ಕ್ರೀಡೆ

ಸ್ವಪ್ನಿಲ್ ಅರ್ಧಶತಕ, ಗೋವಾಗೆ ಜಯ

Published On :
ರಾಜ್‌ಕೋಟ್: ಆರಂಭಿಕ ಬ್ಯಾಟ್ಸ್‌ಮನ್ ನಾಯಕ ಸ್ವಪ್ನಿಲ್ ಅಸ್ನೋಡ್‌ಕರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಗೋವಾ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಹರಿಯಾಣ ತಂಡದ ವಿರುದ್ಧ ನಿಚ್ಚಳ ಗೆಲವು ದಾಖಲಿಸಿದೆ. 
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗೋವಾ ಎದುರಾಳಿಯನ್ನು ಮೊದಲು ಬ್ಯಾಟಿಂಗ್‌ಗೆ ಆಮಂತ್ರಿಸಿತು. ಆದರೆ, ಈ ಅವಕಾಶವನ್ನು ಬಳಸಿಕೊಳ್ಳದ ಹರಿಯಾಣ 9 ವಿಕೆಟ್ ನಷ್ಟಕ್ಕೆ 116 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.
ಮಧ್ಯಮ ಕ್ರಮಾಂಕದ ಆಟಗಾರ ಜೋಗಿಂದರ್ ಶರ್ಮಾ 29 ಎಸೆತಗಳಲ್ಲಿ 5 ಬೌಂಡರಿಗಳಿದ್ದ 29 ರನ್‌ಗಳಿಸಿದ್ದೇ ಉತ್ತಮ ಬ್ಯಾಟಿಂಗ್ ಸಾಧನೆಯಾಯಿತು. 
ಉಳಿದಂತೆ ರಾಹುಲ್ ದಲಾಲ್ 25 ರನ್‌ಗಳಿಸಿದರು. ಆದರೆ ಇತರೆ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲುವಲ್ಲಿ ವಿಫಲರಾದರು. 
ಗೋವಾ ತಂಡದ ಪರ ಲಕ್ಷಯ್ ಗರ್ಗ್ 3 ವಿಕೆಟ್ ಪಡೆದು ಗಮನ ಸೆಳೆದರು.
ಉತ್ತರವಾಗಿ ಗೋವಾ ತನ್ನ ಸರದಿಯಲ್ಲಿ ಇನ್ನೂ ಎರಡು ಓವರುಗಳು ಉಳಿದಿರುವಂತೆಯೇ ಕೇವಲ 2 ವಿಕೆಟ್ ಒಪ್ಪಿಸಿ 117 ರನ್‌ಗಳಿಸಿ ಗೆಲವಿನ ಕೇಕೆ ಹಾಕಿತು. ಗುರಿ ಸೇರಲು ಗೋವಾ ಹೆಚ್ಚು ಶ್ರಮಪಡಲಿಲ್ಲ. 
ಆರಂಭಿಕ ಸ್ವಪ್ನಿಲ್ ಅಸ್ನೋಡ್‌ಕರ್ ಕೇವಲ 59 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ ಅಜೇಯ 70 ರನ್‌ಗಳಿಸಿ ಗೋವಾ ತಂಡಕ್ಕೆ ನಿರೀಕ್ಷಿತ ಗೆಲವು ತಂದುಕೊಟ್ಟರು. ಎದುರಾಳಿ ಬೌಲರ್‌ಗಳು ಸಮರ್ಥವಾಗಿ ಎದುರಿಸಿ ರನ್ ಗಳಿಸಿದ ಅಸ್ನೋಡ್‌ಕರ್ ಉತ್ತಮ ಹೊಡೆಗಳನ್ನು ಬಾರಿಸಿದರು. 
ಗುಜರಾತ್‌ಗೆ ಗೆಲವು
ಇಲ್ಲಿಯೇ ನಡೆದ ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಗುಜರಾತ್ ತಂಡ 6 ವಿಕೆಟ್‌ಗಳಿಂದ ಜಾರ್ಖಂಡ್ ಪಡೆಯನ್ನು ಮಣಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ 20 ಓವರುಗಳಲ್ಲಿ 8 ವಿಕೆಟ್‌ಗೆ 108 ರನ್‌ಗಳಿಸಿತು.
ಉತ್ತರವಾಗಿ ಗುಜರಾತ್ 18.1 ಓವರುಗಳಲ್ಲಿ 4 ವಿಕೆಟ್‌ಗೆ 110 ಬಾರಿಸಿ ಗೆಲವಿನ ನಗೆ ಬೀರಿತು. 
ಸಂಕ್ಷಿಪ್ತ ಸ್ಕೋರ್:
ಹರಿಯಾಣ 20 ಓವರುಗಳಲ್ಲಿ 9 ವಿಕೆಟ್‌ಗೆ 116 (ಜೋಗಿಂದರ್ ಶರ್ಮಾ 29, ರಾಹುಲ್ ದಲಾಲ್ 25, ಲಕ್ಷಯ್ ಗರ್ಗ್ 31ಕ್ಕೆ3, ಗೌರೇಶ್ ಗಾವಸ್ 28ಕ್ಕೆ2). ಗೋವಾ 18 ಓವರುಗಳಲ್ಲಿ 2 ವಿಕೆಟ್‌ಗೆ 117 (ಸ್ವಪ್ನಿಲ್ ಅಸ್ನೋಡಕರ್ ಅಜೇಯ 70, ಸೂರಜ್ ಡೋಂಗ್ರೆ 29). 
ಜಾರ್ಖಂಡ್ 20 ಓವರುಗಳಲ್ಲಿ 8 ವಿಕೆಟ್‌ಗೆ 108 (ಕುಮಾರ್ ದೇವಬ್ರತ್ 25, ಸರ್ಫರಾಜ್ ಅಶ್ರಫ್ 16, ಕೆ. ಠಾಕೂರ್ 19ಕ್ಕೆ3, ಗಜ 18ಕ್ಕೆ2). ಗುಜರಾತ್ 18.1 ಓವರುಗಳಲ್ಲಿ 4 ವಿಕೆಟ್‌ಗೆ 110 (ಸ್ಮಿತ್ ಪಟೇಲ್ ಅಜೇಯ 46, ರಾಜ್‌ದೀಪ್ ದರ್ಬಾರ್ 25, ಸಮರ್ ಖಾದ್ರಿ 16ಕ್ಕೆ3). 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.