ಟೀಂ ಇಂಡಿಯಾ ಕಠಿಣ ತಾಲೀಮು

ಮ್ಯಾಂಚೆಸ್ಟರ್: ಮೂರನೇ ಟೆಸ್ಟ್ ಪಂದ್ಯದಲ್ಲಿನ ಹೀನಾಯ ಸೋಲು, ಮತ್ತೊಂದೆಡೆ ರವೀಂದ್ರ ಜಡೇಜಾ ಹಾಗೂ ಜೇಮ್ಸ್ ಆ್ಯಂಡರ್ಸನ್ ಪ್ರಕರಣದಲ್ಲಿ ಹಿನ್ನಡೆ ಸೇರಿದಂತೆ ಸಾಕಷ್ಟು ವಿಷಯಗಳಿಂದ ಕಂಗೆಟ್ಟಿರುವ ಭಾರತ ಕ್ರಿಕೆಟ್ ತಂಡ ಈಗ ನಾಲ್ಕನೇ ಟೆಸ್ಟ್ ಪಂದ್ಯದತ್ತ ತನ್ನ ಚಿತ್ತ ಹರಿಸಿದೆ. ಗುರುವಾರದಿಂದ ನಾಲ್ಕನೇ ಟೆಸ್ಟ್ ಆರಂಭವಾಗಲಿರುವ ಹಿನ್ನಲೆಯಲ್ಲಿ ಭಾರತ ತಂಡದ ಆಟಗಾರರು ಮಂಗಳವಾರದಿಂದ ತಮ್ಮ ಸಿದ್ಧತೆ ಆರಂಭಿಸಿದ್ದಾರೆ. ಆರಂಭಿಕ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತ, ಮೂರನೇ ಟೆಸ್ಟ್ ಪಂದ್ಯದಲ್ಲಿ ತನ್ನ ಲಯವನ್ನು ಸಂಪೂರ್ಣವಾಗಿ ಕಳೆದುಕೊಂಡಿತ್ತು. ಹಾಗಾಗಿ ತಂಡದ ಪ್ರತಿಯೊಬ್ಬ ಆಟಗಾರರು ನಾಲ್ಕನೇ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಲು ನೆಟ್ಸ್ನಲ್ಲಿ ಬೆವರು ಹರಿಸಿದ್ದಾರೆ.
ಸೌಥಾಮ್ಟನ್ ಪಂದ್ಯದಲ್ಲಿ ಭಾರತ ಯಾವುದೇ ಅವಧಿಯಲ್ಲೂ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ತಂಡದ ಪ್ರಮುಖ ಬ್ಯಾಟ್ಸ್ಮನ್ಗಳು ಉತ್ತಮ ಆರಂಭ ಪಡೆದರೂ, ಅದನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾಗಿದ್ದರು. ಅಲ್ಲದೆ ಉತ್ತಮ ಜತೆಯಾಟದ ಕೊರತೆಯಿಂದ ಭಾರತ ಸೋಲನುಭವಿಸುವಂತಾಗಿತ್ತು. ಹಾಗಾಗಿ ಬ್ಯಾಟ್ಸ್ಮನ್ಗಳು ಹೆಚ್ಚಿನ ತಾಲೀಮು ನಡೆಸಿದರು.
ಇನ್ನು ಅಭ್ಯಾಸದ ವೇಳೆ ಲಾಡ್ಸ್ ಟೆಸ್ಟ್ ಪಂದ್ಯದ ಹೀರೋಗಳಾದ ಭುವನೇಶ್ವರ್ ಕುಮಾರ್ ಹಾಗೂ ಇಶಾಂತ್ ಶರ್ಮಾ ವಿಶ್ರಾಂತಿ ಪಡೆದರು. ಭಾರತ ತಂಡ ಎಂದಿನಂತೆ ಅಭ್ಯಾಸ ಆರಂಭಿಸುವ ಮುನ್ನ ಫುಟ್ಬಾಲ್ ಮೊರೆ ಹೋದರು.
ಇನ್ನು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ವಿಫಲರಾಗಿರುವ ಮೊಹ್ಮದ್ ಶಮಿ ಮೇಲೆ ಒತ್ತಡ ಹೆಚ್ಚಾಗಿದ್ದು, ಉತ್ತಮ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆ ಇದೆ. ಇನ್ನು ಬ್ಯಾಟ್ಸ್ಮನ್ಗಳ ಪೈಕಿ ಮುರಳಿ ವಿಜಯ್, ಶಿಖರ್ ಧವನ್, ಕೊಹ್ಲಿ ಹಾಗೂ ಪೂಜಾರ ನೆಟ್ಸ್ನಲ್ಲಿ ಬ್ಯಾಟಿಂಗ್ ತಾಲೀಮು ನಡೆಸಿದರು. ಇನ್ನು ಎಲ್ಲರಿಗಿಂತ ಮುಂಚಿತವಾಗಿ ಗೌತಮ್ ಗಂಭೀರ್ ನೆಟ್ಸ್ನಲ್ಲಿ ಅಭ್ಯಾಸ ನಡೆಸಿದರು. ಈ ಮೂಲಕ ಮುಂದಿನ ಟೆಸ್ಟ್ ಪಂದ್ಯದಲ್ಲಿ ಗಂಭೀರ್ ಅವರು ತಂಡದಲ್ಲಿ ಸ್ಥಾನ ಪಡೆಯುವ ಮುನ್ಸೂಚನೆ ದೊರೆತಂತಾಗಿದೆ. ಇನ್ನು ಸತತ ಆರು ಟೆಸ್ಟ್ ಪಂದ್ಯಗಳಿಂದ ವೈಫಲ್ಯ ಅನುಭವಿಸಿರುವ ಧವನ್ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ.
ಇಸಿಬಿ ಜತೆ ರಾಜಿ ಇಲ್ಲ: ಧೋನಿ
ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್, ಭಾರತದ ಆಲ್ರೌಂಡ್ ಆಟಗಾರ ರವೀಂದ್ರ ಜಡೇಜಾ ಅವರನ್ನು ತಳ್ಳಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪ್ರಕರಣದಲ್ಲಿ ಇಸಿಬಿ ಜತೆಗೆ ರಾಜಿಯಾಗಲು ಸಾಧ್ಯವಿಲ್ಲ ಎಂದು ಧೋನಿ ದಿಟ್ಟ ಪ್ರತಿಕ್ರಿಯೆ ನೀಡಿದ್ದಾರೆ.
ಐಸಿಸಿ ನೇಮಿಸಿದ್ದ ನ್ಯಾಯಾಂಗ ತನಿಖೆಯ ಅಧಿಕಾರಿ ಗೊರ್ಡನ್ ಲೂಯಿಸ್, ಪ್ರಕರಣಕ್ಕೆ ಸಂಬಂಧಪಟ್ಟ ವಿಡಿಯೋ ಹಾಗೂ ಸರಿಯಾದ ಸಾಕ್ಷಿಗಳು ಇಲ್ಲದ ಕಾರಣ ಆ್ಯಂಡರ್ಸನ್ ಮೇಲಿನ ಆರೋಪವನ್ನು ವಜಾಗೊಳಿಸಿದ್ದರು. ಇದಕ್ಕೂ ಮೊದಲು ಪಂದ್ಯದ ರೆಫರಿ ಡೇವಿಡ್ ಬೂನ್, ಜಡೇಜಾ ವಿರುದ್ಧ ಪಂದ್ಯ ಶುಲ್ಕದ ಶೇ. 50ರಷ್ಟು ದಂಡ ವಿಧಿಸಿದ್ದಕ್ಕೆ ಭಾರತ ತಂಡದ ಆಡಳಿತ ಮಂಡಳಿ, ಬಿಸಿಸಿಐ ಅತೃಪ್ತಿ ವ್ಯಕ್ತಪಡಿಸಿತ್ತು.
ಈ ಪ್ರಕರಣವನ್ನು ಇಲ್ಲಿಗೆ ಕೈಬಿಡುವಂತೆ ಐಸಿಸಿ ತಿಳಿಸಿದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಧೋನಿ, ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಇಸಿಬಿಯೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಬಿಸಿಸಿಐ ಆಗ್ರಹ: ಜಡೇಜಾ ಮತ್ತು ಆ್ಯಂಡರ್ಸನ್ ಪ್ರಕರಣದಲ್ಲಿ ನ್ಯಾಯಾಂಗ ಆಯುಕ್ತರು ನೀಡಿರುವ ತೀರ್ಪಿನ ವಿರುದ್ಧ ಐಸಿಸಿ ಮೇಲ್ಮನವಿ ಸಲ್ಲಿಸಬೇಕೆಂದು ಬಿಸಿಸಿ ಆಗ್ರಹಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


