ಕ್ರೀಡೆ

ಪ್ರಶಸ್ತಿ ಸುತ್ತಿಗೆ ಸೋಮ್‌ದೇವ್

ಪ್ರಶಸ್ತಿ ಸುತ್ತಿಗೆ ಸೋಮ್‌ದೇವ್
Published On :

ನವದೆಹಲಿ: ಭಾರತದ ಸೋಮ್‌ದೇವ್ ದೇವ್‌ವರ್ಮನ್ ಒಂದು ಲಕ್ಷ ಡಾಲರ್ ಬಹುಮಾನ ಮೊತ್ತದ ದೆಹಲಿ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತು ತಲುಪಿದ್ದಾರೆ.
ದೆಹಲಿ ಲಾನ್ ಟೆನಿಸ್ ಸಂಸ್ಥೆ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೋಮ್‌ದೇವ್ 6-4, 6-2 ನೇರ ಸೆಟ್‌ಗಳಿಂದ ರಷ್ಯಾದ ಎವಗೆನಿ ಡಾನ್‌ಸ್ಕಾಯ್ ಅವರನ್ನು ಪರಾಭವಗೊಳಿಸಿದರು.
ಎರಡನೇ ಶ್ರೇಯಾಂಕ ಹೊಂದಿರುವ ಭಾರತೀಯ ಆಟಗಾರ ಒಂದು ಗಂಟೆ 29 ನಿಮಿಷಗಳ ಆಟದಲ್ಲಿ ನಾಲ್ಕನೇ ಶ್ರೇಯಾಂಕಿತ ಎವಗೆನಿಗೆ ನಿರೀಕ್ಷಿತ ಸೋಲುಣಿಸುವಲ್ಲಿ ಯಶಸ್ವಿಯಾದರು.
ಈ ಮುನ್ನ ಚೆನ್ನೈ ಮತ್ತು ಕೋಲ್ಕತಾ ಟೂರ್ನಿಗಳಲ್ಲಿ ಸೆಮಿಫೈನಲ್‌ನಲ್ಲಿಯೇ ಸೋಲನುಭವಿಸಿ ಪ್ರಶಸ್ತಿಯ ಆಸೆ ಕೈಬಿಟ್ಟಿದ್ದ ಸೋಮ್‌ದೇವ್ ನವದೆಹಲಿ ಓಪನ್‌ನಲ್ಲಿ ಮಾತ್ರ ಫೈನಲ್ ತಲುಪುವುದರೊಂದಿಗೆ ಚಾಂಪಿಯನ್ ಎನಿಸಿಕೊಳ್ಳುವ ಉತ್ತಮ ಅವಕಾಶ ಹೊಂದಿದ್ದಾರೆ. ಇದು ಭಾರತೀಯ ಆಟಗಾರನಿಗೆ ಜೀವನದ ಮೂರನೇ ಎಟಿಪಿ ಫೈನಲ್ ಪ್ರವೇಶವಾಗಿದೆ.
ಸೆಮಿಫೈನಲ್ ಪಂದ್ಯದಲ್ಲಿ ಆತ್ಮವಿಶ್ವಾಸದಿಂದಲೇ ತಮ್ಮ ಹೋರಾಟ ಆರಂಭಿಸಿದ ಸೋಮ್‌ದೇವ್‌ಗೆ ಮೊದಲ ಸೆಟ್‌ನಲ್ಲಿ ಮಾತ್ರ ಎದುರಾಳಿಯಿಂದ ಸ್ವಲ್ಪ ಕಠಿಣ ಸವಾಲು ಎದುರಾಯಿತು. ಆದರೆ, ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೇ ವಿಶ್ವಾಸದಿಂದ ಪೈಪೋಟಿ ನಡೆಸಿ ಮೊದಲ ಸೆಟ್ ಗೆದ್ದು ಶುಭಾರಂಭ ಮಾಡಿದರು.
ಇದೇ ಸ್ಫೂರ್ತಿಯಲ್ಲಿ ಎರಡನೇ ಸೆಟ್ ಹೋರಾಟ ಮುಂದುವರಿಸಿ ಎದುರಾಳಿಗೆ ಕೇವಲ ಎರಡು ಗೇಮ್ ಗೆದ್ದುಕೊಳ್ಳಲಷ್ಟೇ ಅವಕಾಶ ಮಾಡಿಕೊಟ್ಟು ಅಂತಿಮವಾಗಿ ಪಂದ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಭಾನುವಾರ ನಡೆಯಲಿರುನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೋಮ್‌ದೇವ್ ಅವರು ಕಜಕಿಸ್ತಾನದ ಅಲೆಕ್ಸಾಂಡರ್ ನೆಡೊಯೆಸೋವ್ ಅವರನ್ನು ಎದುರಿಸಲಿದ್ದಾರೆ.
ಇಂದೇ ನಡೆದ ಮತ್ತೊಂದು ಸೆಮಿಫೈನಲ್‌ನಲ್ಲಿ ಅಲೆಕ್ಸಾಂಡರ್ 4-6, 7-6 (7-3), 6-3 ಸೆಟ್‌ಗಳಿಂದ ಸರ್ಬಿಯಾದ ಇಲಿಜಾ ಬೊಜೊಲಾಜಕ್ ಅವರನ್ನು ಸೋಲಿಸಿದರು.
ಈ ಮುನ್ನ ಅಲೆಕ್ಸಾಂಡರ್ ವಿರುದ್ಧ ಒಮ್ಮೆ ಸೆಣಸಿದ್ದ ಸೋಮ್‌ದೇವ್ ಸೋಲಿನ ಕಹಿ ಅನುಭವಿಸಿದ್ದರು. ಈಗ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶ ಅವರ ಮುಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.