ಪಟ್ಟು ಸಡಿಲಿಸದ ಸುಪ್ರೀಂ ಕೋರ್ಟ್

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸನ್‌ರ ಸ್ವಹಿತಾಸಕ್ತಿ ಎತ್ತಿ ತೋರಿಸುತ್ತಿರುವ...
ಎನ್. ಶ್ರೀನಿವಾಸನ್‌
ಎನ್. ಶ್ರೀನಿವಾಸನ್‌
Updated on: 

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸನ್‌ರ ಸ್ವಹಿತಾಸಕ್ತಿ ಎತ್ತಿ ತೋರಿಸುತ್ತಿರುವ ಯಾವುದೇ ವಿಚಾರಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಖಡಾಖಂಡಿತವಾಗಿ ಹೇಳಿದೆ. ಅಲ್ಲದೇ, ಬಿಸಿಸಿಐನತ್ತ ಚಾಟಿ ಬೀಸಿದ ಅದು ಕ್ರಿಕೆಟ್‌ನ ಪಾವಿತ್ರ್ಯತೆಯನ್ನು ಕಾಪಾಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸುಪ್ರೀಂ ಚಾಟಿ: ಡಿಸೆಂಬರ್ 1 ರಂದು ನಡೆದಿದ್ದ ಪ್ರಕರಣದ ವಿಚಾರಣೆಯಲ್ಲೂ ಸುಪ್ರೀಂ ಕೋರ್ಟ್ , ಬಿಸಿಸಿಐನಲ್ಲಿರುವ  ಶ್ರೀನಿವಾಸನ್ ಅವರ ಸ್ವಹಿತಾಸಕ್ತಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿತ್ತು. ಶ್ರೀನಿವಾಸನ್ ಅವರಿಂದ ಸ್ವಹಿತಾಸಕ್ತಿಗೆ ಸಂಬಂಧಿಸಿದಂತೆ ಯಾವುದೇ ಬೆಳವಣಿಗೆಗಳು ಬಿಸಿಸಿಐನಲ್ಲಿ ನಡೆದಿಲ್ಲ ಎಂಬುದನ್ನು ಸಾಬೀತು ಪಡಿಸಿ ಎಂದು ಶ್ರೀನಿವಾಸನ್  ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಹೇಳಿತ್ತು.

ನ್ಯಾಯಮೂರ್ತಿ ಮುಗ್ದಲ್ ತನಿಖಾ ವರದಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡಿದ್ದ ನ್ಯಾಯಪೀಠ, ಇದೇ ಪಟ್ಟು ಹಿಡಿಯಿತು. ಬಿಸಿಸಿಐನ ಅಧ್ಯಕ್ಷರಾಗಿದ್ದಾಗ ಶ್ರೀನಿವಾಸನ್ ಅವರು ತಮ್ಮ ಲಾಭಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ದರೆಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತದೆ. ಸಿಎಸ್‌ಕೆ ತಂಡದ ಮಾಲೀಕತ್ವ ಹೊಂದಿರುವ ಇಂಡಿಯಾ ಸಿಮೆಂಟ್ಸ್ ಕಂಪನಿಗೆ ಶ್ರೀನಿವಾಸನ್ ಅವರೇ ವ್ಯವಸ್ಥಾಪಕ ನಿರ್ದೇಶಕರಾಗಿರುವುದು ಮತ್ತು ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರು ಇಂಡಿಯಾ ಸಿಮೆಂಟ್ಸ್‌ನಲ್ಲಿ ಹಿಂದೆ ಅಧಿಕಾರಿಯಾಗಿ ಇದ್ದಿದ್ದು ಹಾಗೂ ಸಿಎಸ್‌ಕೆ ತಂಡದ ಪರವಾಗಿಯೇ ಗುರುನಾಥ್  ಮೇಯಪ್ಪನ್ ಅವರು ಬೆಟ್ಟಿಂಗ್ ನಡೆಸಿದ್ದಾರೆಂಬ ಆರೋಪಗಳು ಬಂದಿರುವುದು-ಇವೆಲ್ಲವೂ ಶ್ರೀನಿವಾಸನ್‌ರ ಸ್ವಹಿತಾಸಕ್ತಿ ಎತ್ತಿ ತೋರಿಸಿವೆ. ಇಷ್ಟೆಲ್ಲಾ ವಿಚಾರಗಳು ಗೋಚರಿಸುತ್ತಿದ್ದರೂ, ಶ್ರೀನಿವಾಸನ್‌ರ ಸ್ವಹಿತಾಸಕ್ತಿ ಮರೆದಿಲ್ಲ ಎಂಬ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕೋರ್ಟ್ ಹೇಳಿದೆ.

ಏತನ್ಮಧ್ಯೆ, ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡ ಬಿಸಿಸಿಐ, ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಆರೋಪ ಎದುರಿಸುತ್ತಿರುವ ಸಿಎಸ್‌ಕೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಿಗೆ ದಂಡ ವಿಧಿಸುವ ಅಧಿಕಾರವನ್ನು ತನಗೇ ನೀಡಬೇಕೆಂದು ಕೋರಿತು. ಇದಕ್ಕೆ ಉತ್ತರ ನೀಡಿದ ನ್ಯಾಯಪೀಠಸ ದಂಡ ಹಾಕಬೇಕಾದವರು- ದಂಡ ಹಾಕಿಸಿಕೊಳ್ಳಬೇಕಾದವರು ಇಬ್ಬರೂ ಬಿಸಿಸಿಐನಲ್ಲೇ ಇರುವಾಗ ಇದು ನ್ಯಾಯಸಮ್ಮತವಾದ ದಂಡ ವಿಧಿಸಲು ಸಾಧ್ಯವೇ ಎಂದು ಸುಪ್ರೀಂ ಪ್ರಶ್ನಿಸಿತು.

ಕಪಿಲ್ ವಾದ: ಆದರೆ, ಸುಪ್ರೀಂ ಕೋರ್ಟ್‌ನ ನಿಲುವಿಗೆ  ಪ್ರತಿಯಾಗಿ  ವಾದ ಮಂಡಿಸಿದ ಕಪಿಲ್ ಸಿಬಲ್, ಪ್ರಕರಣದ ತನಿಖೆ ನಡೆಸುತ್ತಿದ್ದ ಮುದ್ಗಲ್ ಸಮಿತಿ ಇಲ್ಲವೇ ಹೈಕೋರ್ಟ್‌ನ ಮುಂದಾಗಲೀ, ಶ್ರೀನಿವಾಸನ್‌ರಿಗೆ ವಾದ ಮಂಡಿಸಲು ಅವಕಾಶವನ್ನೇ ನೀಡಿಲ್ಲ ಎಂದರು.

ಅಲ್ಲದೆ, ಶ್ರೀನಿವಾಸನ್ ಅವರ ವಿರುದ್ಧ ತಕರಾರು ಅರ್ಜಿಯನ್ನು ಸಲ್ಲಿಸಿರುವ ಬಿಹಾರ ಕ್ರಿಕೆಟ್ ಸಂಸ್ಥೆಯ ಆದಿತ್ಯ ವರ್ಮಾ  ಅವರು ಸೇರಿದಂತೆ, ಕೆಲವರು ಶ್ರೀನಿವಾಸನ್ ವಿರೋಧಿಗಳಿದ್ದಾರೆ. ಇವರೆಲ್ಲರೂ ಗುಂಪುಗೂಡಿ ಶ್ರೀನಿವಾಸನ್ ಅವರನ್ನು ಬಿಸಿಸಿಐನಿಂದ ದೂರವಿಡಲು ಪ್ರಯತ್ನ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com