ಕ್ರೀಡೆ

ಶ್ರೀಕಾಂತ್, ಸಿಂಧು ಕ್ವಾರ್ಟರ್‌ಗೆ

ಶ್ರೀಕಾಂತ್, ಸಿಂಧು ಕ್ವಾರ್ಟರ್‌ಗೆ
Published On :

ಸಿಂಗಾಪುರ: ಥಾಯ್ಲೆಂಡ್ ಓಪನ್ ಚಾಂಪಿಯನ್, ಭಾರತದ ಕಿಡಂಬಿ ಶ್ರೀಕಾಂತ್ ಮತ್ತು ಪಿ. ಸಿಂಧು ಅವರು ಸಿಂಗಾಪುರ ಸೂಪರ್ ಸಿರೀಸ್‌ನ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಹಾಕಿದ್ದಾರೆ.      ಶ್ರೀಕಾಂತ್ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ವಿಶ್ವದ ನಂಬರ್ 10 ಆಟಗಾರ ಟೀನ್ ಮಿನ್ಹ ಗುಯೆನ್ ಅವರನ್ನು ಪರಾಭವಗೊಳಿಸಿದರು.
ಆಲ್ ಇಂಗ್ಲೆಂಡ್, ಸ್ವಿಸ್ ಓಪನ್ ಹಾಗೂ ಇಂಡಿಯಾ ಸೂಪರ್ ಸಿರೀಸ್‌ನ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದ ಶ್ರೀಕಾಂತ್, ಫಾರ್ಮ್‌ಗೆ ಮರಳುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಟೀನ್ ಅವರನ್ನು 18-21, 21-15, 21-8 ಗೇಮ್‌ಗಳಿಂದ ಪರಾಭವಗೊಳಿಸಿದರು.  ಇನ್ನು ಕಳೆದ ವರ್ಷ ಮಲೇಷ್ಯಾ ಮತ್ತು ಮಾಕುವಾ ಓಪನ್ ಗೆದ್ದ ಸಿಂಧು, ಜಪಾನ್‌ನ ಶಿಜುಕಾ ಉಚಿದಾ ಅವರನ್ನು 21-17, 17-21, 21-16 ಗೇಮ್‌ಗಳಿಂದ ಮಣಿಸುವ ಮೂಲಕ ಕ್ವಾರ್ಟರ್‌ಗೆ ಪ್ರವೇಶಿಸಿದರು. ಇದರೊಂದಿಗೆ ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ನಂ. 3 ಆಟಗಾರ್ತಿ ಯಿಹಾನ್ ವಾಂಗ್ ಅವರನ್ನು ಎದುರಿಸಲಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ಇಂಡಿಯಾ ಗ್ರ್ಯಾನ್ ಪ್ರಿಕ್ಸ್ ಗೋಲ್ಡ್‌ನ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದ ಶ್ರೀಕಾಂತ್ ಅವರು, ಈಗ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹಾಂಕಾಂಗ್‌ನ ಯೂನ್ ಹೂ ವಿರುದ್ಧ ಹೋರಾಟ ನಡೆಸಲಿದ್ದಾರೆ. ಈ ಮೊದಲು ಹೂ ವಿರುದ್ಧ ಒಂದು ಪಂದ್ಯವನ್ನಾಡಿರುವ ಶ್ರೀಕಾಂತ್ ವಿಜಯಿಯಾಗಿದ್ದಾರೆ. ಋತುವಿನ ಆರಂಭದಲ್ಲಿ ನಡೆದ ಮಲೇಷ್ಯಾ ಓಪನ್‌ನಲ್ಲಿ ಹೂ ವಿರುದ್ಧ ಶ್ರೀಕಾಂತ್ ಮೇಲುಗೈ ಕಂಡುಕೊಂಡಿದ್ದರು.
ಮೊದಲ ಗೇಮ್‌ನ ಆರಂಭದಲ್ಲಿ ಶ್ರೀಕಾಂತ್ 6-14 ಅಂತರದಿಂದ ಹಿನ್ನೆಡೆ ಅನುಭವಿಸಿದ್ದರು. ನಂತರ 16-16 ಅಂತರದಿಂದ ಸಮಬಲ ಸಾಧಿಸಿದರು. ಅನಂತರ ಸಮಬಲ ಹೋರಾಟ ಮುಂದುವರಿಯುವ ಮೂಲಕ 18-18 ಅಂತರದಿಂದ ಸಮಬಲ ಸಾಧಿಸಿದರು. ಆದರೆ, ಅಂತ್ಯದಲ್ಲಿ ಸತತವಾಗಿ ಮೂರು ಅಂಕ ಗಳಸಿದ ವೀಯಟ್ನಾಮ್ ಆಟಗಾರ ಮೊದಲು ಮೇಲುಗ ಸಾಧಿಸಿದರು.
ಎರಡನೇ ಗೇಮ್‌ನಲ್ಲಿ ಶ್ರೀಕಾಂತ್ ಆರಂಭದಲ್ಲಿ 8-5 ಅಂಕಗಳಿಂದ ಮುನ್ನಡೆ ಕಂಡುಕೊಂಡರು. ಆಗ ನಿಧಾನವಾಗಿ ಚೇತರಿಸಿಕೊಂಡ ಟೀನ್ ಸತತ3 ಅಂಕ ಗಳಿಸಿಕೊಂಡರು. ಆಗ ವಿಶ್ವಾಸದ ಪ್ರದರ್ಶನ ನೀಡಿದ ಶ್ರೀಕಾಂತ್ ಅವರು ಎದುರಾಳಿ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಪಂದ್ಯದಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿದರು.
ಆಗ 3ನೇ ಮತ್ತು ನಿರ್ಣಾಯಕ ಗೇಮ್‌ನಲ್ಲಿ ಶ್ರೀಕಾಂತ್ ಅವರು ಆರಂಭದಲ್ಲೇ 11-3 ಅಂತರದಿಂದ ಭಾರೀ ಮುನ್ನಡೆ ಕಂಡುಕೊಂಡರು. ಅನಂತರವೂ ವೀಯಟ್ನಾಮ್ ಆಟಗಾರನ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದ ಶ್ರೀ, 16-6 ಮತ್ತು 17-8 ಅಂತರದಿಂದ ಮುನ್ನ ಸಾಧಿಸುತ್ತಲೇ ಸಾಗಿದ ಶ್ರೀಕಾಂತ್ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಹಾಕಿದರು.
ಮಹಿಳೆಯರ ಸಿಂಗಲ್ಸ್ ಪಂದ್ಯದ ಮೊದಲ ಗೇಮ್‌ನ ಮೊದಲಾರ್ಧದಲ್ಲಿ ಸಿಂಧು 11-10ರಿಂದ ಮುನ್ನಡೆ ಸಾಧಿಸಿದ್ದರು. ನಂತರ 14-10 ಮತ್ತು 19-14 ಅಂತರದಿಂದ ಮುನ್ನಡೆ ಸಾಧಿಸುವುದರೊಂದಿಗೆ ಮೇಲುಗೈ ಸಾಧಿಸಿದರು. ಇನ್ನು ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದ ಉಚಿದಾ ಅವರು ಆರಂಭದಿಂದಲೂ ಮುನ್ನಡೆ ಕಂಡುಕೊಳ್ಳುವ ಮೂಲಕ ಮೇಲುಗೈ ಕಂಡುಕೊಂಡರು. ಆದರೆ, ನಿರ್ಣಾಯಕ ಗೇಮ್‌ನಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಸಿಂಧು ಕ್ವಾರ್ಟರ್‌ಗೆ ಲಗ್ಗೆ ಹಾಕಿದರು.
ಅಲ್ವಿನ್-ವಿಷ್ಣುಗೆ ಜಯ: ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಅಲ್ವಿನ್ ಫ್ರಾಂಚಿಸ್ ಮತ್ತು ಅರುಣ್ ವಿಷ್ಣು ಜೋಡಿ, ಅಗ್ರ ಶ್ರೇಯಾಂಕ ಪಡೆದ ಇಂಡೋನೇಷ್ಯಾದ ಮೊಹ್ಮದ್ ಎಹಸನ್ ಮತ್ತು ಹೆದ್ರಾ ಸೆಟಿಯಾವಾನ್ ಜೋಡಿಯನ್ನು 21-17, 24-22 ಗೇಮ್‌ಗಳಿಂದ ಸೋಲಿಸಿತು.
ಭಾರತದ ಇನ್ನೊಂದು ಜೋಡಿಯಾದ ಅರುಣ್ ವಿಷ್ಣು ಮತ್ತು ಅಪರ್ಣಾ ಬಾಲನ್ ಜೋಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಇಂಡೋನೇಷ್ಯಾದ ಜಿಡೆಯೋನ್ ಮಾರ್ಕಸ್ ಫೆರ್ನಾಲ್ಡಿ ಮತ್ತು ರಿಜ್ಕಿ ಅಮೆಲಿಯಾ ಪ್ರದಿಪ್ತಾ ಜೋಡಿ ವಿರುದ್ಧ 21-23, 17-21 ಗೇಮ್‌ಗಳಿಂದ ಪರಾಭವ ಹೊಂದಿತು.

ರ್ಯಾಂಕಿಂಗ್: ಕಶ್ಯಪ್‌ಗೆ ಬಡ್ತಿ
ನವದೆಹಲಿ: ಭಾರತದ ಪಿ. ಕಶ್ಯಪ್ ವಿಶ್ವ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ 4 ಸ್ಥಾನ ಬಡ್ತಿ ಪಡೆದಿದ್ದಾರೆ. ಆದರೆ, ಪಿ.ವಿ ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದ ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದಾರೆ.     ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು 8ನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ.      ಜನವರಿಯಲ್ಲಿ ನಡೆದ ಸೈಯಿದ್ ಮೋದಿ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದ ಸಿಂಧು, 9ನೇ ಸ್ಥಾನಕ್ಕೇರಿದ್ದರು. ಆದರೆ, ಕಳೆದ ವಾರ 10ನೇ ಸ್ಥಾನದಲ್ಲಿದ್ದ ಸಿಂಧು, ಎರಡು ಬಾರಿ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಜಿನ್ ವಾಂಗ್ ವಿರುದ್ಧ ಸೋಲನುಭವಿಸುವ ಮೂಲಕ ಒಂದು ಸ್ಥಾನ ಕುಸಿದು, ಈಗ ಟಾಪ್ 10 ಪಟ್ಟಿಯಿಂದಲೇ ಜಾರಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ 4 ಸ್ಥಾನ ಬಡ್ತಿ ಪಡೆದಿರುವ ಪರುಪಳ್ಳಿ ಕಶ್ಯಪ್ ಅವರು, ಟಾಪ್ 20 ಪಟ್ಟಿಯಲ್ಲಿ ಮರಳಿ ಸ್ಥಾನ ಪಡೆದುಕೊಂಡಿದ್ದಾರೆ. ವಿಶ್ವದ ಮಾಜಿ ನಂಬರ್ 6 ಆಟಗಾರ ಸ್ವೀಸ್ ಓಪನ್ ಮತ್ತು ಇಂಡಿಯಾ ಓಪನ್ ಸೂಪರ್ ಸಿರೀಸ್‌ನಲ್ಲಿ ಕ್ರಮವಾಗಿ ಸೆಮಿಫೈನಲ್ ಮತ್ತು ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದು 4 ಸ್ಥಾನ ಪಡೆಯಲು ಅನುಕೂಲವಾಗಿದೆ. ಸದ್ಯಕ್ಕೆ ಕಶ್ಯಪ್ ಅವರು 19ನೇ ಸ್ಥಾನದಲ್ಲಿದ್ದಾರೆ.  ಇನ್ನು ಕಿಡಂಬಿ ಶ್ರೀಕಾಂತ್ ಅವರು 25ನೇ ಸ್ಥಾನದಲ್ಲಿದ್ದಾರೆ, ಆದರೆ, ಡಬಲ್ಸ್ ಅಥವಾ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಯಾವ ಆಟಗಾರನೂ ಟಾಪ್ 25 ಪಟ್ಟಿ ಯಲ್ಲಿ ಸ್ಥಾನ ಪಡೆದುಕೊಂಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.