ಕ್ರೀಡೆ

ಹೈದರಾಬಾದ್‌ಗೆ ಸೋತ ವಿನಯಕುಮಾರ್ ಪಡೆ

Published On :

ವಿಶಾಖಪಟ್ಟಣ: ದಾಂಡಿಗರ ವೈಫಲ್ಯ ಹಾಗೂ ದಾಳಿ ಮೊನಚು ಕಳೆದುಕೊಳ್ಳುವುದರೊಂದಿಗೆ ಕರ್ನಾಟಕ ತಂಡದ ಆಟಗಾರರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಹೈದರಾಬಾದ್ ತಂಡಕ್ಕೆ ಸುಲಭ ತುತ್ತಾಗಿದ್ದಾರೆ.
ಡಾ. ವೈ.ಎಸ್. ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ಆಟಗಾರರು 9 ವಿಕೆಟ್‌ಗಳಿಂದ ಕರ್ನಾಟಕದ ವಿರುದ್ಧ ನಿರಾಯಾಸ ಗೆಲವು ದಾಖಲಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ 20 ಓವರುಗಳಲ್ಲಿ 140 ರನ್‌ಗಳಿಗೆ ಪತನಗೊಂಡಿತು. ತಂಡದ ಪರ ಆರಂಭಿಕ ರಾಬಿನ್ ಉತ್ತಪ್ಪ (64ರನ್, 45 ಎಸೆತ, 8 ಬೌಂಡರಿ, 1 ಸಿಕ್ಸರ್) ಸ್ಫೋಟಕ ಅರ್ಧಶತಕ ಬಾರಿಸಿದರೆ, ಎಂಟನೇ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ವಿನಯಕುಮಾರ್ 16 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಿಡಿಸಿದರು.
ಉಳಿದವರ ಪೈಕಿ ಕರುಣ್ ನಾಯರ್ 14 ರನ್‌ಗಳಿಸಿದರೆ, ಎಂಟು ಮಂದಿ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕವಾಗಿ ಎರಡಂಕಿಯ ಗಡಿ ಸಹ ತಲುಪದೇ ಇದ್ದುದರಿಂದ ಕರ್ನಾಟಕಕ್ಕೆ ಬೃಹತ್ ಮೊತ್ತ ಸಂಪಾದನೆಯಾಗಲಿಲ್ಲ.
ಹೈದರಾಬಾದ್ ತಂಡದ ಪರ ಶಿಸ್ತಿನ ದಾಳಿ ಸಂಘಟಿಸಿದ ಹನುಮ ವಿಹಾರಿ ಮತ್ತು ಆಶಿಶ್ ರೆಡ್ಡಿ ತಲಾ 2 ವಿಕೆಟ್ ಕಬಳಿಸಿದರು.
ಉತ್ತರವಾಗಿ 141 ರನ್‌ಗಳ ಗುರಿ ಬೆಂಬತ್ತಿದ ಹೈದರಾಬಾದ್ ಇನ್ನೂ 15 ಎಸೆತಗಳು ಉಳಿದಿರುವಂತೆಯೇ ಕೇವಲ 1 ವಿಕೆಟ್ ಕಳೆದುಕೊಂಡು ನಿರೀಕ್ಷಿತ ಗೆಲವು ತನ್ನದಾಗಿಸಿಕೊಂಡಿತು.
ಹೈದರಾಬಾದ್ ಸಹ ಉತ್ತಮ ಆರಂಭ ಪಡೆಯಲಿಲ್ಲ. ಮೊತ್ತ 19 ರನ್‌ಗಳಾಗುವಷ್ಟರಲ್ಲಿ ಆರಂಭಿಕ ರವಿ ತೇಜ (6) ಅವರ ವಿಕೆಟ್ ಕಳೆದುಕೊಂಡಿತು.
ಆದರೆ, ನಂತರ ಜೊತೆಯಾದ ಮತ್ತೊಬ್ಬ ಆರಂಭಿಕ ಅಕ್ಷತ್ ರೆಡ್ಡಿ ಕೇವಲ 48 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದ ಅಜೇಯ 69 ರನ್‌ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಬಂದ ಹನುಮ ವಿಹಾರಿ 49 ಎಸೆತಗಳಲ್ಲಿ 9 ಬೌಂಡರಿ ಸೇರಿದಂತೆ ಅಜೇಯ 64 ರನ್‌ಗಳಿಸಿ ಹೈದರಾಬಾದ್ ತಂಡದ ಸುಲಭ ವಿಜಯೋತ್ಸವಕ್ಕೆ ಕಾರಣರಾದರು. ಈ ಇಬ್ಬರೂ ದಾಂಡಿಗರು ಮುರಿಯದ ಎರಡನೇ ವಿಕೆಟ್‌ಗೆ 122 ರನ್ ಕಲೆಹಾಕಿದರು.
ಕರ್ನಾಟಕದ ಯಾವೊಬ್ಬ ಬೌಲರ್ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳ ಮೇಲೆ ಪ್ರಭಾವ ಬೀರಲಿಲ್ಲ. ವಿನಯಕುಮಾರ್ ಮಾತ್ರ ಒಂದು ವಿಕೆಟ್ ಪಡೆಯಲು ಶಕ್ತರಾದರು.
ಈ ಗೆಲವಿನೊಂದಿಗೆ ಹೈದರಾಬಾದ್ ತಂಡಕ್ಕೆ 4 ಅಂಕ ಲಭಿಸಿದರೆ, ಕರ್ನಾಟಕಕ್ಕೆ ಯಾವುದೇ ಅಂಕ ಲಭಿಸಲಿಲ್ಲ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ 20 ಓವರುಗಳಲ್ಲಿ 140 (ರಾಬಿನ್ ಉತ್ತಪ್ಪ 64, ವಿನಯಕುಮಾರ್ 34, ಕರುಣ್ ನಾಯರ್ 14, ಹನುಮ ವಿಹಾರಿ 13ಕ್ಕೆ2, ಆಶಿಶ್ ರೆಡ್ಡಿ 22ಕ್ಕೆ2). ಹೈದರಾಬಾದ್ 17.3 ಓವರುಗಳಲ್ಲಿ 1 ವಿಕೆಟ್‌ಗೆ 141 (ಅಕ್ಷತ್ ರೆಡ್ಡಿ ಅಜೇಯ 69, ಹನುಮ ವಿಹಾರಿ ಅಜೇಯ 64, ವಿನಯಕುಮಾರ್ 15ಕ್ಕೆ1).  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.