಿಣಮಿಸಿತ್ತು. ಆದರೆ, ಈ ಬಾರಿ ಹಾಗಾಗುವುದಿಲ್ಲ ಎಂಬ ನಂಬಿಕೆಯಿದೆ. ತಂಡವೂ ಸಮತೋಲಿತವಾಗಿರುವುದರಿಂದ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ' ಎಂದು ಅವರು ಹೇಳಿದರು.
ಗ್ರೂಪ್ 'ಬಿ'ನಲ್ಲಿ ಸ್ಥಾನ: ಪಂದ್ಯಾವಳಿಯಲ್ಲಿ ಭಾರತ ತಂಡ, ಗ್ರೂಪ್ 'ಬಿ'ಯಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಭಾರತದೊಂದಿಗೆ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳಿವೆ. ಜೂ. 15ರಂದು ಭಾರತ-ಪಾಕಿಸ್ತಾನಗಳು ಸೆಣಸಲಿವೆ.

ಪಟ್ಟು ಬಿಡಲು ಸಿದ್ಧರಿರಲಿಲ್ಲ...
ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ಫಿಕ್ಸಿಂಗ್ ಬಗ್ಗೆ ಧೋನಿ ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ಸುಮ್ಮನೇ ಅವರು ಹೇಳಿದ್ದನ್ನೆಲ್ಲಾ ಗೀಚಿಕೊಂಡು ಬರಲು ಪತ್ರಕರ್ತರೂ ಸಿದ್ಧರಿರಲಿಲ್ಲ. ಪತ್ರಿಕಾಗೋಷ್ಠಿ ಆರಂಭವಾದ ನಂತರ, ಧೋನಿ ಮೊದಲು ಮಾತನಾಡಿದರು. ಅವರ ಮಾತು ಮುಗಿಯುತ್ತಿದ್ದಂತೇ ಪತ್ರಕರ್ತರ ಕಡೆಯಿಂದ ಫಿಕ್ಸಿಂಗ್ ಬಗ್ಗೆ ಪ್ರಶ್ನೆಗಳು ಬರತೊಡಗಿದವು. ಇದರಿಂದ ಧೋನಿ ಕುಳಿತಲ್ಲೇ ಕೊಂಚ ಗಲಿಬಿಲಿಯಾದಂತೆ ಕಂಡುಬಂದರು. ಆದರೆ, ಈ ಸಂದರ್ಭದಲ್ಲಿ ಧೋನಿಗೆ ಸಹಾಯ ಮಾಡಿದ್ದು ಟೀಂ ಇಂಡಿಯಾ ವ್ಯವಸ್ಥಾಪಕ ಆರ್.ಎನ್. ಬಾಬಾ.  ಪತ್ರಕರ್ತರು ಫಿಕ್ಸಿಂಗ್ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾಗ ಮಧ್ಯ ಪ್ರವೇಶಿಸಿದ ಬಾಬಾ, ಚಾಂಪಿಯನ್ಸ್ ಟ್ರೋಫಿ ಬಗ್ಗೆ ಮಾತ್ರ ತಮ್ಮ ಪ್ರಶ್ನೆಗಳನ್ನು ಸೀಮಿತಗೊಳಿಸಬೇಕೆಂದು ಪತ್ರಕರ್ತರಲ್ಲಿ ಮನವಿ ಮಾಡಿದರು. ಆನಂತರವೂ, ಕೆಲ ಪತ್ರಕರ್ತರು ಪ್ರಯತ್ನಿಸಿದರಾದರೂ, ಬಾಬಾ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಕೊನೆಗೆ ಸೌಜನ್ಯ ಮೀರಬಾರೆಂದೆಂಬ ಉದ್ದೇಶದಿಂದ ಪತ್ರಕರ್ತರು ಸುದ್ದಿಗೋಷ್ಠಿಯನ್ನು ಚಾಂಪಿಯನ್ಸ್ ಟ್ರೋಫಿ ಬಗ್ಗೆ ಮಾತ್ರ ಸೀಮಿತಗೊಳಿಸಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.