ಕ್ರೀಡೆ

ನಿವೃತ್ತಿಯ ನರಕ

ನಿವೃತ್ತಿಯ ನರಕ
Published On :

ಮನುಷ್ಯ ಜೀವನದಲ್ಲಿ ಸಾಯುವುದು ಒಮ್ಮೆ. ಆದರೆ, ಕ್ರೀಡಾ ತಾರೆಗಳು ಎರಡು ಬಾರಿ ಸಾಯುತ್ತಾರಂತೆ. ಕ್ರೀಡೆಗೆ ನಿವೃತ್ತಿ ಹೇಳಿದಾಗಲೇ ಕ್ರೀಡಾ ಸಾಧಕನ ಮೊದಲ ಸಾವು ಘಟಿಸುತ್ತದೆ! ವಿಶ್ವದ ಅಗ್ರಮಾನ್ಯ ಕ್ರೀಡಾಪಟುಗಳು ಹೀಗೊಂದು ವಿಶೇಷ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುತ್ತಾರೆ. ಅವರ ವಿಶೇಷ ವ್ಯಕ್ತಿತ್ವಕ್ಕೆ ಮಾರು ಹೋಗುವ ಅಭಿಮಾನಿಗಳ ದೇವರುಗಳೆಂಬ ಗುಂಪುಗಳೇ ಹುಟ್ಟಿಕೊಳ್ಳುತ್ತವೆ. ಮೇರು ಕ್ರೀಡಾಪಟುಗಳು ನಿವೃತ್ತಿ ಅಂಚು ತಲುಪುವ ವರೆಗೂ ಅಭಿಮಾನಿಗಳ ಗುಂಪು ಅವರ ಹೆಸರನ್ನು ಪಠಿಸುತ್ತ, ಬಾನೆತ್ತರದ ಘೋಷಣೆಗಳನ್ನು ಕೂಗುತ್ತಲೇ ಇರುತ್ತದೆ. ನಿವೃತ್ತಿ ಹೇಳಿದ ತಕ್ಷಣ ಅದ್ಯಾವುದೂ ಇಲ್ಲವಾದಾಗ, ಸಹಜವಾಗಿಯೇ ಕ್ರೀಡಾಪಟುವಿಗೆ ತಾನು ನಿರ್ಜೀವ ವ್ಯಕ್ತಿ ಎಂಬ ಭಾವನೆಗಳು ಪುಟಿದೇಳುತ್ತವೆ. ಇದು ವೃತ್ತಿ ಜೀವನದುದ್ದಕ್ಕೂ ವೈಭವದಿಂದ ಮೆರೆದು, ಉತ್ತುಂಗದ ಶಿಖರವೇರಿದರೂ, ನಿವೃತ್ತಿ ವಿಷಯಕ್ಕೆ ಬಂದಾಗ ಮಾತ್ರ ಕ್ರೀಡಾಪಟುವೊಬ್ಬನನ್ನು ಗರಬಡಿದವನಂತಾಗಿಸಿಬಿಡುತ್ತದೆ. ತಾನು ನಿವೃತ್ತಿ ಅಂಚು ತಲುಪಿದ್ದು ಗೊತ್ತಿದ್ದರೂ, ನಿವೃತ್ತಿಯನ್ನು ಮುಂದಕ್ಕೆ ಹಾಕುತ್ತಲೇ ಹೋಗುತ್ತಾನೆ.

ಖ್ಯಾತನಾಮರನ್ನೂ ಬಿಟ್ಟಿಲ್ಲ
ನಿವೃತ್ತಿ ಎಂಬ ಭೀತಿ ಎಂಥ ದೊಡ್ಡ ಸಾಧನೆ ಮಾಡಿದ್ದೇನೆ ಎಂಬ ಜಗದ್ವಿಖ್ಯಾತನನ್ನೂ ಬಿಡೋದಿಲ್ಲ. ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ನಿವೃತ್ತಿ ಘೋಷಿಸಿದ ನಂತರವೂ ಮತ್ತೆ ವಾಪಸಾಗಿದ್ದ ಖ್ಯಾತ ಎಫ್-1 ಚಾಲಕ ಮೈಕಲ್ ಶೂಮಾಕರ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಹಲವು ವರ್ಷಗಳ ನಂತರವೂ ಐಪಿಎಲ್‌ನಲ್ಲಿ ಆಡಲು ಹಪಹಪಿಸಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಅಷ್ಟೇ ಏಕೆ? ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ ಎನಿಸಿರುವ ಎಲ್ಲರಿಗಿಂತಲೂ ಹೆಚ್ಚಿನ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡ ಸಚಿನ್ ತೆಂಡೂಲ್ಕರ್ ಇತ್ತೀಚೆಗಷ್ಟೇ ಮುಂಬೈನ ವಾಂಖೆಡೆಯಲ್ಲಿ 40ನೇ ವಯಸ್ಸಿನಲ್ಲಿ ನಿವೃತ್ತಿ ಹೇಳುವಾಗ ಅಲ್ಲಿನ ಪಿಚ್‌ಗೆ ನಮಸ್ಕರಿಸಿ ಕಣ್ಣೀರು ಸುರಿಸಿದ ಘಟನೆ, ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಇನ್ನೂ ಮಾಸಿಲ್ಲ. ಇಂಥ ದೊಡ್ಡ ದೊಡ್ಡ ಕ್ರೀಡಾಪಟುಗಳೇ ನಿವೃತ್ತಿ ಹೇಳುವಾಗಿ ಭಾವುಕರಾಗಿ ಕಣ್ಣೀರಿಡುತ್ತಾರೆಂದರೆ ನಿವೃತ್ತಿ ಒಂದು ಯಮಯಾತನೆ ಅನಿಸುವುದಿಲ್ಲವೇ?

ಕ್ರೀಡೆಯೊಂದಿಗೆ ಭಾವನಾತ್ಮಕ ನಂಟು
ನಿವೃತ್ತಿ ಹೇಳಿದ ನಂತರ ಪ್ರತಿಯೊಬ್ಬ ಕ್ರೀಡಾಪಟುವಿಗೂ ವಿಭಿನ್ನ ಮಾದರಿಯ ಸಮಸ್ಯೆಗಳು ಕಾಡಬಹುದು. ಆದರೆ, ಸಚಿನ್ ತೆಂಡೂಲ್ಕರ್‌ರಂಥ ಕ್ರೀಡಾಪಟುಗಳು ಸಾಕಷ್ಟು ಹಣ, ಸಂಪತ್ತು ಹಾಗೂ ಹೆಸರನ್ನೂ ಮಾಡಿರುತ್ತಾರೆ. ಅವರನ್ನು ಕಾಡುವ ಸಮಸ್ಯೆಗಳು ಅವಲ್ಲ. ಕ್ರೀಡೆ ಮತ್ತು ಅವರ ನಡುವೆ ಬೆಸೆದ ಭಾವನಾತ್ಮಕ ಸಂಬಂಧ. ಈ ಸಂಬಂಧ ಹಣ ಮತ್ತು ಹೆಸರಿಗಿಂತ ದೊಡ್ಡದು. ಸಚಿನ್, ಗಂಗೂಲಿ ಹಾಗೂ ದ್ರಾವಿಡ್‌ರಂಥ ಮಹಾನ್ ಕ್ರೀಡಾಪಟುಗಳು ಈ ಭಾವನಾತ್ಮಕ ಬೆಸುಗೆಯನ್ನು ಕಡಿದುಕೊಳ್ಳುವಾಗ ಆಗುವ ನೋವನ್ನು ತಾಳಲಾರದೆ ಒದ್ದಾಡುತ್ತಾರೆ. ಕ್ರೀಡೆಗೆ ತಮ್ಮನ್ನು ಇಡಿಯಾಗಿ ಸಮರ್ಪಿಸಿಕೊಂಡ ಕ್ರೀಡಾಪಟುಗಳಿಗಷ್ಟೇ ಈ ನೋವು ಅರ್ಥವಾಗುತ್ತದೆ.

ಅದೊಂದು ಕೂರಗು
ವೃತ್ತಿಬದುಕಿನ ಉತ್ತಂಗದಲ್ಲಿದ್ದಾಗ ಮಾಡಿದ ಸಾಧನೆಯ ವೈಭವದ ಪ್ರತೀಕವಾಗಿ ಸಾವಿರಾರು ಕೈಗಳು ಚಪ್ಪಾಳೆ ತಟ್ಟುತ್ತವೆ. ಸಾವಿರಾರು ಅಭಿಮಾನಿಗಳು ಘೋಷಣೆ ಕೂಗುತ್ತಾರೆ. ಇಂಥ ಗಳಿಗೆಯನ್ನು ನಿವೃತ್ತಿ ಹೊಂದಿದ ನಂತರ ಕಾಣಲು ಸಾಧ್ಯವೇ ಇಲ್ಲ ಎಂಬ ಕೊರಗೂ ಅಥ್ಲೀಟ್‌ಗಳನ್ನು ಕಾಡುತ್ತದೆ.

ಜನಪ್ರಿಯತೆ ಕುಗ್ಗುವ ಭೀತಿ
ಕೆಲ ಕ್ರೀಡಾಪಟುಗಳು ತಾವು ನಿವೃತ್ತಿ ಹೇಳಿಬಿಟ್ಟರೆ, ತಮ್ಮ ಜನಪ್ರಿಯತೆ ಕಳೆದು ಹೋಗುತ್ತದಲ್ಲ ಎಂಬ ಕೊರಗಿನಿಂದ ಒದ್ದಾಡುತ್ತಿರುತ್ತಾರೆ. ತಾನು ವೃತ್ತಿಯಲ್ಲಿದ್ದರೆ ಮಾತ್ರ ಜನರು ತನ್ನನ್ನು ಗುರುತಿಸುತ್ತಾರೆ. ಒಂದು ವೇಳೆ ನನ್ನನ್ನು ಜನರು ಮರೆತರೆ ನಾನು ಎಲ್ಲವನ್ನೂ ಕಳೆದುಕೊಳ್ಳಬೇಕಾಗಬಹುದು ಎಂಬ ಮನೋವ್ಯಾಧಿ ಅಥ್ಲೀಟ್‌ಗಳನ್ನು ತೀವ್ರವಾಗಿ ಕಾಡುತ್ತದೆ. ಇದರೊಂದಿಗೆ ಅಭಿಮಾನಿಗಳೂ ತಮ್ಮ ನೆಚ್ಚಿನ ಕ್ರೀಡಾಪಟುಗಳಿಗೆ ತೋರುವ ಇಲ್ಲದ ಪ್ರೀತಿಯೂ ದೂರವಾಗತ್ತದಲ್ಲ ಎಂಬ ಆತಂಕವೂ ಅವರನ್ನು ಆವರಿಸಿಬಿಡುತ್ತದೆ. ಭವಿಷ್ಯದ ಹೊಣೆಗಾರಿಕೆ ಬಗ್ಗೆ ಸೂಕ್ತ ತಯಾರಿ ಇಲ್ಲದಿರುವುದು ಸೇರಿದಂತೆ ಪ್ರತಿಯೊಬ್ಬ ಅಥ್ಲೀಟ್‌ಗಳು ತಮ್ಮದೇ ಭಿನ್ನ ಸಮಸ್ಯೆಗಳನ್ನು ಎದುರಿಸುತ್ತಾರೆ. ಸಮಸ್ಯೆ ಯಾವುದೇ ಆಗಿರಬಹುದು 'ನಾನು ಕಳೆದು ಹೋಗುತ್ತಿದ್ದೇನಲ್ಲ' ಎಂಬ ಭೀತಿ ಮಾತ್ರ ಕ್ರೀಡಾಪಟುಗಳು ಸಹಿಸಲು ಅಸಾಧ್ಯವಾದದ್ದು.

- ಮಲ್ಲಿಕಾರ್ಜುನ ಕರಿಯಪ್ಪನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.