ಕ್ರೀಡೆ

ಕಿಕ್ ಲೋಕದ ಕುಖ್ಯಾತರು

ಕಿಕ್ ಲೋಕದ ಕುಖ್ಯಾತರು
Published On :

ಬ್ಯೂಟಿಫುಲ್ ಗೇಮ್ ಎಂದೇ ಬಿಂಬಿತವಾಗಿರುವ ಫುಟ್ಬಾಲ್ ಆಗೊಮ್ಮೆ ಈಗೊಮ್ಮೆ ಅಸಹನೀಯ ಅನ್ನಿಸುವಷ್ಟು ಕ್ರೀಡಾಪ್ರೇಮಿಗಳನ್ನು ಕಾಡಿದ್ದಿದೆ. ತೀರಾ ಹಿಂದಿನ ಕ್ಷಣದವರೆಗೂ ಹೀರೋ ಆಗಿ ಮೆರೆದಿದ್ದ ಖ್ಯಾತ ಫುಟ್ಬಾಲಿಗನೊಬ್ಬ ಎದುರಾಳಿ ತಂಡಕ್ಕೆ ಮಾತ್ರವಲ್ಲ ತನ್ನ ತಂಡದ ಅಭಿಮಾನಿಗಳೇ ವಾಕರಿಕೆ ಹುಟ್ಟಿಸುವಷ್ಟರ ಮಟ್ಟಿಗೆ ತಾನು ಮನುಷ್ಯ ಎನ್ನುವುದನ್ನೇ ಮರೆಯುತ್ತಾನೆ. ಇಲ್ಲಾ ರಾಕ್ಷಸನಾಗಿ ಕಾಣುತ್ತಾನೆ. ಈ ಆಟದ ಓಟ, ಓಘ, ಅದು ಸೃಷ್ಟಿಸಿರುವ ಒತ್ತಡ, ಪ್ರತಿಷ್ಠೆಯೇ ಅದಕ್ಕೆ ಕಾರಣಗಳಿರಬಹುದು. ಕ್ರೀಡೆಯೊಂದನ್ನು ಕ್ರೀಡಾ ಮನೋಭಾವದಿಂದ ಕಾಣದೇ ಹೋದಾಗ ಇಂಥ ಸಮಸ್ಯೆಗಳು ಎದುರಾಗುತ್ತವೋ ಇಲ್ಲಾ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗದ್ದು ಆಟಗಾರರ ದೌರ್ಬಲ್ಯವೋ... ಅಂತೂ ಇಂಥ ಘಟನೆಗಳು ನಡೆಯುತ್ತಲೇ ಇವೆ.
ಕ್ರೀಡೆ ಅಂದಮೇಲೆ ಮಾತಿನ ಚಕಮಕಿ ಮಾಮೂಲು ಬಿಡಿ. ಆದರೆ ಅದನ್ನು ಮೀರಿ ಇವರೇನು ಗೂಳಿಗಳೋ, ಕಟುಕರೋ ಎಂಬ ಅನುಮಾನ ಬರುವಷ್ಟರ ಮಟ್ಟಿಗೆ ವರ್ತನೆ ಬದಲಾಗುತ್ತದೆ. ಕೆಲವೊಂದು ಕಹಿ ಘಟನೆಗಳು ಮಾತ್ರ ಯಾಕೆ ಹೀಗಾಯ್ತು ಅಂತ ಸದಾ ಕಾಡುತ್ತಲೇ ಇರುತ್ತವೆ.
ಈ ಬಾರಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಚಿಲಿ ವಿರುದ್ಧ ನಡೆದ ಪಂದ್ಯದಲ್ಲಿ ಉರುಗ್ವೆಯ ಸ್ಟಾರ್ ಆಟಗಾರ ಲೂಯಿಸ್ ಸೂರೆಜ್ ಇಟಲಿ ಆಟಗಾರ ಜಾರ್ಜಿಯೋ ಚಿಲ್ಲಿನಿ ಭುಜ ಕಚ್ಚಿದಾಗ ಇಂಥ ಸಂಗತಿ ಮತ್ತೊಮ್ಮೆ ಫುಟ್ಬಾಲ್ ಪ್ರೇಮಿಗಳನ್ನು ಕಾಡಿದೆ. ಫುಟ್ಬಾಲ್ನಲ್ಲಿ ಇಂಥ ಖಳನಾಯಕರು ಇನ್ನೂ ಸಿಗುತ್ತಾರೆ. ಆದರೆ ಅವರಲ್ಲಿ ಟಾಪ್ 5 ವಿಲನ್ಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಲೂಯಿಸ್ ಸೂರೆಜ್
ಇಂದು ಈತ ಫೀಲ್ಡ್ನಲ್ಲಿ ಇದ್ದಾನೆಂದರೆ ಎದುರಾಳಿ ಆಟಗಾರರಿಗೆ ಭಯ. ಉರುಗ್ವೆಯ ಈ ಪ್ರತಿಭಾವಂತ ಮುನ್ನಡೆ ಆಟಗಾರ ಕಚ್ಚುವುದರಲ್ಲಿ ಸದಾ ಮುಂದು. ಕಳೆದ ನಾಲ್ಕು ವರ್ಷದಲ್ಲಿ ಮೂವರು ಫುಟ್ಬಾಲಿಗರ ಮೈಯಲ್ಲಿ ಹಲ್ಲಿನ ಗುರುತು ಮೂಡಿಸಿದ ಮಹಾನುಭಾವನೀತ. ಓಟ್ಮನ್ ಬಕ್ಕಲ್, ಬ್ರೇನಿಸ್ಲೇವ್ ಇವಾನೋವಿಚ್, ಜಾರ್ಜಿಯೋ ಚಿಲ್ಲಿನಿ ಆ ಮೂವರು ಭಾಗ್ಯವಂತರು. ಪಂದ್ಯದಲ್ಲಿ ಎಡವಟ್ಟಾಯಿತೆಂದರೆ ಎಲ್ಲೆಂದರಲ್ಲಿ ಕಚ್ಚುವುದು ಈತನಿಗೆ ಖಯಾಲಿ. ಇದಕ್ಕಾಗಿ ಆತ ಎಷ್ಟು ಬಾರಿ ದಂಡ ತೆತ್ತರೂ ದಂಡ ಎನ್ನುವಂತಾಗಿದೆ. ಸದ್ಯಕ್ಕೆ ಈತನೇ ಫುಟ್ಬಾಲಿನ ಸಾರ್ವಕಾಲಿಕ ವಿಲನ್.


ಕೆವಿನ್ ಮಸ್ಕತ್
ಮಿಲ್ವಾಲ್ ಮತ್ತು ವೋಲ್ವ್ನ ಡಿಫೆಂಡರ್ ಕೆವಿನ್ ಮಸ್ಕತ್ ತನ್ನ ಕೆಟ್ಟ ಕಾರ್ಯಗಳಿಗಾಗಿ 12 ಬಾರಿ ದಂಡ ತೆತ್ತಿದ್ದಾನೆ. 2004ರಲ್ಲಿ ಚಾರ್ಟನ್ನ ಮಿಡ್ಫೀಲ್ಡರ್ ಮ್ಯಾಥ್ಯೂ ಹೋಮ್ಸ್ ಜತೆ ಜಗಳ ಕಾಯ್ದು ಮೊಣಕಾಲಿಗೆ ಘಾಸಿಗೊಳಿಸಿದ್ದ. ಈತ ಅದಕ್ಕಾಗಿ 2.5 ಲಕ್ಷ ಡಾಲರ್ ದಂಡವನ್ನೂ ತೆತ್ತಿದ್ದ. ಆಸ್ಟ್ರೇಲಿಯಾದ ಈ ಕ್ರೂರಿಯನ್ನು ಬರ್ಮಿಂಗ್ ಹ್ಯಾಮ್ ಸಿಟಿ ತಂಡದ ಡಿಫೆಂಡರ್ ಮಾರ್ಟಿನ್ ಗ್ರೈಂಜರ್ ಫುಟ್ಬಾಲ್ ಅಂಗಣದಲ್ಲಿ ಅತಿ ಹೆಚ್ಚು ದ್ವೇಷಿಸಲ್ಪಟ್ಟ ವ್ಯಕ್ತಿ ಎಂದು ಬಣ್ಣಿಸಿದ್ದರು.

ಡಂಕನ್ ಫರ್ಗ್ಯುಸನ್
ಎದುರಾಳಿಗೆ ತಲೆಯಿಂದ ಡಿಚ್ಚಿ ಹೊಡೆಯುವುದರಲ್ಲಿ ನಿಸ್ಸೀಮನಾದ ಈ ಬ್ರಿಟನ್ ಫುಟ್ಬಾಲಿಗ 1994ರಲ್ಲಿ ರೈತ್ ರೋವರ್ಸ್ ತಂಡದ ಜಾನ್ ಮೇಕ್ ಸ್ಟೇ ಜೊತೆ ಜಗಳ ಕಾಯ್ದು 3 ತಿಂಗಳು ಜೈಲು ಪಾಲಾಗಿದ್ದ. ಈತನ ಈ ಚಾಳಿ ಮೈದಾನಕ್ಕಷ್ಟೇ ಸೀಮಿತವಾಗಿರಲಿಲ್ಲ. ಒಂದು ಬಾರಿ ಪೋಲಿಸಪ್ಪನಿಗೇ ತನ್ನ ತಲೆಯ ಗಟ್ಟಿತನ ಪ್ರದರ್ಶಿಸಿದ್ದ. ಇನ್ನೊಂದು ಬಾರಿ ಎದುರಾಳಿ ತಂಡದ ಬೆಂಬಲಿಗನಿಗೆ, ಮತ್ತೊಮ್ಮೆ ಬೆಸ್ತನಿಗೆ ಹೀಗೆ ಈತ ಹೋದಲ್ಲೆಲ್ಲ ಗೂಳಿ ಕಾಳಗ. ರಾಯ್ ಕೇನ್ ಆ್ಯಂಡೋನಿ ಗೋಯ್ಕೆಟ್ಝಾ, ಎಡ್ಮಂಡೋ, ಎರಿಕ್ ಕ್ಯಾಂಟೋನಾ, ಹೆರಾಲ್ಡ್ ಶೂಮಾಕರ್ ನಂತರದ ಸ್ಥಾನಗಳಲ್ಲಿ ಬರುತ್ತಾರೆ. ಈ ಸಂದರ್ಭದಲ್ಲಿ ಇಟಲಿ ಆಟಗಾರನಿಗೆ ತಲೆಯಿಂದ ಡಿಚಿ ಹೊಡೆದ ಫ್ರಾನ್ ಫುಟ್ಬಾಲ್ ದಂತಕತೆ ಜಿದಾನೆಯನ್ನು ಮರೆಯುವ ಹಾಗೇ ಇಲ್ಲ. 2006ರಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಮಾಡಿದ ತಪ್ಪು ಆತನ ಎಲ್ಲ ಸಾಧನೆಗಳನ್ನೂ ಗೌಣವಾಗಿಸಿತು ಎಂದರೂ ತಪ್ಪಲ್ಲ. ಫುಟ್ಬಾಲ್ ದುನಿಯಾದಲ್ಲಿ ದಿನಬೆಳಗಾಗುವುದರೊಳಗೆ ಹೀರೋ ಆದವ ಕ್ಷಣಮಾತ್ರದಲ್ಲಿ ವಿಲನ್ ಆಗಿ ಮಾರ್ಪಡುವುದು ಎಂದರೆ ಇದೇ ಇರಬೇಕು.

ಡೀಗೊ ಮರಡೋನಾ
ಫುಟ್ಬಾಲ್ ಜಗತ್ತಿನ ಬಗ್ಗೆ ಮಾತನಾಡುವಾಗ ಡಿಗೊ ಮರಡೋನಾನ್ನು ಬಿಟ್ಟು ಮುಂದೆ ಸಾಗುವ ಪ್ರಮಯವೇ ಇಲ್ಲ. ಕಾರಣ ಒಂದು ಕಾಲದಲ್ಲಿ ಆತ ಮಾಡಿದ್ದ ಮೋಡಿಯೇ ಅಂಥದ್ದು. 1986ರಲ್ಲಿ ಅಂರ್ಜೆಂಟಿನಾ ಮಡಿಲಿಗೆ ವಿಶ್ವಕಪ್ ದೊರಕಿಸಿಕೊಟ್ಟಿದ್ದ ಈ ಕಾಲ್ಚೆಂಡಿನ ಮಾಂತ್ರಿಕ 1994ರಲ್ಲಿ ಅಥ್ಲೆಟಿಕ್ ಬಿಲ್ಬಾವೊ ಕ್ಲಬ್ನ ಡಿಫೆಂಡರ್ ಮೇಲೆ ಹಲ್ಲೆ ನಡೆಸಿ ವಿವಾದಕ್ಕೊಳಗಾಗಿದ್ದ. 1991ರಲ್ಲಿ ಉದ್ದೀಪನ ಮದ್ದಿನ ಸೇವನೆಯಲ್ಲಿ ಸಿಕ್ಕಿಬಿದ್ದು 15 ತಿಂಗಳ ನಿಷೇಧ ಅನುಭವಿಸಿದ್ದ. ದಿನಗಳೆದಂತೆ ತನ್ನೊಳಗಿನ ಮನುಷ್ಯನನ್ನು ಕಳೆದುಕೊಂಡನೋ ಎಂದು ಪ್ರಪಂಚ ಚ್ಚರಿಪಟ್ಟಿದೆ. 1998ರಲ್ಲಿ ಪತ್ರಕರ್ತರ ಮೇಲೆ ಏರ್ ರೈಫಲ್ ದಾಳಿಯಲ್ಲೂ ಈತ ಜೈಲುಪಾಲಾಗಿದ್ದ.

ಜಾಯ್ ಬಾರ್ಟನ್
ಹಲವರನ್ನು ಆಸ್ಪತ್ರೆಗೆ ಕಳಿಸಿ ಹಲವು ಬಾರಿ ಜೈಲು ಸೇರಿದ್ದ ಈತ ಮಾಡಿದ ಘನ ಕಾರ್ಯವಾದರೂ ಏನೆಂದು ಗೊತ್ತೇ? ಗೂಡಿಸನ್ ಪಾರ್ಕ್ ಅಂಗಣದಲ್ಲಿ ಎವರ್ಟನ್ ಅಭಿಮಾನಿಗಳ ಮುಂದೆ ಚಡ್ಡಿ ಜಾರಿಸಿ ಪೃಷ್ಠ ಪ್ರದರ್ಶಿಸಿ ಟೀಕೆಗೆ ಒಳಗಾಗಿದ್ದ. ಮ್ಯಾಂಚೆಸ್ಟರ್ ಸಿಟಿ ಆಟಗಾರ ಜಾಮಿ ಟೆಂಡಿಯ ಮುಖಕ್ಕೆ ಸಿಗಾರ್ನಿಂದ ಚುಚ್ಚಿ ಅದಕ್ಕಾಗಿ 74 ದಿನ ಕಂಬಿ ಎಣಿಸಿದ್ದ.

= ಗಣೇಶ್ ಪ್ರಸಾದ್ ಕುಂಬ್ಳೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.