ಕ್ರೀಡೆ

ಡುಮಿನಿ ಶತಕ: ಹರಿಣಗಳ ಬೃಹತ್ ಮೊತ್ತ

Published On :

ಗಾಲೆ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜೆ.ಪಿ ಡುಮಿನಿ (ಅ.100) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ದಾಖಲಿಸಿದೆ.
ಗುರುವಾರ ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್ ಕಳೆದುಕೊಂಡು 455 ರನ್ ದಾಖಲಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ ಇನಿಂಗ್ಸ್ ಆರಂಭಿಸಿರುವ ಆತಿಥೇಯ ಶ್ರೀಲಂಕಾ ತಂಡ ದಿನದಾಟ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 30 ರನ್‌ಗಳಿಸಿದೆ.
ಪಂದ್ಯದ ಮೊದಲ ದಿನದಾಟದಲ್ಲಿ ಡೀನ್ ಎಲ್ಗರ್ (103) ಶತಕದ ನೆರವಿನಿಂದ ಉತ್ತಮ ಆರಂಭ ಪಡೆದಿದ್ದ ದಕ್ಷಿಣ ಆಫ್ರಿಕಾ ನಂತರ ದಿಢೀರ್ ಕುಸಿತದ ಪರಿಣಾಮ ಪಂದ್ಯದಲ್ಲಿ ನಿಯಂತ್ರಣ ಕಳೆದುಕೊಂಡಿತ್ತು. ಹಾಗಾಗಿ ಮೊದಲ ದಿನದಾಟದಲ್ಲಿ 5 ವಿಕೆಟ್‌ಗೆ 268 ರನ್ ದಾಖಲಿಸಿತ್ತು.
ಎರಡನೇ ದಿನದಾಟ ಮುಂದುವರಿಸಿದ ಖಿಂಟಾನ್ ಡಿ ಕಾಕ್ (51) ಅರ್ಧಶತಕ ದಾಖಲಿಸಿದರೆ, ನೈಟ್‌ವಾಚ್‌ಮನ್ ಆಗಿ ಕಣಕ್ಕಿಳಿದಿದ್ದ ಡೇಲ್ ಸ್ಟೇಯ್ನ್ (3) ಬೇಗನೆ ವಿಕೆಟ್ ಒಪ್ಪಿಸಿದರು.
ಈ ವೇಳೆ ಕ್ರೀಸ್‌ಗೆ ಬಂದ ಡುಮಿನಿ, ತಂಡದ ಇನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. 206 ಎಸೆತಗಳನ್ನು ಎದುರಿಸಿದ ಡುಮಿನಿ, 10 ಬೌಂಡರಿಗಳ ನೆರವಿನಿಂದ ತಾಳ್ಮೆಯ ಶತಕ ದಾಖಲಿಸಿದರು.
ನಂತರ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ ಯಾವುದೇ ಆಘಾತ ಎದುರಿಸದೆ 30 ರನ್‌ಗಳಿಸಿ ದಿನದಾಟವನ್ನು ಮುಕ್ತಾಯಗೊಳಿಸಿದೆ. ಆರಂಭಿಕರಾಗಿ ಕಣಕ್ಕಿಳಿದಿರುವ ಕುಶಾಲ ಸಿಲ್ವಾ (8) ಹಾಗೂ ಉಪುಲ್ ತರಾಂಗ (20) ರನ್ ದಾಖಲಿಸಿ ತಮ್ಮ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 455ಕ್ಕೆ9 (ಡಿಕ್ಲೇರ್)
(ಜೆ.ಪಿ ಡುಮಿನಿ 100, ಖಿಂಟಾನ್ ಡಿ ಕಾಕ್ 51, ಫಿಲ್ಯಾಂಡರ್ 27, ಪೆರೇರಾ 163ಕ್ಕೆ4, ಸುರಾಂಗ ಲಕ್ಮಲ್ 75ಕ್ಕೆ3)
ಶ್ರೀಲಂಕಾ ಮೊದಲ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೆ 30 (2ನೇ ದಿನದಾಟ ಅಂತ್ಯಕ್ಕೆ)
(ಉಪುಲ್ ತರಂಗಾ ಅಜೇಯ 20, ಕುಶಾಲ ಸಿಲ್ವಾ ಅಜೇಯ 8, ಸ್ಟೇಯ್ನ್ 4ಕ್ಕೆ0)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.