ಕ್ರೀಡೆ

ಇಬ್ಬರೂ ತಪ್ಪಿತಸ್ಥರಲ್ಲ

ಇಬ್ಬರೂ ತಪ್ಪಿತಸ್ಥರಲ್ಲ
Published On :

ಸೌಥಾಮ್ಟನ್: ಗಂಭೀರ ಸ್ವರೂಪ ಪಡೆದುಕೊಂಡಂತಿದ್ದ ಭಾರತದ ರವೀಂದ್ರ ಜಡೇಜಾ ಮತ್ತು ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ನಡುವಿನ ಮಾತಿನ ಚಕಮಕಿ ಶಾಂತವಾಗಿ ತೆರೆ ಕಂಡಿದೆ. ಕಾರಣ, ಪ್ರಕರಣದ ಕುರಿತು ಶುಕ್ರವಾರ ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಂಗ ಆಯುಕ್ತರು, ಇಬ್ಬರೂ ತಪ್ಪಿತಸ್ಥರಲ್ಲ ಎಂದು ತೀರ್ಪು ನೀಡಿದ್ದಾರೆ.
ಒಂದು ಹಂತದಲ್ಲಿ ಗಂಭೀರವಾಗಿದ್ದ ಪ್ರಕರಣ ಶಾಂತಿವಾಗಿ ಅಂತ್ಯಗೊಂಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಬ್ಬರೂ ಆಟಗಾರರನ್ನು ದಂಡ ಮತ್ತು ಪಂದ್ಯ ನಿಷೇಧದಿಂದ ಪಾರು ಮಾಡಿರುವುದರ ಹಿಂದೆ ಬಿಸಿಸಿಐ ಹಸ್ತಕ್ಷೇಪ ಇರುವ ಸಾಧ್ಯತೆಗಳಿವೆ.
ನ್ಯಾಯಾಂಗ ಆಯುಕ್ತರಾದ ಗೊರ್ಡನ್ ಲೂಯಿಸ್ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಸಿದರು. ಲೂಯಿಸ್ ನೀಡಿದ ತೀರ್ಪು ಜೇಮ್ಸ್ ಆ್ಯಂಡರ್ಸನ್‌ಗೆ ಭಾರೀ ಸಮಾಧಾನ ತಂದಿದೆ. ಕಾರಣ, ಆ್ಯಂಡರ್ಸನ್ ವಿರುದ್ಧ 3ನೇ ಸ್ತರದ ಆರೋಪ ಸಾಬೀತಾಗಿದ್ದರೆ, ಎರಡು ಟೆಸ್ಟ್ ಪಂದ್ಯಗಳ ನಿಷೇಧ ಎದುರಿಸಬೇಕಾಗುತ್ತಿತ್ತು. ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಭೋಜನ ವಿರಾಮದ ಸಮಯದಲ್ಲಿ ಆ್ಯಂಡರ್ಸನ್ ಅವರು ಜಡೇಜಾ ಅವರನ್ನು ದೂಡಿದ ಮತ್ತು ನಿಂದನೆ ಮಾಡಿದ ಆರೋಪ ಎದುರಿಸುತ್ತಿದ್ದರು. ಇಂಗ್ಲೆಂಡ್ ತಂಡ ಜಡೇಜಾ ಮೇಲೆ ಎರಡನೇ ಸ್ತರದ ಆಪರಾಧ ಹೊರಿಸಬೇಕು ಎಂದು ಒತ್ತಡ ಹೇರಿತ್ತು.
ವಿಚಾರಣೆಯಲ್ಲಿ ಆ್ಯಂಡರ್ಸನ್ ಅವರನ್ನು ನಿಕ್ ಡಿ ಮಾರ್ಕೋ ಅವರು ಪ್ರತಿನಿಧಿಸಿದ್ದರೆ, ಜಡೇಜಾ ಅವರನ್ನು ಆ್ಯಡಂ ಲೂಯಿಸ್ ಅವರು ಪ್ರತಿನಿಧಿಸಿದ್ದರು. ಉಭಯ ತಂಡಗಳ ಮ್ಯಾನೇಜರ್ ಸಹ ವಿಚಾರಣೆಯಲ್ಲಿ ಭಾಗವಹಿಸಿದ್ದರು. ಇಂಗ್ಲೆಂಡ್ ತಂಡದ ಪಾಲ್ ಡೌಟಾನ್ ಮತ್ತು ಬಿಸಿಸಿಐನ ಸುಂದರ್ ರಾಮನ್ ಹಾಗೂ ಎಂವಿ ಶ್ರೀಧರ್ ಅವರು ವಿಚಾರಣೆಯಲ್ಲಿ ಭಾಗವಹಿಸಿದ್ದರು. ಐಸಿಸಿ ಜನರಲ್ ಮ್ಯಾನೇಜರ್ (ಕ್ರಿಕೆಟ್) ಜೆಫ್ ಅಲ್ಲಾಡಿಸ್ ಮತ್ತು ಐಸಿಸಿ ನೀತಿ ಸಂಹಿತೆ ವಕೀಲರಾದ ಸಾಲಿ ಕ್ಲಾರ್ಕ್ ಸಹ ವಿಚಾರಣೆಯಲ್ಲಿ ಇದ್ದರು.
ಮೊದಲ ಟೆಸ್ಟ್‌ನ ಭೋಜನ ವಿರಾಮದ ಸಮಯದಲ್ಲಿ ಮೈದಾನದಿಂದ ಆಟಗಾರರು ತೆರಳುತ್ತಿದ್ದಾಗ, ಜಡೇಜಾರನ್ನು ದೂಡಿದ ಆ್ಯಂಡರ್ಸನ್, ನಿಂದಿಸಿದರು ಎಂದು ಮೊದಲು ಭಾರತ ಆರೋಪ ಮಾಡಿತ್ತು.
ನಂತರ ಇಂಗ್ಲೆಂಡ್ ಜಡೇಜಾ ವಿರುದ್ಧ 2ನೇ ಸ್ತರದ ಆರೋಪ ಮಾಡಿತ್ತು. ಅಲ್ಲದೆ, ಇಂಗ್ಲೆಂಡ್‌ನ ಇಬ್ಬರು ಆಟಗಾರರು ಆ್ಯಂಡರ್ಸನ್ ಪರ ಸಾಕ್ಷ್ಯ ನುಡಿದಿದ್ದರು. ಹೀಗಾಗಿ, ಇಂಗ್ಲೆಂಡ್ ಆರೋಪವನ್ನು 1ನೇ ಸ್ತರಕ್ಕೆ ಇಳಿಸಿದ್ದ ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್ ಜಡೇಜಾಗೆ ಪಂದ್ಯ ಶುಲ್ಕದ ಶೇ. 50ರಷ್ಟು ದಂಡ ವಿಧಿಸಿದ್ದರು.
ಇದು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದಂತಹ ಪ್ರಕರಣ ಅದಾಗಿತ್ತು. ಆದರೆ, ಭಾರತ ಈ ಕುರಿತು ಐಸಿಸಿಗೆ ಮೇಲ್ಮನವಿ ಸಲ್ಲಿಸಿತ್ತು. ಅದನ್ನು ಐಸಿಸಿ ಸ್ವೀಕರಿಸಿತ್ತು. ಈಗ ಎಲ್ಲವೂ ಮುಗಿದ ಅಧ್ಯಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.