ಸಿಖ್ ಆಟಗಾರರಿಗೆ ಜನಾಂಗೀಯ ಭೇ
ನಾಗ್ಪುರ: ಕಳೆದವಾರ ಮುಕ್ತಾಯಗೊಂಡ 5ನೇ ಎಫ್‌ಐಬಿಎ ಏಷ್ಯಾಕಪ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಗಮನಾರ್ಹ ಪ್ರದರ್ಶನ ನೀಡಿದ್ದು ಸಂತೋಷದ ಸಂಗತಿಯಾದರೆ, ಮತ್ತೊಂದೆಡೆ ಭಾರತೀಯ ಸಿಖ್ ಆಟಗಾರರ ಮೇಲೆ ಜನಾಂಗೀಯ ಭೇದ ನಡೆದಿರುವುದು ಈಗ ಬೆಳಕಿಗೆ ಬಂದಿದೆ.
ಭಾರತ ಬಾಸ್ಕೆಟ್‌ಬಾಲ್ ತಂಡದಲ್ಲಿರುವ ಅಮೃತ್‌ಪಾಲ್ ಸಿಂಗ್ ಹಾಗೂ ಅಮ್‌ಜೋತ್ ಸಿಂಗ್ ಅವರು ಜು.12ರಂದು ನಡೆದ ಜಪಾನ್ ವಿರುದ್ಧದ ಮೊದಲ ಪಂದ್ಯದ ವೇಳೆ ಪಗಡಿಯನ್ನು ಬಿಚ್ಚಿಟ್ಟು ಆಡಬೇಕೆಂದು ಅಧಿಕಾರಿಗಳು ಆಗ್ರಹಿಸಿದ್ದರು. ಪಂದ್ಯ ಆರಂಭವಾಗುವ ಮುನ್ನ ಆಟಗಾರರನ್ನು ಕೋರ್ಟ್ ಒಳಗೆ ಪ್ರವೇಶಿಸಲು ಅನುಮತಿ ನೀಡದೇ ತಮ್ಮ ಪಗಡಿಯನ್ನು ಕಳಚಿ ನಂತರ ಆಡಬೇಕೆಂದು ತಿಳಿಸಲಾಗಿತ್ತು.
ಪಂದ್ಯಾವಳಿಯಲ್ಲಿನ ಅಧಿಕಾರಿಗಳು ಈ ಇಬ್ಬರು ಸಿಖ್ ಆಟಗಾರರು ಪಗಡಿಯನ್ನು ಹಾಕಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಸಂಸ್ಥೆಯ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು. ಎಫ್‌ಐಬಿಎ ಸಂವಿಧಾನದ 4.4.2 ನಿಯಮಾವಳಿ ಪ್ರಕಾರ ಯಾವುದೇ ಆಟಗಾರ ಪಂದ್ಯದ ವೇಳೆ ಯಾವುದೇ ವಸ್ತು ಹಾಗೂ ಆಯುಧವನ್ನು ಮೈಮೇಲೆ ಹಾಕಿಕೊಳ್ಳುವಂತಿಲ್ಲ. ಉದಾಹರಣೆಗೆ ತಲೆಗೆ ಸಂಬಂಧಿಸಿದಂತೆ ಹೇರ್ ಬ್ಯಾಂಡ್ ಹಾಗೂ ಒಡವೆಗಳನ್ನು ಹಾಕಿಕೊಳ್ಳುವಂತಿಲ್ಲ ಎಂದು ಅವರು ತಿಳಿಸಿದರು.
ಪಂದ್ಯದಲ್ಲಿ ಆಟಗಾರರಿಗೆ ಅವಕಾಶ ನಿರಾಕರಿಸಿದ ನಂತರ ಈ ಇಬ್ಬರು ಆಟಗಾರರು ತಮ್ಮ ಪಗಡಿಯನ್ನು ಕಳಚಿ ನಂತರ ಅಂಗಣಕ್ಕಿಳಿದರು. ಅಲ್ಲದೆ ಪಂದ್ಯದಲ್ಲಿ ಅಮೃತ್‌ಪಾಲ್ ಸಿಂಗ್ 15 ಅಂಕಗಳನ್ನು ದಾಖಲಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.
ಈ ಏಷ್ಯಾಕಪ್ ಪಂದ್ಯಾವಳಿ ನಮಗೆ ಅವಿಸ್ಮರಣೀಯವಾಗಿದೆ. ಆದರೆ ಈ ವಿವಾದ ನಮ್ಮಿಬ್ಬರನ್ನು ಕಂಗೆಡಿಸಿದೆ. ನಾವು ಈ ಹಿಂದೆಯೂ ಪಗಡಿಯನ್ನು ಧರಿಸಿ ಏಷ್ಯಾಕಪ್ ಪಂದ್ಯಾವಳಿ ಹಾಗೂ ಗೋವಾದಲ್ಲಿ ನಡೆದ ಲೂಸಿಫೋನಿಯಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೆವು. ಇನ್ನು ಅಭ್ಯಾಸದಲ್ಲೂ ನಾವು ಪಗಡಿಯನ್ನು ಧರಿಸಿದ್ದೆವು. ಆದರೆ ಪಂದ್ಯದವೇಳೆ ಅನುಮತಿ ನೀಡದಿರುವುದು ವಿಚಿತ್ರವೆನಿಸಿತು. ಪಗಡಿ ನಮ್ಮ ದೇಹದ ಭಾಗವಾಗಿರುತ್ತದೆ. ಅದನ್ನು ಬಿಚ್ಚಿಟ್ಟು ಆಡಲು ಹೇಳಿದಾಗ ಬೇಸರವಾಯಿತು. ಆದರೆ ತಂಡಕ್ಕಾಗಿ ಅದನ್ನು ತೆಗೆದು ಆಡಿದೆವು ಎಂದು ಇಬ್ಬರು ಆಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಎಫ್‌ಐಬಿಎ ಜತೆ ಸಚಿವರ ಮಾತುಕತೆ: ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಕ್ರೀಡಾ ಸಚಿವಾಲಯ ನಾವು ಹಾಗೂ ಭಾರತೀಯ ಬಾಸ್ಕೆಟ್‌ಬಾಲ್ ಸಂಸ್ಥೆ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಜತೆಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದೆ.
ಪಗಡಿಯನ್ನು ಧರಿಸುವುದರಿಂದ ಕ್ರೀಡೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಹಾಗಾಗಿ ಈ ವಿವಾದದಿಂದ ಆಘಾತವಾಗಿದ್ದು, ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಕ್ರೀಡಾ ಸಚಿವರಾದ ಸರ್ಬಾನಂದ್ ಸೊನೊವಾಲ್ ತಿಳಿಸಿದ್ದಾರೆ.
ಈ ವಿವಾದ ಬೇಸರವಾಗಿದೆ. ಈ ಕುರಿತು ನಾವು ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಸಂಸ್ಥೆಗೆ ಪತ್ರ ಬರೆದಿದ್ದು, ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಅವರ ಪ್ರತಿಕ್ರಿಯೆಗೆ ಅನುಗುಣವಾಗಿ ನಮ್ಮ ಮುಂದಿನ ನಡೆ ಕೈಗೊಳ್ಳಲಾಗುವುದು ಎಂದು ಭಾರತೀಯ ಬಾಸ್ಕೆಟ್‌ಬಾಲ್ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

