ಕ್ರೀಡೆ

ಬಿಎಫ್‌ಸಿ ತಾಲೀಮಿಗೆ ಅಣಿ

Published On :

ಬೆಂಗಳೂರು: ಪದಾರ್ಪಣೆ ಋತುವಿನಲ್ಲಿ ಐ ಲೀಗ್ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡ ಬೆಂಗಳೂರು ಎಫ್‌ಸಿ ತಂಡ ಮುಂದಿನ ಋತುವಿಗಾಗಿ ತನ್ನ ತಾಲಿಮು ಆರಂಭಿಸಿದೆ.
ಹೊಸ ರೂಪ, ಹೊಸ ಹುಮ್ಮಸ್ಸಿನಿಂದ ನೂತನ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಲು ಬಿಎಫ್‌ಸಿ ಎದುರು ನೋಡುತ್ತಿದ್ದು, ಶುಕ್ರವಾರದಿಂದ ತಂಡದ ಆಟಗಾರರು ಸಿದ್ಧತೆ ಆರಂಭಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿದ್ದ ಕೆಲವು ಆಟಗಾರರಲ್ಲಿ ಬದಲಾವಣೆ ಮಾಡಿಕೊಂಡು ತನ್ನ ಪಡೆಯನ್ನು ಮತ್ತಷ್ಟು ಬಲಪಡಿಸಿಕೊಂಡಿರುವ ಬಿಎಫ್‌ಸಿ, ಮತ್ತೊಂದು ಯಶಸ್ಸಿನ ಪಯಣದಲ್ಲಿ ಸಾಗುವ ಉದ್ದೇಶ ಹೊಂದಿದೆ.
ಈ ವೇಳೆ ತಂಡದ ಬಗ್ಗೆ ಮಾತನಾಡಿದ ಕೋಚ್ ಆ್ಯಶ್ಲೆ ವೆಸ್ಟ್‌ವುಡ್, ಮುಂದಿನ ಋತುವಿನಲ್ಲಿ ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದೇವೆ. ತಂಡದಲ್ಲಿ ಕೆಲವು ಬದಲಾವಣೆ ತಂದಿದ್ದು, ತಂಡ ಹೊಸ ರೂಪ ಪಡೆದುಕೊಂಡಿದೆ. ಹಾಗಾಗಿ ಮುಂದಿನ ವರ್ಷ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಆಟಗಾರರು ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ತಂಡ ಉತ್ತಮ ಸವಾಲು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಆವೃತ್ತಿಯಲ್ಲಿ ಪ್ರತಿ ವಿಭಾಗದಲ್ಲೂ ಹೆಚ್ಚಿನ ಸವಾಲು ಎದುರಿಸಬೇಕಾಗುತ್ತದೆ. ಹಾಗಾಗಿ ನಮಗೆ ಸಮರ್ಥ ತಂಡದ ಅಗತ್ಯವಿರುತ್ತದೆ. ಆರಂಭಿಂದಲೇ ಉತ್ತಮ ಪಡೆಯನ್ನು ಹೊಂದುವ ಅಗತ್ಯವಿದೆ. ಈ ಮೂಲಕ ಆರಂಭದಿಂದಲೇ ನಾವು ಆದಷ್ಟು ಒತ್ತಡದಿಂದ ದೂರವಿರಲು ಸಾಧ್ಯವಾಗುತ್ತದೆ ಎಂದರು.
ಈ ಆವೃತ್ತಿಯಲ್ಲಿ ಜೋಶ್ ವಾಲ್ಕರ್‌ರಂತಹ ವಿದೇಶಿ ಆಟಗಾರರನ್ನು ನಾವು ಎದುರು ನೋಡುತ್ತಿದ್ದೆವು. ಅವರು ಅತ್ಯುತ್ತಮ ಪ್ರಿಮಿಯರ್ ಲೀಗ್ ಆಟಗಾರರಾಗಿದ್ದು, ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೋಶ್ ಇದುವರೆಗೂ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇಂಗ್ಲೆಂಡ್‌ನ ಅಂಡರ್ 16, 17 ಮತ್ತು 20 ತಂಡವನ್ನು ಮುನ್ನಡೆಸಿದ್ದಾರೆ. ಇಂಗ್ಲೆಂಡ್ ರಾಷ್ಟ್ರೀಯ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಸುವುದು ಅಥವಾ ತಂಡದ ಭಾಗವಾಗಿರುವುದು ಆ ಆಟಗಾರನ ಸಾಮರ್ಥ್ಯವನ್ನು ತೋರುತ್ತದೆ. ಹಾಗಾಗಿಯೇ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದೇವೆ. ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದರು.
ಈ ವೇಳೆ ಮಾತನಾಡಿದ ತಂಡದ ಹೊಸ ಆಟಗಾರ ಜೋಶ್ ವಾಲ್ಕರ್, ನಾನು ಮೊದಲ ಬಾರಿಗೆ ವಿದೇಶಿ ಕ್ಲಬ್‌ಗೆ ಆಡುತ್ತಿದ್ದು, ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಉತ್ತಮ ಅವಕಾಶವಾಗಿದೆ. ಜಾನ್ ಜಾನ್ಸನ್ ಕಳೆದ ವರ್ಷ ಭಾರತದ ಉತ್ತಮ ಕ್ಲಬ್‌ಗೆ ಸೇರ್ಪಡೆಯಾದ ಬಗ್ಗೆ ಮಾಹಿತಿ ನೀಡಿದ್ದ. ನಂತರ ತಂಡದಲ್ಲಿನ ಗುಣಮಟ್ಟದ ಬಗ್ಗೆ ಹೇಳುತ್ತಿದ್ದರು.
ಭಾರತದಲ್ಲಿ ಫುಟ್ಬಾಲ್ ಕ್ರೀಡೆ ಹಂತ ಹಂತವಾಗಿ ಬೆಳೆಯುತ್ತಿದ್ದು, ಇಲ್ಲಿ ಆಡುವುದು ಉತ್ತಮ ವೇದಿಕೆಯಾಗಿದೆ. ಹಾಗಾಗಿ ಈ ಬಾರಿ ಕ್ಲಬ್‌ನಿಂದ ಕರೆ ಬಂದಾಗ ನಾನು ಸೇರ್ಪಡೆಗೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.