ಕ್ರೀಡೆ

ಮತ್ತೆ ರಾಷ್ಟ್ರೀಯ ತಂಡಕ್ಕೆ ಆಡಬೇಕು

Published On :

ಐ-ಲೀಗ್‌ನಲ್ಲಿ ಪದಾರ್ಪಣೆ ಮಾಡಿದ ವರ್ಷವೇ ಚಾಂಪಿಯನ್ ಪಟ್ಟಕ್ಕೇರಿದ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ಭಾಗವಾಗಿದ್ದ ಕರ್ನಾಟಕದ ಆಟಗಾರ ನಂಜನಗೂಡು ಶಿವನಂಜು ಮಂಜು ಕನ್ನಡ ಪ್ರಭದ ಜೊತೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.  


- ಲೀಗ್‌ನಲ್ಲಿ ಪದಾರ್ಪಣೆ ಮಾಡಿದ ವರ್ಷವೇ ಚಾಂಪಿಯನ್ ಪಟ್ಟಕ್ಕೇರಿದ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ಭಾಗವಾಗಿದ್ದ ಕರ್ನಾಟಕದ ಆಟಗಾರ ನಂಜನಗೂಡು ಶಿವನಂಜು ಮಂಜು ಮತ್ತೆ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಆಡಬೇಕೆಂಬ ಗುರಿಯನ್ನು ಹೊಂದಿದ್ದಾರೆ.
ಇದುವರೆಗೂ ಎಚ್‌ಎಎಲ್, ಮೊಹನ್ ಬಗಾನ್, ಮಹೀಂದ್ರ ಯುನೈಟೆಡ್, ಪುಣೆ ಕ್ಲಬ್‌ಗಳ ಜತೆಗೆ ಭಾರತ ರಾಷ್ಟ್ರೀಯ ತಂಡದ ಆಟಗಾರನಾಗಿದ್ದ ಮಂಜು ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಕಳೆದ ಋತುವಿನಲ್ಲಿ ಹೆಚ್ಚಿನ ಪಂದ್ಯಾವಳಿಗಳಲ್ಲಿ ಭಾಗವಹಿಸದ ಮಂಜು. ಈ ಸಾಲಿನಲ್ಲಿ ಬಿಎಫ್‌ಸಿ ತಂಡದ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ.
ಬಿಎಫ್‌ಸಿ ತಂಡದಲ್ಲಿ ಸಾಕಷ್ಟು ಅಂಶಗಳನ್ನು ಕಲಿತಿರುವ ಮಂಜು ಮತ್ತೆ ರಾಷ್ಟ್ರೀಯ ತಂಡದ ಬಾಗಿಲು ತಟ್ಟಲು ಪ್ರಯತ್ನ ನಡೆಸುತ್ತಿದ್ದಾರೆ. ಬಿಎಫ್‌ಸಿ ತಂಡದ ಯಶಸ್ಸಿನ ಹಾದಿಯಲ್ಲಿ ತಮಗೆ ಸಿಕ್ಕ ಅನುಭವ, ಸ್ಫೂರ್ತಿ ಹಾಗೂ ಕಲಿತ ಅಂಶಗಳನ್ನು ಮಂಜು ಕನ್ನಡ ಪ್ರಭದೊಂದಿಗೆ ಹಂಚಿಕೊಂಡಿದ್ದಾರೆ.
- ಚಾಂಪಿಯನ್ ತಂಡದ ಭಾಗವಾಗಿರುವ ಅನುಭವ?
ಈ ಹಿಂದೆ ನಾನು ಹಲವಾರು ಪಂದ್ಯಗಳಲ್ಲಿ ಪ್ರಶಸ್ತಿ ಗೆದ್ದ ತಂಡದಲ್ಲಿದ್ದೆ. ಆದರೆ ಬಿಎಫ್‌ಸಿ ತಂಡದಲ್ಲಿ ಐ ಲೀಗ್ ಪ್ರಶಸ್ತಿ ಗೆದ್ದ ಅನುಭವವನ್ನು ಅವಿಸ್ಮರಣಿಯ. ಅದರಲ್ಲೂ ತಂಡ ಪಂದ್ಯಾವಳಿಯಲ್ಲಿ ಪದಾರ್ಪಣೆ ಮಾಡಿದ ವರ್ಷವೇ ಚಾಂಪಿಯನ್ ಆಗಿದ್ದು, ಮರೆಯಲಾಗದ ಕ್ಷಣವಾಗಿದೆ. ನಾನು ತಂಡದ ಸ್ಥಳೀಯ ಆಟಗಾರನಾಗಿರುವುದರಿಂದ ಈ ಸಂತೋಷವನ್ನು ವ್ಯಕ್ತಪಡಿಸಲು ಪದಗಳು ಸಿಗುತ್ತಿಲ್ಲ.
- ಹಿರಿಯ ಹಾಗೂ ವಿದೇಶಿ ಆಟಗಾರರ ಜತೆ ಗೆ ಆಡಿದ ಅನುಭವ?
ನಾಯಕ ಸುನಿಲ್ ಛೆಟ್ರಿ ಜತೆಗೆ ಈ ಹಿಂದೆ ಭಾರತ ತಂಡದಲ್ಲಿ ಆಡಿದ ಅನುಭವವಿತ್ತು. ಇನ್ನು ಸೀನ್ ರೂನಿ, ಜಾನ್ ಜಾನ್ಸನ್ ಸೇರಿದಂತೆ ಇತರೆ ವಿದೇಶಿ ಆಟಗಾರು ಫುಟ್ಬಾಲ್ ದೇಶಗಳ ಆಟಗಾರರಾಗಿದ್ದಾರೆ. ಅವರ ಆಟದ ಗುಣಮಟ್ಟ ಹೆಚ್ಚಾಗಿರುತ್ತದೆ. ಅವರ ಅಭ್ಯಾಸ ಶೈಲಿ, ಡಯೆಟ್, ಫಿಟ್ನೆಸ್ ಕಾಯ್ದುಕೊಳ್ಳುವ ವೈಖರಿ ಹೀಗೆ ಹಲವಾರು ಅಂಶಗಳನ್ನು ಕಲಿತಿದ್ದೇನೆ. ಪಂದ್ಯದ ವೇಳೆ ಅವರ ಹಿಂದಿನ ಅನುಭವಗಳನ್ನು ಹಂಚಿಕೊಂಡಿದ್ದು, ಅವರಿಂದ ಕಲಿಯುವುದು ಸಾಕಷ್ಟಿದೆ. ಹಾಗಾಗಿ ನಮ್ಮಲ್ಲಿನ ಕೊರತೆಗೆ ತಕ್ಕಂತೆ ಕಲಿಯಬೇಕಾಗುತ್ತದೆ.
- ಈ ವರ್ಷದ ಐಲೀಗ್‌ನಿಂದ ಸಿಕ್ಕ ಪ್ಲಸ್ ಪಾಯಿಂಟ್?
ಬಿಎಫ್‌ಸಿ ತಂಡದಲ್ಲಿ ಆಡಿದ್ದರಿಂದ ಸಿಕ್ಕ ಪ್ಲಸ್ ಪಾಯಿಂಟ್ ಎಂದರೆ, ನನ್ನ ಆಟದ ಗುಣಮಟ್ಟ ಹೆಚ್ಚಾಗಿದೆ. ಅಭ್ಯಾಸದ ಶೈಲಿ, ಕ್ರಮಬದ್ಧತೆ, ಹಾಗೂ ಕ್ರೀಡೆಯಲ್ಲಿನ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಲು ಉತ್ತಮ ಅವಕಾಶ ದೊರೆಯಿತು. ಎಲ್ಲಕ್ಕಿಂತ ಹೆಚ್ಚಾಗಿ ಫುಟ್ಬಾಲ್ ಆಟಗಾರನಾಗಿ ಮೈದಾನದ ಒಳಗೆ ಹಾಗೂ ಹೊರಗೆ ಯಾವ ರೀತಿಯಲ್ಲಿರಬೇಕು ಎಂಬುದನ್ನು ಅರಿತೆ.
-ಈ ಗೆಲವಿನಿಂದ ಭವಿಷ್ಯದ ವೃತ್ತಿ ಜೀವನಕ್ಕೆ ಸಿಕ್ಕ ಸ್ಫೂರ್ತಿ?
ಕಳೆದ ಸಾಲಿನಲ್ಲಿ ನಾನು ಹೆಚ್ಚಿನ ಪಂದ್ಯಾವಳಿಯಲ್ಲಿ ಭಾಗವಹಿಸಿರಲಿಲ್ಲ. ಈ ಬಾರಿಯ ಐ ಲೀಗ್‌ನಲ್ಲಿ ಸ್ಥಳೀಯ ತಂಡದಲ್ಲಿ ಅವಕಾಶ ಸಿಕ್ಕಿದ್ದು, ನನ್ನ ಅದೃಷ್ಟ. ಇದು ನನ್ನ ವೃತ್ತಿ ಜೀವನದ ಎರಡನೇ ಇನಿಂಗ್ಸ್ ಆಗಿದೆ. ಈ ಗೆಲವು ನನ್ನಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿದ್ದು, ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಡಬೇಕೆಂಬ ಸ್ಫೂರ್ತಿ ಮೂಡಿದೆ. ಅದಕ್ಕಾಗಿ ಕಠಿಣ ಪರಿಶ್ರಮ ಹಾಕುವ ಛಲ ನನ್ನಲ್ಲಿದೆ.
- ಆಶ್ಲೆ ವೆಸ್ಟ್‌ವುಡ್ ಮಾರ್ಗದರ್ಶನದ ಬಗ್ಗೆ?
ಬಿಎಫ್‌ಸಿ ತಂಡವನ್ನು ಕಟ್ಟದ್ದು ಆ್ಯಶ್ಲೆ ವೆಸ್ಟ್‌ವುಡ್. ಸುಮಾರು 9-10 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ನಾನು ಕಂಡ ಅತ್ಯುತ್ತಮ ಕೋಚ್ ಇವರು. ಅವರ ಕ್ರೀಡೆಯಲ್ಲಿನ ಬದ್ಧತೆ ನಮ್ಮಲ್ಲಿ ಸ್ಫೂರ್ತಿ ನೀಡುತ್ತದೆ. ಪ್ರತಿ ಆಟಗಾರನ ಸಮಸ್ಯೆಯನ್ನು ಗುರುತಿಸಿ ಅದನ್ನು ಅತ್ಯುತ್ತಮ ರೀತಿಯಲ್ಲಿ ಬಗೆಹರಿಸುತ್ತಿದ್ದರು. ತಂಡದ ಈ ಯಶಸ್ಸಿನ ಶ್ರೇಯ ಅವರಿಗೆ ಸಲ್ಲಬೇಕು. ತಂಡದ ಈ ಸಾಧನೆ ಅವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.
-ದೇಶದ ಫುಟ್ಬಾಲ್ ಕ್ರೀಡೆಯಲ್ಲಿ ರಾಜ್ಯ ಆಟಗಾರರ ಸಾಧನೆ?
ಕರ್ನಾಟಕದ ಸಾಕಷ್ಟು ಆಟಗಾರರು ಬೇರೆ ಬೇರೆ ಕ್ಲಬ್‌ಗಳಿಗೆ ಆಡುತ್ತಿದ್ದಾರೆ. ಆದರೆ ಅವರನ್ನು ಗುರುತಿಸುತ್ತಿಲ್ಲವೆಂಬುದು ಬೇಸರದ ಸಂಗತಿ. ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ದಕ್ಷಿಣ ಭಾರತದಲ್ಲಿ ಕೇರಳದಂತೆ ನಮ್ಮ ರಾಜ್ಯದಲ್ಲೂ ಉತ್ತಮ ಪ್ರತಿಭೆಗಳಿದ್ದಾರೆ. ಮುಂದಿನ ವರ್ಷಗಳಲ್ಲಿ ಎಲ್ಲಾ ಆಟಗಾರರು ಮತ್ತಷ್ಟು ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ.


-ಸೋಮಶೇಖರ ಪಿ. ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.