ಕ್ರೀಡೆ

ಪಂಜಾಬ್ ಭೀತಿಯಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್

Published On :

ಶಾರ್ಜಾ: ಆಡಿರುವ ಎರಡೂ ಪಂದ್ಯಗಳಲ್ಲಿ ಅದ್ಭುತ ಫಲಿತಾಂಶ ಕಂಡುಕೊಂಡಿರುವ ಕಿಂಗ್ಸ್ ಇವೆನ್ ಪಂಜಾಬ್ ತಂಡ ಮತ್ತು ಆರಂಭಿಕ ಸೋಲಿನ ಆಘಾತದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ಮಂಗಳವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಪರಸ್ಪರ ಸೆಣಸಲಿವೆ.
ಮೊದಲೆರಡು ಪಂದ್ಯಗಳಲ್ಲಿ ಬೃಹತ್ ಮೊತ್ತ ಬೆನ್ನಟ್ಟಿ ವಿಜಯ ಕಂಡುಕೊಂಡು ಆತ್ಮವಿಶ್ವಾಸದಿಂದ ಬೀಗುತ್ತಿರುವ ಪಂಜಾಬ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಸೋಲಿನ ಭೀತಿಯಲ್ಲಿದೆ. ಸನ್‌ರೈಸರ್ಸ್ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲನುಭವಿಸಿದೆ.
ಹೀಗಾಗಿ, ಚೆನ್ನೈ ವಿರುದ್ಧ 205 ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧ 191 ರನ್‌ಗಳ ಗುರಿಯನ್ನು ಸುಲಭವಾಗಿ ಚೇಸ್ ಮಾಡಿದ ಪಂಜಾಬ್, ತನಗೆ ಯಾವುದೇ ಬೃಹತ್ ಮೊತ್ತ ಕಠಿಣ ಸವಾಲಾಗಲಾರದು ಎಂಬುದನ್ನು ಸಾಬೀತುಪಡಿಸಿದೆ.
ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಡೇವಿಡ್ ಮಿಲ್ಲರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಚೆನ್ನೈ ವಿರುದ್ಧ 43 ಎಸೆತಗಳಲ್ಲಿ 95 ರನ್ ಮತ್ತು ರಾಜಸ್ಥಾನದ ವಿರುದ್ಧ 45 ಎಸೆತಗಳಲ್ಲಿ 89 ರನ್ ಗಳಿಸಿದ್ದ ಮ್ಯಾಕ್ಸ್‌ವೆಲ್ ಅವರು ಐಪಿಎಲ್‌ನ 7ನೇ ಆವೃತ್ತಿಯಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಇನ್ನು ಮಿಲ್ಲರ್ ಸಹ ಅಷ್ಟೇ, ಚೆನ್ನೈ ವಿರುದ್ಧ 37 ಎಸೆತಗಳಲ್ಲಿ 54 ರನ್ ಮತ್ತು ರಾಜಸ್ಥಾನದ ವಿರುದ್ಧ 19 ಎಸೆತಗಳಲ್ಲಿ 51 ರನ್ ಗಳಿಸುವ ಮೂಲಕ ಬೌಲರ್‌ಗಳು ಬೆಚ್ಚಿಬೀಳುವಂತೆ ಮಾಡಿದ್ದರು. ಹೀಗಾಗಿ ಸನ್‌ರೈಸರ್ ವಿರುದ್ಧ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಅದೇ ರೀತಿಯ ಫಾರ್ಮ್‌ನಲ್ಲಿ ಮುಂದುವರಿಯಲಿ ಎಂಬ ನಿರೀಕ್ಷೆಯಲ್ಲಿದೆ ಪಂಜಾಬ್ ತಂಡ.
ಆದರೆ, ಹೈದರಾಬಾದ್ ತಂಡ ಡೇಲ್ ಸ್ಟೇಯ್ನ್, ಇಶಾಂತ್ ಶರ್ಮಾ ಹಾಗೂ ಭುವನೇಶ್ವರ ಕುಮಾರ್ ಅವರನ್ನೊಳಗೊಂಡ ಉತ್ತಮ ಬೌಲಿಂಗ್ ವಿಭಾಗವನ್ನು ಹೊಂದಿದ್ದು, ಈ ಮೂವರು ಮ್ಯಾಕ್ಸ್‌ವೆಲ್ ಮತ್ತು ಡೇಲ್ ಸ್ಟೇಯ್ನ್ ಅವರನ್ನು ಹೇಗೆ ನಿಯಂತ್ರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಮೂವರು ರಾಜಸ್ಥಾನದ ವಿರುದ್ಧ 31 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಪಂಜಾಬ್ ವಿರುದ್ಧವೂ ಇದೇ ರೀತಿಯ ಪ್ರದರ್ಶನವನ್ನು ನೀಡುವರೇ ಕಾದು ನೋಡಬೇಕಿದೆ.
ಇನ್ನು ಸ್ಪಿನ್ ವಿಭಾಗದಲ್ಲಿ ಸನ್‌ರೈಸರ್ಸ್ ಭಾರತದ ಅಮಿತ್ ಮಿಶ್ರಾ ಮತ್ತು ಮೀರತ್‌ನ ಕರಣ್ ಶರ್ಮಾ ಅವರನ್ನು ಹೊಂದಿದೆ. ಮಿಶ್ರಾ ಅವರು ಅದ್ಭುತ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ. ಕರಣ್ ಸಹ ಕಳೆದ ಆವೃತ್ತಿಯಲ್ಲಿ ಹೈದರಾಬಾದ್ ಪರ 11 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಪಂದ್ಯದ ಮಧ್ಯ ಓವರ್‌ಗಳಲ್ಲಿ ಈ ಇಬ್ಬರು ಬೌಲಿಂಗ್ ಮಾಡುವ ನಿರೀಕ್ಷೆ ಇದ್ದು, ಇಬ್ಬರ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ.ಆದರೆ, ಇನ್ನೊಂದೆಡೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಇದುವರೆಗೂ ತನ್ನ ಪಂದ್ಯಗಳಲ್ಲಿ ಜಯ ಕಂಡುಕೊಂಡಿದ್ದರೂ, ಅದರ ಬೌಲಿಂಗ್ ವಿಭಾಗ ಮಾತ್ರ ಅಷ್ಟೊಂದು ಹೇಳಿಕೊಳ್ಳುವಂತಿಲ್ಲ. ಅವರ ವೇಗ ಮತ್ತು ಸ್ಪಿನ್ ಎರಡೂ ವಿಭಾಗಗಳೂ ಮೊನಚಾದ ಬೌಲಿಂಗ್ ಪ್ರದರ್ಶಿಸುವಲ್ಲಿ ವೈಫಲ್ಯ ಕಂಡಿವೆ. ಹೀಗಾಗಿ ಕಳೆದ ಎರಡೂ ಪಂದ್ಯಗಳಲ್ಲಿ ಎದುರಾಳಿ ತಂಡಗಳು ಬೃಹತ್ ಮೊತ್ತವನ್ನೇ ಕಲೆಹಾಕಿದ್ದವು. ಆ್ಯಶಸ್ ಸರಣಿಯಲ್ಲಿ ಹರಿಸಿದ್ದ ಮಿಂಚನ್ನೇ ಐಪಿಎಲ್‌ನಲ್ಲಿ ಹರಿಸುವಲ್ಲಿ ಮಿಚೆಲ್ ಜಾನ್ಸನ್ ವೈಫಲ್ಯ ಕಂಡಿದ್ದಾರೆ. ಇನ್ನಿಬ್ಬರು ವೇಗಿಗಳಾದ ಲಕ್ಷ್ಮೀಪತಿ ಬಾಲಾಜಿ ಮತ್ತು ಪರ್ವಿಂದರ್ ಅವಾನಾ ಅವರು ದುಬಾರಿಯಾಗಿ ಪರಿಣಮಿಸಿದ್ದಾರೆ.ಸ್ಪಿನ್ ವಿಭಾಗದಲ್ಲಿ ಅಕ್ಷರ್ ಪಟೇಲ್ ಕೆಲ ವಿಕೆಟ್ ಪಡೆದಿದ್ದಾರೆ. ಆದರೆ, ಮುರಳಿ ಕಾರ್ತಿಕ್ ಅಥವಾ ಮ್ಯಾಕ್ಸ್‌ವೆಲ್ ಅವರಿಂದ ತಕ್ಕ ಸಾಥ್ ಪಟೇಲ್‌ಗೆ ದೊರಕುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.