ಬ್ಲೂ ಬಾಯ್ಸ್ ಮೊದಲ ಗೆಲವಿಗೆ ಹುಡುಕಾಟ
ಫಾತುಲ್ಹಾ: ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಪ್ರವಾಸದಲ್ಲಿ ನೀರಸ ಪ್ರದರ್ಶನದಿಂದ ವ್ಯಾಪಕ ಟೀಕೆಗೆ ಗುರಿಯಾಗಿ ತಲೆ ತಗ್ಗಿಸಿದ್ದ ಭಾರತ ತಂಡ, ಈಗ ಏಷ್ಯಾಕಪ್ನಲ್ಲಿ ಗೆಲವಿನ ಲಯಕ್ಕೆ ಮರಳಲು ಸಿದ್ಧವಾಗಿದೆ.
ಬುಧವಾರ ಇಲ್ಲಿನ ಖಾನ್ ಸಾಹೇಬ್ ಒಸ್ಮಾನ್ ಅಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಭಾರತ ಯಾವ ರೀತಿ ಪಂದ್ಯಾವಳಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಕಳೆದ ಮೂರು ತಿಂಗಳಿನಿಂದ ಗೆಲವಿನ ಮುಖ ಕಾಣದೇ ಬೇಸತ್ತಿರುವ ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ. ಇನ್ನು ಭಾರತ ತಂಡ ಐದು ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿದ್ದು, ಈ ಬಾರಿಯೂ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡುವ ಮೂಲಕ 6ನೇ ಬಾರಿಗೆ ಚಾಂಪಿಯನ್ ಆಗಲು ಹವಣಿಸುತ್ತಿದೆ. ಬಾಂಗ್ಲಾದೇಶವನ್ನು ಅದರದೇ ನೆಲದಲ್ಲಿ ಮಣಿಸುವ ಮೂಲಕ 2014ರ ಸಾಲಿನಲ್ಲಿ ಮೊದಲ ಗೆಲವು ದಾಖಲಿಸಿಲು ಟೀಂ ಇಂಡಿಯಾ ಹಂಬಲಿಸುತ್ತಿದೆ.
ಕಳೆದ ಬಾರಿಯಂತೆ ಒತ್ತಡದಲ್ಲಿ ಟೀಂ ಇಂಡಿಯಾ: 2012ರ ಏಷ್ಯಾಕಪ್ ಪಂದ್ಯಾವಳಿಯಲ್ಲೂ ಭಾರತ ತಂಡ ಈ ಬಾರಿಯಂತೆ ಒತ್ತಡದೊಂದಿಗೆ ಕಣಕ್ಕಿಳಿಯುತ್ತಿದೆ. ಕಳೆದ ಬಾರಿ ಭಾರತ ತಂಡ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ಸತತವಾಗಿ ಎಂಟು ಟೆಸ್ಟ್ ಪಂದ್ಯಗಳನ್ನು ಸೋತು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಈ ಬಾರಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಪ್ರವಾಸದಲ್ಲಿ ನಿರಂತರ ವೈಫಲ್ಯ ಅನುಭವಿಸುವ ಮೂಲಕ ಗೆಲವಿನ ಹುಡುಕಾಟದಲ್ಲಿದೆ. ಭಾರತ ತಂಡ ಕಳೆದ ಬಾರಿ ಏಷ್ಯಾಕಪ್ ಪಂದ್ಯಾವಳಿಯಲ್ಲಿ ನೀರಸ ಪ್ರದರ್ಶನ ನೀಡಿತ್ತು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ನೂರನೇ ಶತಕ ದಾಖಲಿಸಿದ ಹೊರತಾಗಿಯೂ ಪಂದ್ಯವನ್ನು ಸೋತು ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಹಾಗಾಗಿ ಈ ಬಾರಿ ಭಾರತ ತಂಡದ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ.
ಭಾರತ ತಂಡ ಸಮತೋಲಿತ: ಹಿರಿಯ ಆಟಗಾರರ ಹೊರತಾಗಿಯೂ ಭಾರತ ತಂಡ ಅನುಭವಿ ಹಾಗೂ ಹೊಸ ಆಟಗಾರರಿಂದ ಮಿಶ್ರಿತವಾಗಿದ್ದು, ಸಮತೋಲದಿಂದ ಕೂಡಿದೆ ಎಂದರೆ ತಪ್ಪಿಲ್ಲ.
ಫಾರ್ಮ್ ಕೊರತೆ ಅನುಭವಿಸುತ್ತಿರುವ ಸುರೇಶ್ ರೈನಾರನ್ನು ತಂಡದಿಂದ ಕೈಬಿಡಲಾಗಿದ್ದು, ಧೋನಿ ಗಾಯದ ಸಮಸ್ಯೆಯಿಂದ ದೂರ ಸರಿದಿದ್ದಾರೆ. ಇವರ ಬದಲಿಗೆ ಕ್ರಮವಾಗಿ ಚೇತೇಶ್ವರ ಪೂಜಾರ ಹಾಗೂ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೆಸ್ಟ್ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡ ನಂತರ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಕಾಯುತ್ತಿದ್ದ ಪೂಜಾರಾಗೆ ಈಗ ಅವಕಾಶ ಲಭಿಸಿದೆ. ಇದನ್ನು ಎರಡೂ ಕೈಗಳಲ್ಲಿ ಬಾಚಿಕೊಳ್ಳಲು ಪೂಜಾರ ಸಿದ್ಧತೆ ನಡೆಸಿದ್ದಾರೆ.
ಇನ್ನು ಕಳೆದ ವರ್ಷ ಐಪಿಎಲ್ ಹಾಗೂ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ನಂತರ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಸಹ ತಂಡದಲ್ಲಿ ಸ್ಥಾನ ಪಡೆದಿರುವುದು, ತಮ್ಮ ಸಾಮರ್ಥ್ಯವನ್ನು ತೋರಲು ಅತ್ಯುತ್ತಮ ಅವಕಾಶವಾಗಿದೆ.
ಇನ್ನು ತಂಡದಲ್ಲಿ ಸ್ಟುವರ್ಟ್ ಬಿನ್ನಿ, ಈಶ್ವರ್ ಪಾಂಡೆ, ವರೂಣ್ ಆರಾನ್ ಹೊಸ ಆಟಗಾರರಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಅನುಭವಿ ಆಟಗಾರರಲ್ಲಿ ಶಿಖರ್ ಧವನ್, ರೋಹಿತ್ ಶರ್ಮಾ, ಅಮಿತ್ ಮಿಶ್ರಾ, ಆರ್.ಅಶ್ವಿನ್, ಜಡೇಜಾ ಹನ್ನೊಂದರ ಪಟ್ಟಿಯಲ್ಲಿನ ಖಾಯಂ ಸದಸ್ಯರು ಎನ್ನಬಹುದು.
ಅಂಬಟಿ ರಾಯುಡು ಹಾಗೂ ಚೇತೇಶ್ವರ ಪೂಜಾರ ಅವರಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬುದನ್ನು ಕಾದುನೋಡಬೇಕು.
ಒತ್ತಡದಲ್ಲಿ ಬಾಂಗ್ಲಾ: ಬಾಂಗ್ಲಾದೇಶ ಈ ಬಾರಿ ಪಂದ್ಯಾವಳಿಯನ್ನು ತನ್ನ ತವರಿನಲ್ಲಿ ಆಡುತ್ತಿದೆಯಾದರೂ, ತನ್ನದೇ ಆದ ಕೆಲವು ಸಮಸ್ಯೆಗಳಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಆರಂಭಿಕ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ತಮೀಮ್ ಇಕ್ಬಾಲ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ಲಂಕಾ ವಿರುದ್ಧದ ಪಂದ್ಯದ ವೇಳೆ ಅಸಭ್ಯ ರೀತಿಯಲ್ಲಿ ವರ್ತಿಸಿದ ಹಿನ್ನಲೆಯಲ್ಲಿ ತಂಡದ ಆಲ್ರೌಂಡರ್ ಹಾಗೂ ಪ್ರಮುಖ ಆಟಗಾರ ಶಕಿಬ್ ಅಲ್ ಹಸನ್ ಸಹ ಎರಡು ಪಂದ್ಯದ ನಿಷೇಧ ಎದುರಿಸುತ್ತಿರುವುದರಿಂದ ಭಾರತ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇನ್ನು ತಂಡದ ನಾಯಕ ಮುಶ್ಫಿಕುರ್ ರಹೀಮ್ ಲಂಕಾ ವಿರುದ್ಧದ ಟಿ20 ಪಂದ್ಯದಲ್ಲೂ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಇನ್ನು ವೇಗಿ ಮಶ್ರಫೆ ಮೊರ್ಟಾಜಾ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಈ ಇಬ್ಬರೂ ಆಟಗಾರರು ಸಂಪೂರ್ಣವಾಗಿ ಗುಣಮುಖರಾಗಿರುವುದು ಅನುಮಾನವಾಗಿದೆ.
ಅಲ್ಲದೆ ಪಂದ್ಯಾವಳಿಗಾಗಿ ಆಯ್ಕೆ ಮಾಡುವಾಗ ತಮ್ಮನ್ನು ಸಂಪರ್ಕಿಸಿಲ್ಲ ಎಂದು ನಾಯಕ ಮುಶ್ಫಿಕುರ್ ರಹೀಮ್ ಆಯ್ಕೆಗಾರರ ನಿರ್ಧಾರಕ್ಕೆ ಅಸಮಾಧನ ವ್ಯಕ್ತಪಡಿಸಿದ್ದಾರೆ.
ತಂಡಗಳು
ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಚೇತೇಶ್ವರ ಪೂಜಾರ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಅಮಿತ್ ಮಿಶ್ರಾ, ಸ್ಟುವರ್ಟ್ ಬಿನ್ನಿ, ಮೊಹ್ಮದ್ ಶಮಿ, ಭುವನೇಶ್ವರ್ ಕುಮಾರ್, ವರುಣ್ ಆರಾನ್, ಈಶ್ವರ್ ಪಾಂಡೆ.
ಬಾಂಗ್ಲಾದೇಶ: ಮುಶ್ಫಿಕುರ್ ರಹೀಮ್(ನಾಯಕ), ಅನಾಮುಲ್ ಹಕ್, ಶಮ್ಸೂರ್ ರೆಹಮಾನ್, ಇಮ್ರುಲ್ ಕಯಾಸ್, ಮೊಮಿನುಲ್ ಹಕ್, ಜಿಯರ್ ರೆಹಮಾನ್, ನಾಸಿರ್ ಹೊಸೈನ್, ನಯೀಮ್ ಇಸ್ಲಾಮ್, ಸೋಹಾಗ್ ಗಾಜಿ, ಮಶ್ರಫೆ ಮೊರ್ಟಾಜಾ, ಅರಾಫತ್ ಸನ್ನಿ, ಅಬ್ದುರ್ ರಜಾಕ್, ರುಬೆಲ್ ಹುಸೇನ್, ಅಲ್ ಅಮೀನ್ ಹೊಸೈನ್, ಶಕಿಬ್ ಅಲ್ ಹಸನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

