ಕುತೂಹಲದಲ್ಲಿ ಲಂಕಾ-ಆಫ್ರಿಕಾ ಸಮರ
ಗಾಲೆ: ಆತಿಥೇಯ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ಕುತೂಹಲದ ಘಟ್ಟದಲ್ಲಿ ನಿಂತಿದ್ದು, ಉಭಯ ಪಡೆಗಳಿಗೂ ಗೆಲ್ಲುವ ಅವಕಾಶವಿದೆ.
ಗಾಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ಶನಿವಾರ ನಾಲ್ಕನೇ ಹಾಗೂ ಉಪಾಂತ್ಯ ದಿನದಾಟ ನಿಂತಾಗ ಶ್ರೀಲಂಕಾ ತಂಡ ಎರಡನೇ ಇನಿಂಗ್ಸ್ನಲ್ಲಿ 1 ವಿಕೆಟ್ ನಷ್ಟಕ್ಕೆ 110 ರನ್ಗಳಿಸಿತ್ತು.
ಗೆಲ್ಲಲು 370 ರನ್ಗಳ ಗುರಿ ಪಡೆದಿರುವ ಶ್ರೀಲಂಕಾ, ಭಾನುವಾರ ಅಂತಿಮ ದಿನದಾಟದಲ್ಲಿ ಉಳಿದ 260 ರನ್ ಸಂಪಾದಿಸಿ ವಿಜಯೋತ್ಸವ ಆಚರಿಸುವ ಲೆಕ್ಕಾಚಾರದಲ್ಲಿದೆ.
ಮತ್ತೊಂದೆಡೆ ಲಂಕಾದ ಉಳಿದ 9 ವಿಕೆಟ್ಗಳನ್ನು ಬೇಗನೆ ಕಬಳಿಸಿ ಗೆಲವು ಕಾಣುವ ಚಿಂತನೆಯಲ್ಲಿ ಆಫ್ರಿಕಾ ಆಟಗಾರರಿದ್ದಾರೆ. ಸಿಲ್ವಾ ಜೊತೆ ಇನಿಂಗ್ಸ್ ಆರಂಭಿಸಿದ್ದ ಉಪುಲ್ ತರಂಗ ಕೇವಲ 14 ರನ್ಗಳಿಸಿ ವಿಕೆಟ್ ಕೈಚೆಲ್ಲಿದಾಗ ಲಂಕಾದ ಮೊತ್ತ ಸಹ 14 ರನ್ಗಳಾಗಿತ್ತು. ಆದರೆ, ನಂತರ ಜೊತೆಯಾದ ಸಿಲ್ವಾ ಮತ್ತು ಸಂಗಕ್ಕಾರ ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 96 ರನ್ ಪೇರಿಸಿ ಉಪಾಂತ್ಯ ದಿನದಾಟ ಮುಕ್ತಾಯಗೊಳಿಸುವ ಮೂಲಕ ಲಂಕಾ ಪಾಳಯದಲ್ಲಿ ಗೆಲವಿನ ಆಸೆ ಚಿಗುರಿಸಿದರು.
ಇದಕ್ಕು ಮುನ್ನ ಮೂರನೇ ದಿನದ ಮೊತ್ತ 9 ವಿಕೆಟ್ಗೆ 283 ರನ್ಗಳೊಂದಿಗೆ ಉಪಾಂತ್ಯ ದಿನದಾಟ ಮುಂದುವರಿಸಿದ ಶ್ರೀಲಂಕಾ ಮತ್ತೆ ಖಾತೆಗೆ ಕೇವಲ 9 ರನ್ ಸೇರಿಸುವಷ್ಟರಲ್ಲಿ ಕೊನೆಯ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್ನ 9 ವಿಕೆಟ್ಗೆ 455 ರನ್ಗಳ ಡಿಕ್ಲೇರ್ ಮೊತ್ತಕ್ಕೆ ಉತ್ತರವಾಗಿ 292 ರನ್ಗಳಷ್ಟೇ ಗಳಿಸಲು ಶಕ್ತವಾದ ಲಂಕಾ ಪಡೆ 163 ರನ್ಗಳಿಂದ ಭಾರಿ ಹಿನ್ನಡೆ ಅನುಭವಿಸಿತು.
ಮೊದಲ ಇನಿಂಗ್ಸ್ನಲ್ಲಿ ಪ್ರಭುತ್ವ ಸ್ಥಾಪಿಸಿದ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್ನಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ಗಳಿಸಿ ಮತ್ತೆ ಡಿಕ್ಲೇರ್ ಮಾಡಿಕೊಂಡಿತು. ನಿಚ್ಚಳ ಫಲಿತಾಂಶ ಪಡೆಯುವ ಗುರಿ ಹೊಂದಿರುವ ದಕ್ಷಿಣ ಆಫ್ರಿಕನ್ನರು 4.09ರ ಸರಾಸರಿಯಲ್ಲಿ ವೇಗವಾಗಿ ರನ್ಗಳಿಸುವ ಮೂಲಕ ಶ್ರೀಲಂಕಾ ಮುಂದೆ ಕಠಿಣ ಲಕ್ಷ್ಯ ನಿಲ್ಲಿಸಿ ಒತ್ತಡಕ್ಕೆ ಸಿಲುಕಿಸುವ ಯೋಚನೆಯನ್ನು ಮೊದಲೇ ತಳೆದಿದ್ದರಿಂದ ಬೇಗನೆ ಡಿಕ್ಲೇರ್ ಮಾಡಿಕೊಂಡರು.
ಆಫ್ರಿಕಾದ ಎರಡನೇ ಇನಿಂಗ್ಸ್ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ 58 ಎಸೆತಗಳಲ್ಲಿ 6 ಬೌಂಡರಿಗಳಿದ್ದ 51 ರನ್ಗಳಿಸಿ ಗಮನ ಸೆಳೆದರು. ಈ ಮಧ್ಯೆ ಲಂಕಾ ಪರ ದಿಲ್ರುವಾನ್ ಪೆರೇರಾ 4 ಮತ್ತು ರಂಗಣ ಹೆರಾತ್ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 9 ವಿಕೆಟ್ಗೆ 455 ಡಿಕ್ಲೇರ್ ಮತ್ತು 6 ವಿಕೆಟ್ಗೆ 206 ಡಿಕ್ಲೇರ್ (ಎಬಿ ಡಿವಿಲಿಯರ್ಸ್ 51, ಫಫ್ ಡು ಪ್ಲೆಸಿಸ್ 37, ಕಿಂಟಾನ್ ಡಿ ಕಾಕ್ 36, ಅಲ್ವಿರೊ ಪೀಟರ್ಸನ್ 32, ದಿಲ್ರುವಾನ್ ಪೆರೇರಾ 79ಕ್ಕೆ4, ರಂಗಣ ಹೆರಾತ್ 84ಕ್ಕೆ2). ಶ್ರೀಲಂಕಾ 292 ಹಾಗೂ 1 ವಿಕೆಟ್ಗೆ 110 (ಕುಮಾರ ಸಂಗಕ್ಕಾರ ಬ್ಯಾಟಿಂಗ್ 58, ಕುಶಾಲ್ ಸಿಲ್ವಾ ಬ್ಯಾಟಿಂಗ್ 37, ಡೇಲ್ ಸ್ಟೇಯ್ನ್ 18ಕ್ಕೆ1).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

