ಕೊನೆಗೂ ಕಾಂಗರೂಗೆ ಸಿಕ್ಕಿತು ವಿಜಯ

ಢಾಕಾ: ವಿಶ್ವಕಪ್ ಟಿ-20 ಪಂದ್ಯಾವಳಿ ಆರಂಭಕ್ಕೂ ಮುನ್ನ ಪ್ರಶಸ್ತಿ ಗೆದ್ದುಕೊಳ್ಳುವ ನೆಚ್ಚಿನ ತಂಡಗಳ ಪೈಕಿ ಆಸ್ಟ್ರೇಲಿಯಾ ಕೂಡ ಮುಂಚೂಣಿಯಲ್ಲಿತ್ತು. ಆದರೆ, ಗುಂಪು ಸೆಣಸಿನಲ್ಲಿ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ದಯನೀಯ ಸೋಲನುಭವಿಸುವ ಮೂಲಕ ಬಹುಬೇಗನೆ ಸ್ಪರ್ಧಾ ಅಖಾಡದಿಂದಲೇ ಹೊರದಬ್ಬಿಸಿಕೊಂಡಿದ್ದ ಆಸ್ಟ್ರೇಲಿಯಾ ಗೆಲವೇ ಕಾಣದೆ ಟೂರ್ನಿಗೆ ಗುಡ್ಬೈ ಹೇಳಬಹುದೆಂಬ ಆತಂಕಕ್ಕೆ ಸಿಲುಕಿತ್ತು.
ಆದರೂ, ಹಾಗಾಗದೆ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದು ಆಸ್ಟ್ರೇಲಿಯಾ ಆಟಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಗುಂಪು-2ರ ತನ್ನ ಕೊನೆಯ ಲೀಗ್ ಸೆಣಸಿನಲ್ಲಿ ಆಸ್ಟ್ರೇಲಿಯಾ 7 ವಿಕೆಟ್ಗಳಿಂದ ಆತಿಥೇಯ ಬಾಂಗ್ಲಾದೇಶವನ್ನು ಸುಲಭವಾಗಿ ಮಣಿಸಿದೆ.
ಬಾಂಗ್ಲಾದೇಶ ಒಡ್ಡಿದ್ದ 154ರ ಲಕ್ಷ್ಯದತ್ತ ಹೆಜ್ಜೆ ಹಾಕಿದ್ದ ಆಸ್ಟ್ರೇಲಿಯಾ ಇನ್ನೂ 15 ಎಸೆತಗಳು ಉಳಿದಿರುವಂತೆಯೇ 3 ವಿಕೆಟ್ ಕಳೆದುಕೊಂಡು 158 ರನ್ಗಳಿಸಿ ಗೆಲವಿನ ಕೇಕೆ ಹಾಕಿತು.
ಆರಂಭಿಕರಾದ ಏರಾನ್ ಫಿಂಚ್ (71ರನ್, 45 ಎಸೆತ, 7 ಬೌಂಡರಿ, 4 ಸಿಕ್ಸರ್) ಮತ್ತು ಡೇವಿಡ್ ವಾರ್ನರ್ (48ರನ್, 35 ಎಸೆತ, 5 ಬೌಂಡರಿ, 3 ಸಿಕ್ಸರ್) ಸ್ಫೋಟಕ ಆಟವಾಡಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟರು. ಫಿಂಚ್ ಮತ್ತು ವಾರ್ನರ್ ಮೊದಲ ವಿಕೆಟ್ಗೆ ಕೇವಲ 11.2 ಓವರುಗಳಲ್ಲಿ 98 ರನ್ ಸಂಪಾದಿಸಿದರು.
ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಿ ಅಚ್ಚರಿಯ ಗೆಲವು ದಾಖಲಿಸುವ ಕನಸು ಕಂಡಿದ್ದ ಬಾಂಗ್ಲಾದೇಶ ಬೌಲಿಂಗ್ನಲ್ಲಿ ಪ್ರಭಾವ ಬೀರುವಲ್ಲಿ ವಿಫಲವಾಯಿತು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಬಾಂಗ್ಲಾದೇಶ 5 ವಿಕೆಟ್ ನಷ್ಟಕ್ಕೆ 153 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಬಾಂಗ್ಲಾದೇಶ 12 ರನ್ಗಳಿಸುವಷ್ಟರಲ್ಲಿಯೇ ಆರಂಭಿಕ ಆಟಗಾರರನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಶಕೀಬ್ ಅಲ್ ಹಸನ್ (66ರನ್, 52 ಎಸೆತ, 5 ಬೌಂಡರಿ, 3 ಸಿಕ್ಸರ್) ಮತ್ತು ನಾಯಕ ಮುಷ್ಫೀಕರ್ ರಹೀಂ (47ರನ್, 36 ಎಸೆತ, 5 ಬೌಂಡರಿ, 1 ಸಿಕ್ಸರ್) ಮೂರನೇ ವಿಕೆಟ್ಗೆ 112 ರನ್ ಸೇರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ 20 ಓವರ್ಗೆ 5 ವಿಕೆಟ್ಗೆ 153
(ಶಕೀಬ್ ಅಲ್ ಹಸನ್ 66, ಮುಷ್ಫೀಕರ್ ರಹೀಂ 47, ನಾಸಿರ್ ಹುಸೇನ್ 14, ನಾಥನ್ ಕೌಲ್ಟರ್-ನೀಲ್ 17ಕ್ಕೆ2). ಆಸ್ಟ್ರೇಲಿಯಾ 17.3 ಓವರುಗಳಲ್ಲಿ 3 ವಿಕೆಟ್ಗೆ 158 (ಏರಾನ್ ಫಿಂಚ್ 71, ಡೇವಿಡ್ ವಾರ್ನರ್ 48, ಅಲ್-ಅಮೀನ್ ಹುಸೇನ್ 30ಕ್ಕೆ2).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


