ವಿಶ್ವಕಪ್ ಆಯೋಜಿಸಲು ಭಾರತಕ್ಕೆ ಶಕ್ತ: ಫೀಫಾ
ನವದೆಹಲಿ: 2017ರ 17 ವರ್ಷದೊಳಗಿನ ಕಿರಿಯರ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ಭಾರತದಲ್ಲಿ ನಡೆಸಲಾಗಿರುವ ಸಿದ್ಧತೆಗೆ ಫೀಫಾ ತೃಪ್ತಿ ವ್ಯಕ್ತಪಡಿಸಿದೆ. ಅಲ್ಲದೆ ಭಾರತ ಈ ವಿಶ್ವಕಪ್ ಪಂದ್ಯಾವಳಿಯನ್ನು ಅತ್ಯದ್ಭುತವಾಗಿ ಆಯೋಜಿಸುವ ಸಾಮರ್ಥ್ಯ ಹೊಂದಿದೆ ಎಂದು ಫೀಫಾ ಅಭಿಪ್ರಾಯಪಟ್ಟಿದೆ.
ಭಾರತದಲ್ಲಿ ವಿಶ್ವಕಪ್ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಬುಧವಾರ ಮಾತನಾಡಿರುವ ಫೀಫಾ, ತಯಾರಿ ಬಗ್ಗೆ ತೃಪ್ತ ವ್ಯಕ್ತ ಪಡಿಸುವುದರ ಜತೆಗೆ ತಮ್ಮ ಯೋಜನೆ ಹಾಗೂ ಅನುಷ್ಠಾನ ಮತ್ತಷ್ಟು ಕಾರ್ಯಪ್ರವೃತ್ತರಾಗಬೇಕೆಂದು ಸಲಹೆ ನೀಡಿದೆ.
ಕಿರಿಯರ ವಿಶ್ವಕಪ್ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲು ಹಾಗೂ ಭಾರತದಲ್ಲಿ ಕಿರಿಯರ ಫುಟ್ಬಾಲ್ ಬಗೆಗಿನ ಆಸಕ್ತಿ ಹೆಚ್ಚಿಸಲು ಬೇಕಾದ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ ಎಂದು ಫೀಫಾದ ಉಪ ನಿರ್ದೇಶಕ ಇನಾಕಿ ಅಲ್ವಾರೆಜ್ ತಿಳಿಸಿದ್ದಾರೆ.
ಎಐಎಫ್ಎಫ್ ಎಂಟು ಸ್ಥಳಗಳಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲು ಪಟ್ಟಿ ಸಿದ್ಧಪಡಿಸಿದ್ದು, ಇಲ್ಲಿನ ಜವಹರ್ಲಾಲ್ ನೆಹರು ಕ್ರೀಡಾಂಗಣದಲ್ಲಿನ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ ನಂತರ ಫೀಫಾ ತಂಡದೊಂದಿಗೆ ಮಾತುಕತೆ ನಡೆಸಲು ಮಾಧ್ಯಮದವರಿಗೆ ಅವಕಾಶ ನೀಡಲಿಲ್ಲ. ಈ ಬೆಳವಣಿಗೆ ಅಚ್ಚರಿ ಮೂಡಿಸಿತು.
ಇದಕ್ಕೂ ಮೊದಲು ಮಾತನಾಡಿದ ಅಲ್ವಾರೆಜ್, ಕಳೆದ ಒಂದು ವಾರದಿಂದ ನಾವು ಐದು ನಗರಗಳಿಗೆ ಭೇಟಿ ನೀಡಿದ್ದೇವೆ. ಇದುವರಿಗೆ ಎಲ್ಲಾ ಕಡೆಯ ಅನುಭವ ಉತ್ತಮವಾಗಿದೆ. ಅಲ್ಲದೆ ಉತ್ತಮ ಸಿದ್ಧತೆ ನಡೆಸಲಾಗುತ್ತಿದ್ದು, ಸಕಾರಾತ್ಮಕ ಬೆಳವಣಿಗೆ ಇದೆ. ಎಲ್ಲಾ ಮೂಲಸೌಕರ್ಯಗಳು ಉತ್ತಮವಾಗಿ ಕಲ್ಪಿಸಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಸಿದ್ಧತೆ ಪ್ರಕ್ರಿಯೆ ಉತ್ತಮ ಹಾದಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.
ಇನ್ನು ಸಿದ್ಧತೆಯಲ್ಲಿ ಯಾವ ಅಂಶದ ಕಡೆ ಹೆಚ್ಚಿನ ಗಮನ ಹರಿಸಲಾಗುವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೂಲ ಸೌಕರ್ಯಗಳಲ್ಲಿ ಸಾಕಷ್ಟು ವಿಷಯಗಳಿವೆ. ಕ್ರೀಡಾಂಗಣ ಸೇರಿದಂತೆ, ಆಟಗಾರರ ಡ್ರೆಸಿಂಗ್ ಕೊಠಡಿ, ಪಿಚ್, ಟಿವಿ ಸೌಕರ್ಯ ಸೇರಿದಂತೆ ಇತರೆ ಅಂಶಗಳಿವೆ. ಈ ಪ್ರಕ್ರಿಯೆ ಸುದೀರ್ಘವಾಗಿದೆ. ಒಂದೆರಡು ದಿನಗಳಲ್ಲಿ ಮುಗಿಯುವ ಪ್ರಕ್ರಿಯೆ ಅಲ್ಲ. ಇದು ಕೆಲವು ತಿಂಗಳು ಅಥವಾ ವರ್ಷಗಳ ಸಮಯ ತೆಗೆದುಕೊಳ್ಳಲಿದೆ. ನಾವು ಪ್ರತಿ ಕ್ರೀಡಾಂಗಣ ಹಾಗೂ ಮೂಲ ಸೌಕರ್ಯಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದರು.
ಭಾರತಕ್ಕೆ ಸಿದ್ಧತಾ ಪ್ರಕ್ರಿಯೆಯನ್ನು ನಡೆಸಲು ಸಾಕಷ್ಟು ಸಮಯಾಕಾಶವಿದೆ. ಯಾವುದೇ ಅವಸರವಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ನಡೆಯಬೇಕಾದ ಸಿದ್ಧತೆಗಳು ಪೂರ್ಣಗೊಳ್ಳಬೇಕು. ಪ್ರತಿಯೊಂದು ಅಂಶವನ್ನು ಉತ್ತಮಗೊಳಿಸಲು ಸಾಕಷ್ಟು ಸಮಯವಿದೆ. ಉತ್ತಮ ಯೋಜನೆ ಇದ್ದರೆ ಎಲ್ಲವನ್ನು ಸಮರ್ಥ ರೀತಿಯಲ್ಲಿ ಮಾಡಬಹುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

