ಕ್ರೀಡೆ

ಮೇಯಪ್ಪನ್ ಬಂಧನಾವಧಿ ವಿಸ್ತರಣೆ

ಮೇಯಪ್ಪನ್ ಬಂಧನಾವಧಿ ವಿಸ್ತರಣೆ
Published On :

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಗುರುನಾಥ್ ಮೇಯಪ್ಪನ್ರವರ ಪೊಲೀಸ್ ಕಸ್ಟಡಿಯನ್ನು ಮೇ 31ರವರೆಗೆ ವಿಸ್ತರಿಸಿ ಇಲ್ಲಿನ ಹೆಚ್ಚುವರಿ ಮೆಟ್ರೋಪಾಲಿಟನ್ ನ್ಯಾಯಾಲಯ ಆದೇಶ ನೀಡಿದೆ.
ಬಂಧನಾವಧಿ ಹೆಚ್ಚಿಸಲು ಅರ್ಜಿ ಸಲ್ಲಿಸಿದ್ದ ಮುಂಬೈ ಪೊಲೀಸ್ನ ಕ್ರೈಂ ಬ್ರಾಂಚ್ ಅಧಿಕಾರಿಗಳು, 'ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ವಿಂದೂ ದಾರಾಸಿಂಗ್ ಅವರೊಂದಿಗೆ ಗುರುನಾಥ್ ಹೊಂದಿದ್ದ ನಂಟಿನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಈ ಇಬ್ಬರೊಂದಿಗೆ ಚೆನ್ನೈನಲ್ಲಿನ ಹೋಟೇಲೊಂದರ ಮಾಲೀಕರಾದ ವಿಕ್ರಮ್ ಅಗರ್ವಾಲ್ ಅವರನ್ನೂ ವಿಚಾರಣೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ, ಮೇಯಪ್ಪನ್ ಅವರ ಬಂಧನಾವಧಿಯನ್ನು ವಿಸ್ತರಿಸಬೇಕೆಂದು' ನ್ಯಾಯಾಲಯವನ್ನು ಕೋರಿದ್ದರು.  
ಕೋಡ್ವರ್ಡ್ ಬಳಕೆ: ಮೇಯಪ್ಪನ್ ಅವರ ಬಂಧನಾವಧಿಯನ್ನು ವಿಸ್ತರಿಸುವಂತೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ, ಮುಂಬೈ ಪೊಲೀಸ್ ಬಂಧನ ವಿಸ್ತರಣೆಯ ಅವಶ್ಯಕತೆಯನ್ನು ವಿವರಿಸಿತ್ತು.
ಮೇಯಪ್ಪನ್ ಹಾಗೂ ವಿಂದೂ ಇಬ್ಬರೂ ದೂರವಾಣಿ ಸಂಭಾಷಣೆಯಲ್ಲಿ ಮಾತನಾಡುವಾಗ ಕೆಲವೊಂದು ಗುಪ್ತಪದ (ಕೋಡ್ವರ್ಡ್)ಗಳನ್ನು ಬಳಸಿ ಮಾತನಾಡಿದ್ದು ಬೆಳಕಿಗೆ ಬಂದಿದೆ. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡುತ್ತಿದ್ದ ಪ್ರತಿಯೊಂದು ಪಂದ್ಯಗಳ ಮುನ್ನವೇ ತಂಡದ ಆಂತರಿಕ ಮಾಹಿತಿಯನ್ನು ಮೇಯಪ್ಪನ್, ವಿಂದೂ ಜತೆ ಹಂಚಿಕೊಳ್ಳುತ್ತಿದ್ದು ಸ್ಪಷ್ಟವಾಗಿದೆ. ಇದರ ಬಗ್ಗೆ ಹೆಚ್ಚಿನ ತನಿಖೆಯಾಗಬೇಕು ಎಂದು ಪೊಲೀಸರು ಅರ್ಜಿಯಲ್ಲಿ ವಿವರಿಸಿದ್ದರು.
ಪೊಲೀಸರು ವಿವರಿಸಿದ್ದ ಮತ್ತೊಂದು ಕಾರಣವೆಂದರೆ, ವಿಂದೂ ಹಾಗೂ ಇತರ ಬುಕ್ಕಿಗಳೊಂದಿಗೆ ಮಾತನಾಡಲು ಮೇಯಪ್ಪನ್ ಬಳಸುತ್ತಿದ್ದ ದೂರವಾಣಿ ಸಂಖ್ಯೆ ಅವರ ಬಳಿ ಕೆಲಸ ಮಾಡುತ್ತಿರುವ ಕಮಲ್ನಾಥ್ ಎಂಬುವರ ಹೆಸರಿನಲ್ಲಿದ್ದು, ಈ ಬಗ್ಗೆಯೂ ಹೆಚ್ಚಿನ ವಿಚಾರಣೆ ನಡೆಸಬೇಕಿದೆ ಎಂದು ಮುಂಬೈ ಪೊಲೀಸರು ನ್ಯಾಯಾಲಯದಲ್ಲಿ ಕೋರಿದ್ದರು.
ಪ್ರತಿವಾದ: ಆದರೆ, ಮೇಯಪ್ಪನ್ ಪರವಾಗಿ ವಾದ ಮಂಡಿಸಿದ ಡಿಫೆನ್ಸ್ ವಕೀಲ ಹರ್ಷದ್ ಪೊಂಡಾ ಅವರು, ತನಿಖೆ ಮುಂದುವರೆಸಲು ಯಾವುದೇ ಅಡ್ಡಿಯಿಲ್ಲ. ಮೇಯಪ್ಪನ್ ಅವರನ್ನು ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಿಯೂ ತನಿಖೆಯನ್ನು ಮುಂದುವರೆಸಬಹುದು ಎಂದು ನ್ಯಾಯಾಧೀಶರ ಮನವೊಲಿಸಲು ಪ್ರಯತ್ನಿಸಿದ್ದರು.
ಆದರೆ, ಪ್ರತಿವಾದವನ್ನು ತಳ್ಳಿಹಾಕಿದ ನ್ಯಾಯಾಧೀಶ ಎ.ಎಂ. ಪದ್ವಾಡ್ ಅವರು, 'ತನಿಖೆಯು ಕೆಲವೊಂದು ಮಹತ್ತರ ತಿರುವುಗಳನ್ನು ಪಡೆಯುತ್ತಿದೆ. ಈ ಸಂದರ್ಭದಲ್ಲಿ, ಮೇಯಪ್ಪನ್ ಅವರ ವಿಚಾರಣೆ ಹೆಚ್ಚು ಪ್ರಾಮುಖ್ಯತೆ ಪಡೆಯುವುದರಿಂದ ಅವರ ಬಂಧನಾವಧಿಯನ್ನು ವಿಸ್ತರಿಸುವ ಅವಶ್ಯಕತೆಯಿದೆ' ಎಂದು ಹೇಳಿ, ಮೇಯಪ್ಪನ್ ಅವರನ್ನು ಮೇ 31ರವರೆಗೆ ಪೊಲೀಸ್ ಬಂಧನದಲ್ಲಿ ಮುಂದುವರೆಸಲು ಅವಕಾಶ ನೀಡಿದರು.
ಸಮನ್ಸ್: ಚೆನ್ನೈನಲ್ಲಿನ ರ್ಯಾಡಿಸನ್ ಬ್ಲೂ ಎಂಬ ಹೋಟೇಲಿನ ಮಾಲೀಕ ವಿಕ್ರಮ್ ಅಗರ್ವಾಲ್ ಅವರಿಗೆ ಮೇ 31ರೊಳಗೆ ವಿಚಾರಣೆಗಾಗಿ ಹಾಜರಾಗುವಂತೆ ಮುಂಬೈ ಪೊಲೀಸ್ ಈಗಾಗಲೇ ಸಮನ್ಸ್ ಜಾರಿಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.