ಕ್ರೀಡೆ

ಐಪಿಎಲ್ ತನಿಖೆಗೆ ಸಮಿತಿ ರಚನೆ

ಐಪಿಎಲ್ ತನಿಖೆಗೆ ಸಮಿತಿ ರಚನೆ
Published On :

ಮುಂಬೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ಕುರಿತು ತನಿಖೆ ನಡೆಸಲು ಉಂಟಾಗಿದ್ದ ನಂಬಿಕೆಯ ಪ್ರಶ್ನೆಯ ನಡುವೆಯೇ, ಸುಪ್ರೀಂ ಕೋರ್ಟ್ ಸೂಚನೆಯಂತೆ ಮೂವರು ಗಣ್ಯರನ್ನೊಳಗಂಡ ಸಮಿತಿಯನ್ನು ಬಿಸಿಸಿಐ ಭಾನುವಾರ ನೇಮಿಸಿದೆ.
ಭಾನುವಾರ ನಡೆದ ಬಿಸಿಸಿಐನ ಕಾರ್ಯ ನಿರ್ವಾಹಕ ಸಮಿತಿಯ ಸಭೆಯಲ್ಲಿ, ಭಾರತದ ಮಾಜಿ ಆಲ್ರೌಂಡ್ ಆಟಗಾರ ರವಿ ಶಾಸ್ತ್ರಿ, ಕೋಲ್ಕತಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎನ್ ಪಟೇಲ್ ಹಾಗೂ ಸಿಬಿಐನ ಮಾಜಿ ನಿರ್ದೇಶಕ ಆರ್.ಕೆ ರಾಘವನ್ ಅವರನ್ನು ಸಮಿತಿ ಒಳಗೊಂಡಿದೆ.ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ವಿದರ್ಭ ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸುವ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.ಲೋಕಸಭಾ ಮಾಜಿ ಸಭಾಪತಿ ಸೋಮ್‌ನಾಥ್ ಚಟರ್ಜಿ ಅವರ ಹೆಸರು ಸಹ ತನಿಖಾ ಸಮಿತಿಯ ಸದಸ್ಯತ್ವಕ್ಕೆ ಸಭೆಯಲ್ಲಿ ಕೇಳಿಬಂದಿತು ಎನ್ನಲಾಗಿದೆ.ಐಪಿಎಲ್ 6ನೇ ಆವೃತ್ತಿಯಲ್ಲಿ ನಡೆದಿದೆ ಎನ್ನಲಾಗಿರುವ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ಕುರಿತು
ಏಪ್ರಿಲ್ 16ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಕುರಿತು ತನಿಖೆ ನಡೆಸಲು ಬಿಸಿಸಿಐಗೆ ಸಲಹೆ ನೀಡಿತ್ತು. ಈಗ ಏಪ್ರಿಲ್ 22ರಂದು ನಡೆಯಲಿರುವ ವಿಚಾರಣೆಯಲ್ಲಿ ಬಿಸಿಸಿಐ ನೇಮಕ ಮಾಡಿರುವ ಸಮಿತಿ ಕುರಿತು ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯವನ್ನು ತಿಳಿಸಲಿದೆ ಮತ್ತು ತನಿಖೆ ನಡೆಸುವ ಕುರಿತು ಆದೇಶವನ್ನು ಪಾಸ್ ಮಾಡಲಿದೆ. ಸುಪ್ರೀಂ ಕೋರ್ಟ್ ವಿಚಾರಣೆಯ ನಂತರ, ಬಿಸಿಸಿಐ ಮಾನ್ಯತೆ ಪಡೆದ ಕೆಲ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕಾರ್ಯನಿರ್ವಾಹಕ ಮಂಡಳಿಯ ಸಭೆ ಕರೆಯಲಾಗಿತ್ತು.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀನಿವಾಸನ್ ಮತ್ತು ಇತರ 12 ಜನರ ವಿರುದ್ಧ ಬಿಸಿಸಿಐ ತನಿಖೆ ನಡೆಸಬೇಕು ಎಂದು ಏಪ್ರಿಲ್ 16ರಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಸ್ವಾಯತ್ತ ಸಂಸ್ಥೆಯ ವಿರುದ್ಧ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ ಮಾಡಿರುವ ಆರೋಪವನ್ನು ಕೇಳಿ ಕೋರ್ಟ್ 'ಕಣ್ಣು ಮುಚ್ಚಿ ಕುಳಿತುಕೊಳ್ಳುವುದಿಲ್ಲ' ಎಂದಿತ್ತು.ನ್ಯಾಯಮೂರ್ತಿ ಎ.ಕೆ ಪಟ್ನಾಯಕ್ ಮತ್ತು ಎಫ್.ಎಂ ಇಬ್ರಾಹಿಮ್ ಕಾಲಿಫುಲ್ಲಾ ಅವರನ್ನೊಳಗೊಂಡ ನ್ಯಾಯಪೀಠ, ಎಸ್‌ಐಟಿ ಅಥವಾ ಸಿಬಿಐ ಪ್ರಕರಣದ ಕುರಿತು ತನಿಖೆ ನಡೆಸುವ ಬಗ್ಗೆ ಪ್ರಸ್ತಾಪಿಸಿತ್ತು. ಆದರೆ, ಬಿಸಿಸಿಐ ಸ್ವಯತ್ತ ಸಂಸ್ಥೆಯಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಸಲು ಅದೇ ಸಮಿತಿಯನ್ನು ನೇಮಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರ್ಟ್‌ಗೆ ಕೇಳಿಕೊಂಡಿತ್ತು.
ಆದರೆ, ಬಿಸಿಸಿಐನ ಅಧ್ಯಕ್ಷರಾಗಿ ಮುಂದುವರಿಯಲು ಅನುಮತಿ ಕೇಳಿದ್ದ ಎನ್. ಶ್ರೀನಿವಾಸನ್ ಅವರ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತ್ತು. ಅಲ್ಲದೆ, ಎಲ್ಲ ರೀತಿಯ ಆರೋಪಗಳಿಂದ ಮುಕ್ತವಾಗುವವರೆಗೂ ಶ್ರೀನಿವಾಸನ್ ಬಿಸಿಸಿಐಗೆ ವಾಪಸ್ ಮರಳಲು ಅವಕಾಶ ನೀಡದಿರುವಂತೆ ಸಲಹೆ ನೀಡಿತ್ತು. ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಸಮಿತಿ ವರದಿಯಲ್ಲಿ, ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಅವರು ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ತಿಳಿಸಲಾಗಿತ್ತು.

ಶಾಸ್ತ್ರಿ ಹೆಸರಿಗೆ ವಿರೋಧ
ನವದೆಹಲಿ:
ಸಮಿತಿಯಲ್ಲಿ ಸೇರಿರುವ ಮೂವರು ವ್ಯಕ್ತಿಗಳ ಹೆಸರುಗಳ ಪೈಕಿ ರವಿ ಶಾಸ್ತ್ರಿ ವಿರುದ್ಧ ಬಿಹಾರ್ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಆದಿತ್ಯ ವರ್ಮಾ ಅಪಸ್ವರ ಎತ್ತಿದ್ದಾರೆ. ಸಿಬಿಐ ಅಥವಾ ರಾಷ್ಟ್ರೀಯ ಗುಪ್ತಚರ ಸಂಸ್ಥೆ (ಎನ್‌ಐಎ) ಐಪಿಎಲ್ ಪ್ರಕರಣದ ತನಿಖೆ ನಡೆಸಬೇಕು ಎಂದು ವರ್ಮಾ ಒತ್ತಾಯಿಸಿದ್ದಾರೆ. 'ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿಯನ್ನು ಬಿಸಿಸಿಐ ಒಪ್ಪಿಕೊಂಡಿಲ್ಲ. ಹೀಗಾಗಿ, ಬಿಸಿಸಿಐ ಸೂಚಿಸಿದ ಸಮಿತಿಯನ್ನು ಒಪ್ಪಿಕೊಳ್ಳುವುದು ಹೇಗೆ? ಆದ್ದರಿಂದ ಸಿಬಿಐ ಅಥವಾ ಎನ್‌ಐಎ ಪ್ರಕರಣದ ತನಿಖೆ ನಡೆಸಬೇಕು' ಎಂದು ವರ್ಮಾ ತಿಳಿಸಿದರು. 'ಸಮಿತಿಯಲ್ಲಿರುವ ಇಬ್ಬರು ಸದಸ್ಯರ ಬಗ್ಗೆ ನನಗೆ ನಂಬಿಕೆ ಇದೆ. ಆದರೆ, ದೀರ್ಘ ಕಾಲದಿಂದ ಬಿಸಿಸಿಐನ ಉದ್ಯೋಗಿಯಾಗಿರುವ ರವಿ ಶಾಸ್ತ್ರೀ ಅವರ ಬಗ್ಗೆ ನನಗೆ ನಂಬಿಕೆ ಇಲ್ಲ. ಅಲ್ಲದೆ, ರವಿ ಶಾಸ್ತ್ರೀ ಅವರು ಶ್ರೀನಿವಾಸನ್ ಬಂಟರಂತೆ ಇದ್ದಾರೆ' ಎಂದು ವರ್ಮಾ ಆರೋಪ ಮಾಡಿದ್ದಾರೆ. ಬಿಸಿಸಿಐ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ತನಿಖಾ ಸಮಿತಿಯ ನೇತೃತ್ವ ವಹಿಸಿಕೊಳ್ಳಲಿ ಎಂದು ಈ ಮುನ್ನ ವರ್ಮಾ ಒತ್ತಾಯಿಸಿದ್ದರು. ಇದಲ್ಲದೆ, ಸಭೆಯಲ್ಲಿ ಎರಡು ಬಣಗಳ ನಡುವ ತೀವ್ರ ವಾಗ್ವಾದ ನಡೆದಿದ್ದು ಕಂಡುಬಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.