ಸೂಪರ್ ಕಿಂಗ್ಸ್ಗೆ ರಾಯಲ್ಸ್ ಸೆಡ್ಡು
ದುಬೈ: ಕಳೆದ ಪಂದ್ಯದ ಮೂಲಕ ಗೆಲವಿನ ಲಹರಿಗೆ ಮರಳಿದ ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟಿ-20 ಪಂದ್ಯದಲ್ಲಿ ಈಗ ಮತ್ತೊಂದು ಜಯದ ಕನಸು ಕಾಣುತ್ತಿದೆ.ಮತ್ತೊಂದೆಡೆ ಶುಭಾರಂಭ ಮಾಡಿದರೂ, ಎರಡನೇ ಹೆಜ್ಜೆಯಲ್ಲಿ ಮುಗ್ಗರಿಸಿರುವ ರಾಜಸ್ಥಾನ್ ರಾಯಲ್ಸ್ ಪಡೆ ಪುನಃ ಜಯದ ಹಾದಿಗೆ ಮರಳಲು ಪಣತೊಟ್ಟಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಬುಧವಾರ ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಪ್ರಸಕ್ತ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅವಮಾನಕಾರಿ ಸೋಲು ಕಂಡಿತ್ತು. ಮೊದಲು ಬ್ಯಾಟ್ ಮಾಡಿ 205 ರನ್ಗಳ ಬೃಹತ್ ಮೊತ್ತ ದಾಖಲಿಸಿದರೂ ಸಹ ಸೋಲಿನ ಕಹಿ ಉಣ್ಣಬೇಕಾಗಿತ್ತು.
ಆದರೆ, ಎರಡನೇ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ 93 ರನ್ಗಳ ಭಾರಿ ಅಂತರದಲ್ಲಿ ಜಯ ದಾಖಲಿಸಿದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಪಡೆಯಲ್ಲಿ ಇದೀಗ ಹೊಸ ಹುಮ್ಮಸ್ಸು ತುಂಬಿದೆ.
ರಾಜಸ್ಥಾನ ರಾಯಲ್ಸ್ ಆಟಗಾರರು ತಮ್ಮ ಮೊದಲ ಸಮರದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಅದ್ಭುತ ಜಯ ಸಂಪಾದಿಸಿದ್ದರೂ, ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪರಾಜಯ ಅನುಭವಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಆಟಗಾರರು ತಲಾ ಒಂದು ಗೆಲವು ಮತ್ತು ಸೋಲಿನ ಫಲಿತಾಂಶ ಪಡೆದಿದ್ದು, ಸದ್ಯ ಟೂರ್ನಿಯಲ್ಲಿ ಸಮನಾಗಿ ಕಹಿ-ಸಿಹಿ ಅನುಭವಿಸಿವೆ. ಹಾಗಾಗಿ, ನಾಳೆ ನಡೆಯಲಿರುವ ಪಂದ್ಯದಲ್ಲಿ ಇಬ್ಬರ ನಡುವೆ ಯಾರು ಶಕ್ತಿಶಾಲಿ ಎನ್ನುವುದು ತಿಳಿಯಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಬಲಾಢ್ಯ ಬ್ಯಾಟಿಂಗ್ ಕ್ರಮಾಂಕ ಹೊಂದಿದೆ. ಕಳೆದ ಪಂದ್ಯದಲ್ಲಿ ಎಡಗೈ ಆಟಗಾರ ಸುರೇಶ್ ರೈನಾ ಆಕರ್ಷಕ ಅರ್ಧಶತಕ ಬಾರಿಸಿದ್ದರು. ಉಳಿದಂತೆ, ಅನುಭವಿಗಳಾದ ನ್ಯೂಜಿಲೆಂಡ್ನ ಬ್ರೆಂಡನ್ ಮೆಕಲಂ ಮತ್ತು ವೆಸ್ಟ್ ಇಂಡೀಸ್ನ ಡ್ವೈನ್ ಸ್ಮಿತ್ ಕೇಂದ್ರಬಿಂದುವಾಗಿದ್ದಾರೆ. ಇನಿಂಗ್ಸ್ ಆರಂಭಿಸಲಿರುವ ಮೆಕಲಂ ಮತ್ತು ಸ್ಮಿತ್ ಭದ್ರ ಅಡಿಪಾಯ ಹಾಕಿಕೊಟ್ಟಲ್ಲಿ ಚೆನ್ನೈಗೆ ಬೃಹತ್ ಸಂಪಾದಿಸುವುದು ಕಷ್ಟವಾಗಲಿಕ್ಕಿಲ್ಲ. ಏಕೆಂದರೆ, ಮಧ್ಯಮ ಕ್ರಮಾಂಕದಲ್ಲಿ ರೈನಾ ಹೊರತಾಗಿ ನಾಯಕ ಧೋನಿ, ಫಫ್ ಡು ಪ್ಲೆಸಿಸ್ ಮತ್ತು ರವೀಂದ್ರ ಜಡೇಜಾರಂತಹ ಸಮರ್ಥ ದಾಂಡಿಗರಿದ್ದಾರೆ.
ಬೌಲಿಂಗ್ನಲ್ಲಿ ಈಶ್ವರ್ ಪಾಂಡೆ, ಬೆನ್ ಹಿಲ್ಫೆನ್ಹಾಸ್, ಮೋಹಿತ್ ಶರ್ಮಾ, ಸ್ಯಾಮುಯೆಲ್ ಬದ್ರಿ, ಡ್ವೈನ್ ಸ್ಮಿತ್, ಜಡೇಜಾ, ಅಶ್ವಿನ್ ಹೀಗೆ ಭರವಸೆಯ ದಾಳಿಕಾರರು ಆ ತಂಡದ ಶಕ್ತಿಯಾಗಿದ್ದಾರೆ.
ಇನ್ನು ಮೊದಲ ಆವೃತ್ತಿಯಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರಾಜಸ್ಥಾನ ರಾಯಲ್ಸ್ ಸಾಮರ್ಥ್ಯವನ್ನು ಹಗುರವಾಗಿ ಕಾಣಲು ಸಾಧ್ಯವಿಲ್ಲ. ಶೇನ್ ವ್ಯಾಟ್ಸನ್ ಸಾರಥ್ಯದ ರಾಜಸ್ಥಾನ ರಾಯಲ್ಸ್ ಪಡೆ ಬ್ಯಾಟಿಂಗ್ ಮತ್ತು ಬೌಲಿಂಗ್ಗಳೆರಡರಲ್ಲೂ ಸಮತೋಲನದಿಂದ ಕೂಡಿದೆ.
ಅಜಿಂಕ್ಯಾ ರಹಾನೆ, ಸಂಜು ಸ್ಯಾಮ್ಸನ್, ವ್ಯಾಟ್ಸನ್, ಸ್ಟುವರ್ಟ್ ಬಿನ್ನಿ, ಸ್ಟೀವನ್ ಸ್ಮಿತ್, ಜೇಮ್ಸ್ ಫಾಕ್ನರ್ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳಾಗಿದ್ದಾರೆ. ಬೌಲಿಂಗ್ನಲ್ಲಿ ಕೇನ್ ರಿಚರ್ಡ್ಸನ್, ಫಾಕ್ನರ್, ಧವಳ್ ಕುಲಕರ್ಣಿ, ಭಾಟಿಯಾ, ಟಿಮ್ ಸೌಥಿ, ಬಿನ್ನಿ, ಅಮಿತ್ ಮಿಶ್ರಾ, ಕೂಪರ್, ಪ್ರವೀಣ್ ತಾಂಬೆ... ಹೀಗೆ ಹೆಚ್ಚು ಆಯ್ಕೆಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

