ಕ್ರೀಡೆ

ರಾಜ್ಯಕ್ಕೆ ಸಮಗ್ರ ಪ್ರಶಸ್ತಿ

ರಾಜ್ಯಕ್ಕೆ ಸಮಗ್ರ ಪ್ರಶಸ್ತಿ
Published On :

ಭೋಪಾಲ್: ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ ರಾಜ್ಯ ಕಿರಿಯ ಈಜುಪಟುಗಳು 41ನೇ ರಾಷ್ಟ್ರೀಯ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಬುಧವಾರ ಮುಕ್ತಾಯಗೊಂಡ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಮೊದಲ ಹಾಗೂ ಎರಡನೇ ಗುಂಪಿನಿಂದ 22 ಚಿನ್ನ, 32 ಬೆಳ್ಳಿ, 20 ಕಂಚು ಸೇರಿದಂತೆ ಒಟ್ಟು 74 ಪದಕಗಳನ್ನು ಬಾಚಿಕೊಂಡಿದೆ. ಇನ್ನು ಮಹಾರಾಷ್ಟ್ರ 21 ಚಿನ್ನ, 30 ಬೆಳ್ಳಿ, 23 ಕಂಚು ಸೇರಿದಂತೆ ಒಟ್ಟು 74 ಪದಕ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ತಮಿಳುನಾಡು 13 ಚಿನ್ನ 7 ಬೆಳ್ಳಿ, 17 ಕಂಚು ಸೇರಿದಂತೆ 37 ಪದಕ ಪಡೆದು ಮೂರನೇ ಸ್ಥಾನ ಪಡೆದಿದೆ.
ಚಾಂಪಿಯನ್‌ಶಿಪ್‌ನ ಅಂತಿಮ ದಿನ ನಡೆದ ಪಂದ್ಯಗಳಲ್ಲಿ ಕರ್ನಾಟಕ 17 ಪದಕಗಳ ಬೇಟೆಯಾಡಿದೆ. 800ಮೀ. ಫ್ರೀಸ್ಟೈಲ್‌ನಲ್ಲಿ ಯಾಕೂಬ್ ಸಲೀಮ್ ಹಾಗೂ ಸಂಜೀವ್.ಆರ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದರು. 1500ಮೀ. ಫ್ರೀಸ್ಟೈಲ್‌ನಲ್ಲಿ ಎಸ್.ಶಿವ ಹಾಗೂ ಕರಣ್ ಕೆ.ರಾಜು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಕೊರಳಿಗೆ ಹಾಕಿಕೊಂಡರು.
ಬಾಲಕಿಯರ ಮೊದಲ ಗುಂಪಿನ 400ಮೀ. ವೈಯಕ್ತಿಕ ಮಿಡ್ಲೇಯಲ್ಲಿ ಶ್ರದ್ಧ ಸುಧೀರ್ ಕಂಚು, ಎರಡನೇ ಗುಂಪಿನಲ್ಲಿ ಉತ್ತರೆ ಚಿನ್ನದ ಪದಕ ಪಡೆದರು. ಬಾಲಕರ 200ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಲಿಖಿತ್ ಹಾಗೂ ನಿಶಾಂತ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದರು. ಎರಡನೇ ಗುಂಪಿನಲ್ಲಿ ಮನವ್ ಬೆಳ್ಳಿ ಪದಕ ಪಡೆದರು.
ಬಾಲಕಿಯರ 200ಮೀ.ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ರಿದ್ಧಿ ಬೋಹ್ರಾ ಹಾಗೂ ಹರ್ಷಿತಾ ಜಯರಾಮ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು. ಬಾಲಕರ 100 ಮೀ. ಬಟರ್‌ಫ್ಲೈನಲ್ಲಿ ಚಿರಾಗ್ ಕೆಂಪೇಗೌಡ ಕಂಚಿನ ಪದಕ, ಬಾಲಕಿಯರ 100ಮೀ. ಫ್ರೀಸ್ಟೈಲ್‌ನಲ್ಲಿ ಮಾಳವಿಕಾ.ವಿ ಕಂಚಿನ ಪದಕ ಪಡೆದರು.
ಇನ್ನು ಬಾಲಕರ 4/100ಮಿಡ್ಲೇ ರಿಲೆನ ಮೊದಲ ಗುಂಪಿನಲ್ಲಿ ಪುಷ್ಪಾನಂದ್, ಅವಿನಾಶ್, ಲಿಖಿತ್, ಯಾಕೂಬ್ ಸಲೀಮ್ ಹಾಗೂ ಎರಡನೇ ದುಂಪಿನಲ್ಲಿ ಶಿವ, ಚಿರಾಗ್ ಕೆಂಪೇಗೌಡ, ಮನವ್ ಹಾಗೂ ಆಕಾಶ್ ಚಿನ್ನದ ಪದಕ ಬಾಚಿಕೊಂಡರು.
ಬಾಲಕಿಯರ 4/100ಮಿಡ್ಲೇ ರಿಲೆನ ಮೊದಲ ಗುಂಪಿನಲ್ಲಿ ಹರಿಶ್ರೀ, ದಾಮಿನಿ, ದೀಪಿಕಾ ರಮೇಶ್, ಮಾಳವಿಕ ಬೆಳ್ಳಿ ಹಾಗೂ ಜನತಿ ರಾಜೇಶ್, ಉತ್ತರೆ, ಹರ್ಷಿತಾ, ಪ್ರೇಕ್ಷಾ ಕಂಚಿನ ಪದಕ ಪಡೆದರು.
ಕರ್ನಾಟಕದ ಬಾಲಕರು ತಂಡಗಳ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಗುಂಪಿನಲ್ಲಿ 139 ಹಾಗೂ ಎರಡನೇ ಗುಂಪಿನಲ್ಲಿ 177 ಅಂಕಗಳನ್ನು ಪಡೆದು ಅಗ್ರಸ್ಥಾನ ಪಡೆದರು. ಇನ್ನು ಬಾಲಕಿಯರ ವಿಭಾಗದ ಎರಡೂ ಗುಂಪಿನಲ್ಲಿ ಮಹರಾಷ್ಟ್ರ ಕ್ರಮವಾಗಿ 147 ಹಾಗೂ 162 ಅಂಕಗಳನ್ನು ಪಡೆದು ಅಗ್ರಸ್ಥಾನ ಕಾಯ್ದುಕೊಂಡರು.
ಬಾಲಕರ ಮೊದಲ ಗುಂಪಿನಲ್ಲಿ ಬಂಗಾಳದ ಸೂರ್ಯ ಮೊಂದಲ್ (5 ಚಿನ್ನ, 35 ಅಂಕ), ಎರಡನೇ ಗುಂಪಿನಲ್ಲಿ ಮಹಾರಾಷ್ಟ್ರದ ಆರ್ಯನ್ ಮಖಿಜಾ (4 ಚಿನ್ನ, 28 ಅಂಕ) ಅತ್ಯುತ್ತಮ ಈಜುಪಟು ಪ್ರಶಸ್ತಿ ಪಡೆದರು.
ಇನ್ನು ಬಾಲಕಿಯರ ಮೊದಲ ಗುಂಪಿನಲ್ಲಿ ಹರ್ಯಾಣದ ಶಿವಾನಿ ಕಟಾರಿಯಾ (5 ಚಿನ್ನ, 35 ಅಂಕ), ಎರಡನೇ ಗುಂಪಿನಲ್ಲಿ ಗುಜರಾತ್‌ನ ಮಾನಾ ಪಟೇಲ್ (5 ಚಿನ್ನ, 35 ಅಂಕ) ಅತ್ಯುತ್ತಮ ಈಜುಗಾರ್ತಿ ಪ್ರಶಸ್ತಿ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.