ಕ್ರೀಡೆ

ಚೆನ್ನೈ ಮಣಿಸುವರೇ ಚಾಂಪಿಯನ್ನರು?

Published On :

ದುಬೈ: ಮೊದಲ ಜಯಕ್ಕಾಗಿ ತಡಕಾಡುತ್ತಿರುವ ಹಾಲಿ ಚಾಂಪಿಯನ್ ಮುಂಬೈ ತಂಡ, ಶುಕ್ರವಾರ ನಡೆಯಲಿರುವ ಐಪಿಎಲ್‌ನ 2ನೇ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.ಮುಂಬೈ ತಂಡ ಇದುವರೆಗೂ ಪಂದ್ಯಾವಳಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 41 ರನ್‌ಗಳ ಅಂತರದಿಂದ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 7 ವಿಕೆಟ್ ಅಂತರದಿಂದ ಪರಾಭವ ಹೊಂದಿದೆ.ಹೀಗಾಗಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲೂ ಸಾಕಷ್ಟು ವೃದ್ಧಿ ಕಾಣಬೇಕಿದೆ. ಕೋಲ್ಕತಾ ವಿರುದ್ಧ 122 ರನ್ ಗಳಿಸಿದ್ದ ಮುಂಬೈ ತಂಡ ಬೆಂಗಳೂರು ವಿರುದ್ಧ ಕೇವಲ 115 ರನ್ ಗಳಿಸಿತ್ತು. ಇದು ಮುಂಬೈ ಬ್ಯಾಟಿಂಗ್ ವೈಫಲ್ಯವನ್ನು ತೋರ್ಪಡಿಸುತ್ತದೆ.
ಅಂಬಟಿ ರಾಯುಡು ಎರಡೂ ಪಂದ್ಯಗಳಲ್ಲಿ ಬ್ಯಾಟ್‌ನೊಂದಿಗೆ ಗುಡುಗಿದ್ದರು. ಆದರೆ, ಅದನ್ನು ದೊಡ್ಡ ಮೊತ್ತವಾಗಿಸುವಲ್ಲಿ ವೈಫಲ್ಯ ಕಂಡಿದ್ದಾರೆ. ಹಿರಿಯ ಆಟಗಾರರಾದ ಮೈಕ್ ಹಸ್ಸಿ, ನಾಯಕ ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್ ಹಾಗೂ ಆಲ್ರೌಂಡರ್ ಕೋರೆ ಆ್ಯಂಡರ್ಸನ್ ಅವರು ಗಮನ ಸೆಳೆಯುವ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಅವೆರಲ್ಲ ಇನ್ನಷ್ಟು ಜವಾಬ್ದಾರಿ ವಹಿಸಿಕೊಳ್ಳಬೇಕಾದ ಅಗತ್ಯವಿದೆ.ಇನ್ನು ಬೌಲಿಂಗ್ ವಿಭಾಗದಲ್ಲಿ ಹಿರಿಯ ವೇಗಿ ಜಹೀರ್ ಖಾನ್ ಮತ್ತು ಲಸಿತ್ ಮಾಲಿಂಗ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಸ್ಪಿನ್ ವಿಭಾಗದಲ್ಲಿ ಹರ್ಭಜನ್ ಸಿಂಗ್ ಮತ್ತು ಪ್ರಗ್ಯಾನ್ ಓಜಾ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ನಿಯಂತ್ರಣ ಸಾಧಿಸಲಾಗುತ್ತಿಲ್ಲ.ಹರ್ಭಜನ್ ತಕ್ಕ ಪ್ರದರ್ಶನ ನೀಡಿದರೆ, ಓಜಾ ಹೆಚ್ಚಿನ ರನ್ ಸೋರಿಕೆ ಮಾಡುತ್ತಿದ್ದಾರೆ. ಈ ಇಬ್ಬರ ಕಳಪೆ ಪ್ರದರ್ಶನ ತಂಡದ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ. ಅಲ್ಲದೆ, ತಂಡದ ಕೋಚ್ ಜಾನ್ ರೈಟ್ ಮತ್ತು ಮೆಂಟರ್ ಸಚಿನ್ ತೆಂಡೂಲ್ಕರ್ ಅವರ ಕಳವಳಕ್ಕೂ ಕಾರಣವಾಗಿದೆ.ಇನ್ನೊಂದೆಡೆ ಚೆನ್ನೈ ತಂಡ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 6 ವಿಕೆಟ್ ಅಂತರದಿಂದ ಸೋಲನುಭವಿಸಿತ್ತು. ಆದರೆ, ನಂತರ ನಡೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ರಾಜಸ್ಥಾನದ ವಿರುದ್ಧ ಜಯ ಸಾಧಿಸಿ ಫಾರ್ಮ್‌ಗೆ ಮರಳಿದೆ.ಹೀಗಾಗಿ ಉಭಯ ತಂಡಗಳ ಬಲಾಬಲವನ್ನು ಪರೀಕ್ಷಿಸಿದಾಗ, ಪಂದ್ಯದಲ್ಲಿ ಚೆನ್ನೈ ಗೆಲ್ಲುವ ಫೇವರಿಟ್ ಎನಿಸಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿದೆ. ರಾಜಸ್ಥಾನದ ವಿರುದ್ಧ 28 ಎಸೆತಗಳಲ್ಲಿ 50 ರನ್ ಗಳಿಸಿದ್ದ ಚೈನ್ನೈ ತಂಡದ ಬ್ಯಾಟ್ಸ್‌ಮನ್ ಡ್ವೈನ್ ಸ್ಮಿತ್ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.ಇನ್ನು ಐಪಿಎಲ್‌ನಲ್ಲಿ ತಮ್ಮ 20ನೇ ಅರ್ಧ ಶತಕ ದಾಖಲಿಸಿದ ಸುರೇಶ್ ರೈನಾ ಅವರು ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿರುವ ಬ್ರೆಂಡಾನ್ ಮೆಕಲಂ ಮುಂಬೈ ವಿರುದ್ಧ ಬ್ಯಾಟ್‌ನೊಂದಿಗೆ ಗುಡುಗುವ ನಿರೀಕ್ಷೆಗಳಿವೆ.ಅಲ್ಲದೆ, ಫಫ್ ಡು ಪ್ಲೆಸಿಸ್ ಸದಾ ಅಪಾಯಕಾರಿ ಬ್ಯಾಟ್ಸ್‌ಮನ್ ಎನಿಸಿದರೆ, ಆಲ್ರೌಂಡ್ ಆಟಗಾರ ರವೀಂದ್ರ ಜಡೇಜಾ ಯಾವುದೇ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಲಿದ್ದಾರೆ. ನಾಯಕ ರಾಜಸ್ಥಾನದ ವಿರುದ್ಧ 33 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದ ರವೀಂದ್ರ ಜಡೇಜಾ ಚೆನ್ನೈ ಬೌಲಿಂಗ್‌ಗೆ ತಕ್ಕ ಸಾಥ್ ನೀಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.