ಕಾಶಿ ಮಹಿಮೆ

ಲಂಡನ್: ಕ್ರಿಕೆಟ್ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಭಾರತ 28 ವರ್ಷಗಳ ನಂತರ ಮತ್ತೆ ವಿಜಯದ ಪತಾಕೆ ಹಾರಿಸಿದೆ. ಅಲ್ಲದೆ, ಲಾರ್ಡ್ಸ್ ಮೈದಾನದಲ್ಲಿ ಈವರೆಗೆ ಆಡಲಾದ ಒಟ್ಟಾರೆ 17 ಪಂದ್ಯಗಳ ಪೈಕಿ ಭಾರತಕ್ಕೆ ಇದು ಕೇವಲ 2ನೇ ಗೆಲವಾಗಿದೆ.
1986ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಲಾರ್ಡ್ಸ್ ಮೈದಾನದಲ್ಲಿ ವಿಜಯದ ಕೇಕೆ ಹಾಕಿತ್ತು. ಈಗ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಅಧ್ಯಾಯ ಬರೆದಿದೆ. ಜೊತೆಗೆ 14 ಪಂದ್ಯಗಳ ನಂತರ ಭಾರತ ತಂಡ ವಿದೇಶದಲ್ಲಿ ಮೊದಲ ಗೆಲವು ದಾಖಲಿಸಿದ ತೃಪ್ತಿ ಸಂಪಾದಿಸಿದೆ. ಈ ಮುನ್ನ್ನ ಭಾರತ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಯ ಸಂಪಾದಿಸಿದ್ದು, ವಿದೇಶದಲ್ಲಿನ ಈ ಹಿಂದಿನ ಗೆಲವಾಗಿತ್ತು. ಅಲ್ಲದೆ ಟೆಸ್ಟ್ ನಾಯಕನಾಗಿ ಧೋನಿ, ಉಪಖಂಡದ ಹೊರಗೆ ಮಹತ್ವದ ಗೆಲವೊಂದನ್ನ್ನು ದಾಖಲಿಸಿದ್ದಾರೆ.
ಲಾರ್ಡ್ಸ್ ಅಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ, ಭಾರತ 95 ರನ್ಗಳ ಅಂತರದಲ್ಲಿ ಗೆಲವು ದಾಖಲಿಸಿ ಇಂಗ್ಲೆಂಡ್ ತಂಡವನ್ನು ಮುಖಭಂಗಗೊಳಿಸಿತು. 1986ರಲ್ಲಿ ಕಪಿಲ್ ದೇವ್ ನಾಯಕತ್ವದ ತಂಡ 5 ವಿಕೆಟ್ಗಳಿಂದ ಡೇವಿಡ್ ಗೋವರ್ ಸಾರಥ್ಯದ ಇಂಗ್ಲೆಂಡ್ಗೆ ಆಘಾತ ನೀಡಿತ್ತು.
ಗೆಲ್ಲಲು 319 ರನ್ಗಳ ಗುರಿ ಪಡೆದಿದ್ದ ಇಂಗ್ಲೆಂಡ್, ಅಂತಿಮ ದಿನ ಭೋಜನ ವಿರಾಮ ಕಳೆದು 12.2 ಓವರುಗಳಾಗುವಷ್ಟರಲ್ಲಿ 223 ರನ್ಗಳ ಅಲ್ಪ ಮೊತ್ತಕ್ಕೆ ತನ್ನ ಎರಡನೇ ಇನಿಂಗ್ಸ್ಗೆ ತೆರೆ ಎಳೆದುಕೊಂಡು ಭಾರತದ ಮುಂದೆ ಶರಣಾಗಿ ನಿಂತಿತು.
ಉಪಾಂತ್ಯ ದಿನವೇ ಗುರಿ ಬೆಂಬತ್ತಲು ಸಜ್ಜಾಗಿದ್ದ ಆತಿಥೇಯ ಇಂಗ್ಲೆಂಡ್, ಆಟ ನಿಂತಾಗ 4 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅಂತಿಮ ದಿನದಾಟ ಮುಂದುವರಿಸಿದ ಆಂಗ್ಲರು, ಬೇಗನೆ ವಿಕೆಟ್ ಬಿಟ್ಟುಕೊಡದೆ ಭಾರತೀಯರನ್ನು ಸತಾಯಿಸುವ ಮೂಲಕ ಗೆಲವಿನ ಕನಸು ಕಟ್ಟಿಕೊಂಡಿದ್ದರು.
ದಿನದಾಟ ಮುಂದುವರಿಸಿದ ಜೋ ರೂಟ್ ಮತ್ತು ಮೋಯಿನ್ ಅಲಿ 5ನೇ ವಿಕೆಟ್ಗೆ ಭಾರತೀಯ ಬೌಲರ್ಗಳನ್ನು ಗೋಳುಹೊಯ್ದುಕೊಂಡರು. ಆದರೆ, ದಿನದ ಮೊದಲ ಅವಧಿ ಮುಗಿಯಲು ಕೇವಲ 1 ಎಸೆತ ಇದ್ದಾಗ ಮೋಯಿನ್ ಅಲಿ ವಿಕೆಟ್ ಕೈ ಚೆಲ್ಲಿದ್ದು, ಪಂದ್ಯದ ದಿಕ್ಕು ಬದಲಿಸಿತು. ಆ ಸಂದರ್ಭದಲ್ಲಿ ವಿಜಯ ಲಕ್ಷ್ಮಿ ಭಾರತದ ಪರ ವಾಲಿದಂತಾಯಿತು. ರೂಟ್ ಜತೆಗೂಡಿ 101 ರನ್ ಪೇರಿಸಿ ಅಲಿ ಪೆವಿಲಿಯನ್ ಸೇರುತ್ತಲೇ ಆಂಗ್ಲರ ಮೇಲೆ ಒತ್ತಡ ಹೆಚ್ಚುವಂತೆ ಮಾಡಿತು. ನಂತರದಲ್ಲಿ 50 ರನ್ ಸಂಪಾದನೆಯಾಗುವಷ್ಟರಲ್ಲಿ ಇಂಗ್ಲೆಂಡ್ನ ಕೊನೆಯ 5 ವಿಕೆಟ್ಗಳು ಪೆವಿಲಿಯನ್ ಸೇರುತ್ತಿದ್ದಂತೆ ಭಾರತ ನಿರೀಕ್ಷೆಗೂ ಮುಂಚೆ ಗೆಲವಿನ ಸಂಭ್ರಮ ಆಚರಿಸಿತು. ಒಂದೆಡೆ ಜಿಗುಟಿನ ಆಟವಾಡುತ್ತಾ ಇಂಗ್ಲೆಂಡ್ ಪಾಳಯದಲ್ಲಿ ಗೆಲವಿನ ಆಸೆ ಚಿಗುರುವಂತೆ ಮಾಡಿದ್ದ ಜೋ ರೂಟ್ 8ನೇ ವಿಕೆಟ್ ಆಗಿ ನಿರ್ಗಮಿಸುವುದರೊಂದಿಗೆ ಆತಿಥೇಯರು ಕೂಡ ಪಂದ್ಯ ಕೈಚೆಲ್ಲಿದರು.
ಬೆಂಕಿ ಕಾರಿದ ಇಶಾಂತ್: ಭಾರತದ ಮಧ್ಯಮ ವೇಗಿ ಇಶಾಂತ್ ಶರ್ಮಾ ಬೆಂಕಿ ಕಾರುವಂತಹ ಎಸೆತಗಳನ್ನು ಪ್ರಯೋಗಿಸುವ ಮೂಲಕ ಆಂಗ್ಲರ ಸದ್ದಡಗಿಸಿದರು. ಹಸಿರು ಅಂಗಣದಲ್ಲಿ ಇಶಾಂತರ ಕೈಯಿಂದ ಜಾರಿ ಬಂದ ವೇಗ, ಪುಟಿತ ತಿರುವುಗಳಿಂದ ಕೂಡಿದ ಚೆಂಡುಗಳನ್ನು ಎದುರಿಸಲಾಗದೇ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ಗೆ ಪರೇಡ್ ಮಾಡಬೇಕಾಯಿತು.
7 ವಿಕೆಟ್ ಉರುಳಿಸಿ ಭಾರತಕ್ಕೆ ಬಹುಬೇಗನೆ ಗೆಲವು ತಂದುಕೊಟ್ಟ ಇಶಾಂತ್, ಇನಿಂಗ್ಸ್ ಒಂದರಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ಸಾಧನೆಗೆ ಪಾತ್ರರಾದರು. ಅಲ್ಲದೆ ಲಾರ್ಡ್ಸ್ನಲ್ಲಿ ಕೂಡ ಒಂದೇ ಇನಿಂಗ್ಸ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಎಂಬ ಹೆಗ್ಗಳಿಕೆಗೂ ಭಾಜನರಾದರು.
ಇದೇ ಸಾಲಿನ ಫೆಬ್ರವರಿಯಲ್ಲಿ ವೆಲ್ಲಿಂಗ್ಟನ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇಶಾಂತ್ 51 ರನ್ ನೀಡಿ 6 ವಿಕೆಟ್ ಪಡೆದಿದ್ದು, ಈವರೆಗಿನ ಅವರ ಇನಿಂಗ್ಸ್ನ ಉತ್ತಮ ಸಾಧನೆಯಾಗಿತ್ತು.
ಇದೇ ಮೊದಲ ಬಾರಿಗೆ ಭಾರತದ ಇಬ್ಬರು ಬೌಲರ್ಗಳು ಪಂದ್ಯವೊಂದರಲ್ಲಿ 6ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಭುವನೇಶ್ವರ್ ಕುಮಾರ್ 6 ವಿಕೆಟ್ ಕಬಳಿಸಿದ್ದರು.
ಇದೊಂದು ಐತಿಹಾಸಿಕ ಗೆಲವು. ತಂಡದ ಅನೇಕ ಆಟಗಾರರಿಗೆ ಇಂಗ್ಲೆಂಡ್ನಲ್ಲಿ ಆಡಿದ ಅನುಭವ ಇಲ್ಲ. ಈ ಟೆಸ್ಟ್ನಲ್ಲಿ ಅವರು ತಮ್ಮನ್ನ್ನು ತೊಡಗಿಸಿಕೊಂಡ ರೀತಿ ಅದ್ಭುತವಾಗಿತ್ತು. 2011ರ ಪ್ರವಾಸದ ವೇಳೆ ಮಾಡಿದ ತಪ್ಪಿನಿಂದ ಪಾಠ ಕಲಿತಿದ್ದೇವೆ. ಪಂದ್ಯದ ಮೂರು ದಿನಗಳ ನಂತರ ಸ್ಪಿನ್ನರ್ಗಳು ನೆರವಾಗುವ ವಿಶ್ವಾಸವಿತ್ತು. ಕಳೆದ ಪ್ರವಾಸದಲ್ಲಿ ಈ ರೀತಿಯಾಗಿ ನಿಯಂತ್ರಣ ಸಾಧಿಸಲು ವಿಫಲವಾಗಿದ್ದೆವು. ಜಡೇಜಾ ಇನಿಂಗ್ಸ್ ತಂಡಕ್ಕೆ ಅತ್ಯಗತ್ಯವಾಗಿತ್ತು. ಹೆಚ್ಚಿನ ಟೆಸ್ಟ್ ಆಡಿದಂತೆ ಉತ್ತಮ ಆಟಗಾರರಾಗುತ್ತಾರೆ.
- ಮಹೇಂದ್ರ ಸಿಂಗ್ ಧೋನಿ,
ಭಾರತ ತಂಡದ ನಾಯಕ.
ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 295
ಇಂಗ್ಲೆಂಡ್ ಮೊದಲ ಇನಿಂಗ್ಸ್ 319
ಭಾರತ ಎರಡನೇ ಇನಿಂಗ್ಸ್ 342
ಇಂಗ್ಲೆಂಡ್ ಎರಡನೇ ಇನಿಂಗ್ಸ್ 223 (ನಾಲ್ಕನೇ ದಿನದ ಆಟ ಮುಕ್ತಾಯಕ್ಕೆ 105ಕ್ಕೆ4)
ಮೋಯಿನ್ ಅಲಿ ಸಿ ಪೂಜಾರ ಬಿ ಇಶಾಂತ್ 39, ಜೋ ರೂಟ್ ಸಿ ಬಿನ್ನಿ ಬಿ ಇಶಾಂತ್ 66, ಪ್ರಯರ್ ಸಿ ವಿಜಯ್ ಬಿ ಇಶಾಂತ್ 12, ಸ್ಟೋಕ್ಸ್ ಸಿ ಪೂಜಾರ ಬಿ ಇಶಾಂತ್ 0, ಬ್ರಾಡ್ ಸಿ ಧೋನಿ ಬಿ ಇಶಾಂತ್ 8, ಪ್ಲಂಕೆಟ್ ಅಜೇಯ 7, ಆ್ಯಂಡರ್ಸನ್ ರನೌಟ್ (ಜಡೇಜಾ) 2, ಇತರೆ: (ಬೈ 13, ಲೆಗ್ ಬೈ 16, ವೈಡ್ 1, ನೋಬಾಲ್ 2) ಒಟ್ಟು 32
ವಿಕೆಟ್ ಪತನ: 1-12, 2-70, 3-71, 4-72, 5-173, 6-198, 7-201, 8-201, 9-216, 10-223
ಬೌಲಿಂಗ್ ವಿವರ: ಭುವನೇಶ್ವರ್ 16-7-21-0, ಶಮಿ 11-3-33-1, ಇಶಾಂತ್ 23-6-74-7, ಜಡೇಜಾ 32.2-7-53-1, ವಿಜಯ್ 4-1-11-0, ಧವನ್ 2-0-2-0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


