ರೋಸ್ಬರ್ಗ್ ಜರ್ಮನಿ ಚಾಂಪಿಯನ್
ಹಾಕನ್ಹೀಮ್: ಅತ್ಯುತ್ತಮ ಚಾಲಕರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದ ನಿಕೋ ರೋಸ್ಬರ್ಗ್ ಅವರು, ಜರ್ಮನಿ ಗ್ರ್ಯಾನ್ ಫ್ರಿ ಗೆಲ್ಲುವುದರೊಂದಿಗೆ ವಿಶ್ವಚಾಂಪಿಯನ್ ಆಗುವ ಅವಕಾಶವನ್ನು ಹೆಚ್ಚಿಸಿಕೊಂಡಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಅಪಘಾತವಾದ ಹಿನ್ನೆಲೆಯಲ್ಲಿ, ಗೇರ್ಬಾಕ್ಸ್ ಬದಲಿಸಿದ್ದಲ್ಲದೇ ಐದು ಗ್ರಿಡ್ ದಂಡದೊಂದಿಗೆ 20ನೇ ಗ್ರಿಡ್ನಿಂದ ಕಾರು ಚಾಲನೆ ಮಾಡಿದ 29 ವರ್ಷದ ಲೂಯಿಸ್ ಹ್ಯಾಮಿಲ್ಟನ್ 3ನೇ ಸ್ಥಾನ ಪಡೆದರು. ಆದರೆ, ಉತ್ತಮವಾಗಿ ಚಾಲನೆ ಮಾಡಿದ ವಿಲಿಯಮ್ಸ್ ತಂಡದ ವಾಲ್ಟೇರಿ ಬೊಟಾಸ್ 2ನೇ ಸ್ಥಾನ ಪಡೆದರು.
ರೋಸ್ಬರ್ಗ್ ಪ್ರಶಸ್ತಿ ಗೆಲ್ಲುವುದರೊಂದಿಗೆ, ಮರ್ಸಿಡೀಸ್ ತಂಡ 1954ರ ನಂತರ ಇದೇ ಮೊದಲ ಬಾರಿಗೆ ತವರಿನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಂತಾಗಿದೆ. ಈ ಹಿಂದೆ 5 ಬಾರಿ ಚಾಂಪಿಯನ್ ಮರ್ಸಿಡೀಸ್ ತಂಡಕ್ಕೆ ಜುವಾನ್ ಮ್ಯಾನುವಲ್ ಫಾಂಗಿಯೋ ಅವರು ತವರಿನಲ್ಲಿ ಪ್ರಶಸ್ತಿ ಗೆದ್ದುಕೊಟ್ಟಿದ್ದರು.ಕೇವಲ 9 ದಿನಗಳ ಹಿಂದಷ್ಟೇ ವಿವಾಹವಾಗಿದ್ದ ರೋಸ್ಬರ್ಗ್, ನಂತರ ಜರ್ಮನಿ ಫುಟ್ಬಾಲ್ ವಿಶ್ವಕಪ್ ಗೆದ್ದಿದ್ದನ್ನು ನೋಡಿದ್ದರಲ್ಲದೆ, ಇದೇ ವಾರ ಮರ್ಸಿಡೀಸ್ ತಂಡದೊಂದಿಗ ದೀರ್ಘಾವಧಿಯ ಗುತ್ತಿಗೆಗೆ ಹೊಸದಾಗಿ ಸಹಿ ಮಾಡಿದ್ದರು. ಇಂತಹ ಸಂದರ್ಭದಲ್ಲೇ ತವರಿಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದು, ರೋಸ್ಬರ್ಗ್ಗೆ ತುಂಬು ಸಂತಸದ ವಿಷಯವಾಗಿದೆ.
ಅರ್ಹತಾ ಸುತ್ತಿನಲ್ಲಿ ಬಲಭಾಗದ ಮುಂದಿನ ಬ್ರೇಕ್ ಡಿಸ್ಕ್ ವೈಫಲ್ಯ ಹೊಂದುವುದರೊಂದಿಗೆ, ಹ್ಯಾಮಿಲ್ಟನ್ ಅವರಿಗೆ ಹಿಂದಿನ ಗ್ರಿಡ್ ಸಿಕ್ಕಿದ್ದು, ರೋಸ್ಬರ್ಗ್ಗೆ ಅನುಕೂಲವಾಗಿ ಪರಿಣಮಿಸಿತು. ಆದಾಗ್ಯೂ, ಶ್ರೇಷ್ಠ ಪ್ರದರ್ಶನ ನೀಡಿದ ಹ್ಯಾಮಿಲ್ಟನ್ ಅವರು, ಮೂರನೇ ಸ್ಥಾನ ಪಡೆಯುವುದರೊಂದಿಗೆ ರೋಸ್ಬರ್ಗ್ ಅವರೊಂದಿಗೆ 14 ಅಂಕಗಳ ಅಂತರದಲ್ಲಿದ್ದಾರೆ.
'ತವರಿನಲ್ಲಿ ಗೆದ್ದಿರುವುದು ನನಗೆ ಅತೀವ ಆನಂದದ ಗಳಿಗೆ. ಅಲ್ಲದೆ, ಇದೊಂದು ನನಗೆ ತುಂಬಾ ವಿಶೇಷ ದಿನವಾಗಿತ್ತು' ಎಂದು ಪ್ರಶಸ್ತಿ ಮುಡಿಗೇರಿಸಿಕೊಂಡ ನಂತರ ರೋಸ್ಬರ್ಗ್ ತಿಳಿಸಿದ್ದಾರೆ.
'ನನ್ನಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಲು ಯತ್ನಿಸಿದೆ. ಅಲ್ಲದೆ, ಸುರಕ್ಷಿತವಾಗಿ ಗುರಿ ಸೇರುವುದು ಮತ್ತು ಸಹ ಚಾಲಕರನ್ನು ಓವರ್ಟೇಕ್ ಮಾಡುವುದು ತುಂಬಾ ಕಠಿಣವಾಗಿತ್ತು. ಇಲ್ಲಿ ಕೆಲ ಅಂಕಗಳನ್ನು ಗಳಿಸಿಕೊಂಡಿರುವುದು ನನಗೆ ಆನಂದ ಉಂಟುಮಾಡಿದೆ' ಎಂದಿದ್ದಾರೆ ಹ್ಯಾಮಿಲ್ಟನ್.
ಫೋರ್ಸ್ ಇಂಡಿಯಾಗೆ 7 ಅಂಕ: ಸಹರಾ ಫೋರ್ಸ್ ಇಂಡಿಯಾ ಚಾಲಕ ನಿಕೋ ಹಲ್ಕನ್ಬರ್ಗ್ ಅವರು 7ನೇ ಸ್ಥಾನ ಗಿಟ್ಟಿಸುವುದರೊಂದಿಗೆ 6 ಅಂಕ ಪಡೆದರು. ಇನ್ನೊಬ್ಬ ಚಾಲಕ ಸೆರ್ಜಿಯೋ ಪೆರೆಜ್ ಅವರು 10ನೇ ಸ್ಥಾನಕ್ಕೆ ತೃಪ್ತಿಪಡುವ ಮೂಲಕ ಕೇವಲ 1 ಅಂಕ ಪಡೆದರು. ಹೀಗಾಗಿ ಜರ್ಮನಿ ಗ್ರ್ಯಾನ್ ಫ್ರಿಯಲ್ಲಿ ಸಹರಾ ಫೋರ್ಸ್ ಇಂಡಿಯಾ ಒಟ್ಟಾರೆ 7 ಅಂಕ ಪಡೆಯಿತು.
ಟಾಪ್-5 ಚಾಲಕರು:
1. ನಿಕೋ ರೋಸ್ಬರ್ಗ್ (ಮರ್ಸಿಡೀಸ್)2. ವಾಲ್ಟೇರಿ ಬೊಟಾಸ್ (ವಿಲಿಯಮ್ಸ್)3. ಲೂಯಿಸ್ ಹ್ಯಾಮಿಲ್ಟನ್ (ಮರ್ಸಿಡೀಸ್)4. ಸೆಬಾಸ್ಟಿಯನ್ ವೆಟಲ್ (ರೆಡ್ಬುಲ್)5. ಫೆರ್ನಾಂಡೋ ಅಲಾನ್ಸೋ (ಪೆರಾರಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

