ಓಜಾ ಶತಕ: ಎ ತಂಡಕ್ಕೆ ಮುನ್ನಡೆ
ಬ್ರಿಸ್ಬೇನ್: ಕೆಳ ಕ್ರಮಾಂಕದಲ್ಲಿ ನಮನ್ ಓಜಾ (110) ಹಾಗೂ ಉಮೇಶ್ ಯಾದವ್ (90) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಎ ತಂಡ ಆತಿಥೇಯ ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ ಮುನ್ನಡೆ ಸಾಧಿಸಿದೆ.
ಪಂದ್ಯದ ಮೂರನೇ ದಿನವಾದ ಮಂಗಳವಾರದ ಆಟದಲ್ಲಿ ಭಾರತ ತಂಡ ತಮ್ಮ ಬ್ಯಾಟಿಂಗ್ ಮುಂದುವರಿಸಿ 501 ರನ್ ದಾಖಲಿಸಿದೆ. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ 78 ರನ್ ಮುನ್ನಡೆ ಪಡೆದಿದ್ದು, ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದೆ. ಇನ್ನು ಆಸೀಸ್ ತಂಡ ಎರಡನೇ ಇನಿಂಗ್ಸ್ ಆರಂಭಿಸಿತಾದರೂ ಕೇವಲ 1 ಎಸೆತ ಮಾತ್ರ ಎದುರಿಸಿತು. ಆಗ ಮಂದ ಬೆಳಕಿನ ಹಿನ್ನೆಲೆಯಲ್ಲಿ ದಿನದಾಟವನ್ನು ನಿಲ್ಲಿಸಲಾಯಿತು.
ಎರಡನೇ ದಿನದಾಟದಲ್ಲಿ 423 ರನ್ಗಳಿಗೆ ಆಸೀಸ್ ಪಡೆಯನ್ನು ನಿಯಂತ್ರಿಸಿದ ನಂತರ ಭಾರತ ದಿನಾದಾಟ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 165 ರನ್ ದಾಖಲಿಸಿತ್ತು. ಮೂರನೇ ದಿನದಾಟ ಆರಂಭಿಸಿದ ಭಾರತದ ಬ್ಯಾಟ್ಸ್ಮನ್ಗಳು ಉತ್ತಮ ಆರಂಭ ಪಡೆದರೂ, ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಪರಿಣಾಮ ಪ್ರವಾಸಿಗರು 199 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಕ್ರೀಸ್ಗೆ ಆಗಮಿಸಿದ ನಮನ್ ಓಜಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ಶತಕ ದಾಖಲಿಸಿದರು. ಅಲ್ಲದೆ ಭಾರತ ತಂಡವನ್ನು ಇನಿಂಗ್ಸ್ ಹಿನ್ನಡೆಯಿಂದ ಪಾರಾಗುವಂತೆ ಮಾಡಿದರು. 135 ಎಸೆತಗಳನ್ನು ಎದುರಿಸಿದ ಓಜಾ 18 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 110 ರನ್ ದಾಖಲಿಸಿದರು. ಮೊದಲ ಪಂದ್ಯದಲ್ಲಿ ಕ್ರಮವಾಗಿ ದ್ವಿಶತಕ ಹಾಗೂ ಶತಕ ದಾಖಲಿಸಿದ್ದ ನಮನ್ ಓಜಾ ಈ ಇನಿಂಗ್ಸ್ನಲ್ಲೂ ಶತಕ ದಾಖಲಿಸಿದ್ದು, ಸತತ ಮೂರನೇ ಶತಕವಾಗಿದೆ.
ಓಜಾ ಜತೆಗೆ, ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದ ಉಮೇಶ್ ಯಾದವ್, ಬ್ಯಾಟಿಂಗ್ನಲ್ಲಿ 90 ರನ್ ದಾಖಲಿಸುವ ಮೂಲಕ ಆಲ್ರೌಂಡ್ ಪ್ರದರ್ಶನ ನೀಡಿದರು.
ತಂಡ ಇನಿಂಗ್ಸ್ ಮುನ್ನಡೆಯ ಹೊಸ್ತಿಲಲ್ಲಿದ್ದಾಗ ಬಂದ ಉಮೇಶ್, ಸ್ಫೋಟಕ ಬ್ಯಾಟಿಂಗ್ ನಡೆಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದರಲ್ಲದೇ, ಆಸೀಸ್ ಬೌಲರ್ಗಳಿಗೆ ತಲೆನೋವಾಗಿ ಪರಿಣಮಿಸಿದರು.
ಕೇವಲ 66 ಎಸೆತಗಳನ್ನು ಎದುರಿಸಿದ ಯಾದವ್, 11 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ನೆರವಿನಿಂದ 90 ರನ್ ದಾಖಲಿಸಿದರು.
ಇದರ ಜತೆಗೆ ಮನೋಜ್ ತಿವಾರಿ (63) ಹಾಗೂ ಕೆ.ಎಲ್ ರಾಹುಲ್ (52) ಅರ್ಧಶತಕ ತಂಡದ ಪರ ಉತ್ತಮ ಮೊತ್ತವಾಯಿತು.
ಇನ್ನು ಆಸೀಸ್ ತಂಡದ ಪರ ಚಡ್ ಸೇಯರ್ 84 ರನ್ಗಳಿಗೆ 5 ವಿಕೆಟ್ ಕಬಳಿಸಿದರೆ, ಕಟಿಂಗ್ 100 ರನ್ಗಳಿಗೆ 4 ವಿಕೆಟ್ ಪಡೆದು ಮಿಂಚಿದರು.
ಇನ್ನು ಒಂದು ದಿನದಾಟ ಬಾಕಿ ಇರುವ 2ನೇ ಪಂದ್ಯದಲ್ಲಿ, ಭಾರತ ಗೆಲವು ದಾಖಲಿಸಬೇಕಾದರೆ ಆಸೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ನಂತರ ಗುರಿಯನ್ನು ಬೆನ್ನತ್ತಬೇಕು. ಇಲ್ಲವಾದರೆ ಪಂದ್ಯ ಬಹುತೇಕ ಡ್ರಾ ಫಲಿತಾಂಶ ಕಾಣಲಿದೆ. ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ ಇನ್ನಷ್ಟೇ ಖಾತೆ ತೆರೆಯಬೇಕಿದೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಎ ಮೊದಲ ಇನಿಂಗ್ಸ್ 423
ಭಾರತ ಮೊದಲ ಇನಿಂಗ್ಸ್ 501 (ಎರಡನೇ ದಿನಾಂತ್ಯಕ್ಕೆ 165ಕ್ಕೆ 3)
(ನಮನ್ ಓಜಾ 110, ಉಮೇಶ್ ಯಾದವ್ 90, ಮನೋಜ್ ತಿವಾರಿ 63, ಸೇಯರ್ 84ಕ್ಕೆ5, ಕಟಿಂಗ್ 100ಕ್ಕೆ 4)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

