ಐ- ಲೀಗ್: ಗೆದ್ದು ಬೀಗಿದ ಬಿಎಫ್ಸಿ
ಕೋಲ್ಕತಾ: ಐಲೀಗ್ ಪಂದ್ಯಾವಳಿಗೆ ಕಾಲಿಟ್ಟ ಮೊದಲ ವರ್ಷವೇ ಚಾಂಪಿಯನ್ ಆಗುವ ಹಾದಿಯಲ್ಲಿ ಸಾಗುತ್ತಿರುವ ಬೆಂಗಳೂರು ಎಫ್ಸಿ ತಂಡ, ಮೊಹನ್ ಬಗಾನ್ ವಿರುದ್ಧ ಅರ್ಹ ಗೆಲವು ದಾಖಲಿಸಿದೆ. ಈ ಮೂಲಕ ಪ್ರಶಸ್ತಿಯ ಹೊಸ್ತಿಲಿಗೆ ಬಂದು ನಿಂತಿದೆ.ಭಾನುವಾರ ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ತಂಡ 2-0 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿದೆ. ಈ ಗೆಲವಿನೊಂದಿಗೆ ಬಿಎಫ್ಸಿ ಪಂದ್ಯಾವಳಿಯಲ್ಲಿ 12ನೇ ಗೆಲವು ದಾಖಲಿಸಿದ್ದು, 41 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಪಂದ್ಯಾವಳಿಯಲ್ಲಿ ಬಿಎಫ್ಸಿ ಪಾಲಿಗೆ ಕೇವಲ 1 ಪಂದ್ಯ ಉಳಿದಿದ್ದು, ಆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಚಾಂಪಿಯನ್ ಪಟ್ಟ ಖಚಿತವಾಗಲಿದೆ.
ತವರಿನ ಅಂಗಣದಲ್ಲಿ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿದ ಮೊಹನ್ ಬಗಾನ್ ತಂಡದ ಆಟಗಾರರು ಪಂದ್ಯದ ಮೊದಲ ನಿಮಿಷದಲ್ಲೇ ಗೋಲು ದಾಖಲಿಸುವ ಅವಕಾಶ ಪಡೆದರು. ಈ ವೇಳೆ ಬಗಾನ್ ತಂಡದ ಪಂಕಜ್ ಮೌಲಾ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಪ್ರಯತ್ನ ನಡೆಸಿದರಾದರೂ, ಯಶಸ್ವಿಯಾಗಲಿಲ್ಲ.
ನಂತರ ಪಂದ್ಯದದ ಮೊದಲಾರ್ಧದಲ್ಲಿ ಬಿಎಫ್ಸಿ ತಂಡದ ಆಟಗಾರರು ಮಂದಗತಿಯ ಆಟಕ್ಕೆ ಮುಂದಾದದರು. ಮೊದಲಾರ್ಧದ ಅಂತಿಮ ಕ್ಷಣದಲ್ಲಿ ಚುರುಕಿನ ಪ್ರದರ್ಶನಕ್ಕೆ ಮುಂದಾದರು.
45ನೇ ನಿಮಿಷದ ನಂತರ ಸಿಕ್ಕ ಹೆಚ್ಚುವರಿ ಮೊದಲ ನಿಮಿಷದಲ್ಲಿ ಚಾಕಚಕ್ಯ ಪ್ರದರ್ಶನ ನೀಡಿದ ಥೊಯ್ ಸಿಂಗ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಸೀನ್ ರೂನಿ ನೀಡಿದ ಚೆಂಡನ್ನು ಬಾಕ್ಸ್ನಿಂದ ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ಥೊಯ್ ಸಿಂಗ್ ಯಶಸ್ವಿಯಾದರು. ಈ ಮೂಲಕ ಬಿಎಫ್ಸಿ ಪಂದ್ಯದ ಮೊದಲಾರ್ಧದಲ್ಲಿ 1-0 ಅಂತರದ ಮುನ್ನಡೆ ಕಂಡುಕೊಂಡರು.
ಎರಡನೇ ಅವಧಿಯಲ್ಲಿ ಮೊಹನ್ ಬಗಾನ್ ತಂಡದ ಆಟಗಾರರ ವಿರುದ್ಧ ಬಿಎಫ್ಸಿ ಆಟಗಾರರು ಸಂಪೂರ್ಣ ನಿಯಂತ್ರಣ ಸಾಧಿಸಿದರು.
60ನೇ ನಿಮಿಷದಲ್ಲಿ ಅಬ್ಬರಿಸಿದ ಸೀನ್ ರೂನಿ ತಂಡಕ್ಕೆ ಎರಡನೇ ಗೋಲು ತಂದುಕೊಟ್ಟರು. ಈ ಮೂಲಕ ಬೆಂಗಳೂರು ಎಫ್ಸಿ ಗೋಲುಗಳ ಅಂತರವನ್ನು ದ್ವಿಗುಣ ಪಡಿಸಿದರು. ನಂತರ ಬಗಾನ್ ತಂಡದ ಆಟಗಾರರು ಗೋಲು ದಾಖಲಿಸಲು ಪ್ರಯತ್ನಿಸಿದರಾದರೂ ಅದಕ್ಕೆ ಪ್ರವಾಸಿ ತಂಡ ಅವಕಾಶ ನೀಡಲಿಲ್ಲ. ಹಾಗಾಗಿ ಪಂದ್ಯದಲ್ಲಿ ಬಿಎಫ್ಸಿ ಗೆಲವಿನ ನಗೆ ಬೀರಿತು.ಪ್ರಶಸ್ತಿ ಹೊಸ್ತಿಲಲ್ಲಿ ಬಿಎಫ್ಸಿ: ಬಿಎಫ್ಸಿ ತಂಡ ಆಡಿರುವ 22 ಪಂದ್ಯಗಳಲ್ಲಿ 12ರಲ್ಲಿ ಗೆಲವು, 5ರಲ್ಲಿ ಡ್ರಾ ಹಾಗೂ 5 ಪಂದ್ಯಗಳಲ್ಲಿ ಸೋಲನುಭವಿಸಿ 41 ಅಂಕಗಳನ್ನು ಸಂಪಾದಿಸಿದೆ. ಇನ್ನು ದ್ವಿತೀಯ ಸ್ಥಾನದಲ್ಲಿರುವ ಸಲ್ಗಾಂವ್ಕರ್ ತಂಡ ಆಡಿರುವ 22 ಪಂದ್ಯಗಳಿಂದ 11ರಲ್ಲಿ ಗೆಲವು, 4ರಲ್ಲಿ ಡ್ರಾ ಹಾಗೂ 7ರಲ್ಲಿ ಸೋಲನುಭವಿಸಿ 37 ಅಂಕಗಳನ್ನು ಸಂಪಾದಿಸಿದೆ. ಮೂರನೇ ಸ್ಥಾನದಲ್ಲಿರುವ ಈಸ್ಟ್ ಬೆಂಗಾಲ್ ತಂಡ ಆಡಿರುವ 20 ಪಂದ್ಯಗಳಲ್ಲಿ 9 ಗೆಲವು, 7 ಡ್ರಾ ಹಾಗೂ 4ರಲ್ಲಿ ಸೋಲನುಭವಿಸಿ 34 ಅಂಕಗಳನ್ನು ಸಂಪಾದಿಸಿದೆ. ಹಾಗಾಗಿ ಈ ಮೂರು ತಂಡಗಳು ಪ್ರಶಸ್ತಿ ರೇಸ್ನಲ್ಲಿದ್ದು, ಬಿಎಫ್ಸಿ ತಂಡ ತಮ್ಮ ಮುಂದಿನ ಪಂದ್ಯಗಳಲ್ಲಿ ಸೋಲಿನಿಂದ ದೂರ ಉಳಿದು ಉತ್ತಮ ಫಲಿತಾಂಶ ಪಡೆದರೆ, ಪ್ರಶಸ್ತಿಗೆ ಮುತ್ತಿಕುವಲ್ಲಿ ಸಫಲವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

