ಹರಿಣಗಳ ಮೇಲೆ ಕಿರಿಯರ ಜಯಭೇರಿ
ಡಾರ್ವಿನ್ (ಆಸ್ಟ್ರೇಲಿಯಾ): ಪ್ರತಿಭಾನ್ವಿತ ಯುವ ಲೆಗ್ ಸ್ಪಿನ್ನರ್ ಕರಣ್ ಶರ್ಮಾರ ಕರಾರುವಾಕ್ ದಾಳಿ ಹಾಗೂ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ ಚತುಷ್ಕೋನ ಸರಣಿಯ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧವೂ ಭರ್ಜರಿ ವಿಜಯೋತ್ಸವ ಆಚರಿಸಿದೆ. ಆ ಮೂಲಕ ಫೈನಲ್ ಪಂದ್ಯದ ಹತ್ತಿರಕ್ಕೆ ಬಂದು ನಿಂತಿದೆ.
ಇಲ್ಲಿನ ಗಾರ್ಡನ್ಸ್ ಓವನ್ಸ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎ ಒಡ್ಡಿದ್ದ 276 ರನ್ಗಳ ಗುರಿ ಬೆಂಬತ್ತಿದ್ದ ಭಾರತ ಎ ಒಂದು ಎಸೆತ ಉಳಿದಿರುವಂತೆ 1 ವಿಕೆಟ್ ಅಂತರದಲ್ಲಿ ರೋಚಕ ಗೆಲವು ದಾಖಲಿಸಿತು.
ಭಾರತದ ಪರ ಆರಂಭಿಕ ಉನ್ಮುಕ್ತ್ ಚಾಂದ್ (53ರನ್, 112 ಎಸೆತ, 3 ಬೌಂಡರಿ) ಮತ್ತು ಮೂರನೇ ಕ್ರಮಾಂಕದಲ್ಲಿ ಬಂದ ಮನನ್ ವೋಹ್ರಾ (52ರನ್, 31 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕ ಬಾರಿಸಿದರು. ಉಳಿದಂತೆ, ಮತ್ತೊಬ್ಬ ಆರಂಭಿಕ ರಾಬಿನ್ ಉತ್ತಪ್ಪ ಉಪಯುಕ್ತ 46 ರನ್ (62 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಕೆಳಕ್ರಮಾಂಕದಲ್ಲಿ ಕರಣ್ ಶರ್ಮಾ ಅಜೇಯ 39 ರನ್ (16 ಎಸೆತ, 4 ಬೌಂಡರಿ, 2 ಸಿಕ್ಸರ್) ಸಂಪಾದಿಸಿ ಭಾರತ ತಂಡದ ಗೆಲವಿಗೆ ನೆರವಾದರು. ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಎ 50 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 275 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.
ಮೂರನೇ ಕ್ರಮಾಂಕದ ಆಟಗಾರ ರೀಲೀ ರೋಸ್ಸೋ ಆಕರ್ಷಕ ಶತಕ ಬಾರಿಸಿ (137ರನ್, 150 ಎಸೆತ, 15 ಬೌಂಡರಿ) ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಆದರೆ, ಕೊನೆಯಲ್ಲಿ ಬೌಲರ್ಗಳ ವೈಫಲ್ಯದಿಂದಾಗಿ ರೋಸ್ಸೋ ಅವರ ಶತಕ ವ್ಯರ್ಥವಾಗುವಂತಾಯಿತು.
ಭಾರತದ ಪರ ಉತ್ತಮ ದಾಳಿ ನಡೆಸಿದ ಕರಣ್ ಶರ್ಮಾ, ಧವಳ್ ಕುಲಕರ್ಣಿ ಮತ್ತು ರಿಶಿ ಧವನ್ ತಲಾ 2 ವಿಕೆಟ್ ಪಡೆದರು. ಇದರೊಂದಿಗೆ ಭಾರತ ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆಲವು ಸಂಪಾದಿಸಿ ಅಂಕ ಸಂಪಾದನೆಯನ್ನು 15ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಪ್ರಶಸ್ತಿ ಸುತ್ತಿನತ್ತ ಮುಖಮಾಡಿ ನಿಂತಿದೆ.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ ಎ 50 ಓವರುಗಳಲ್ಲಿ 8 ವಿಕೆಟ್ಗೆ 275 (ರೀಲೀ ರೋಸ್ಸೋ 137, ಫರ್ಹಾನ್ ಬೆಹರ್ಡೇನ್ 29, ಕಾಡಿ ಚೆಟ್ಟಿ 27, ರೀಜಾ ಹೆಂಡ್ರಿಕ್ಸ್ 24, ಕರಣ್ ಶರ್ಮಾ 35ಕ್ಕೆ2, ಧವಳ್ ಕುಲಕರ್ಣಿ 47ಕ್ಕೆ2, ರಿಶಿ ಧವನ್ 74ಕ್ಕೆ2).
ಭಾರತ ಎ 49.5 ಓವರುಗಳಲ್ಲಿ 9 ವಿಕೆಟ್ಗೆ 276 (ಉನ್ಮುಕ್ತ್ ಚಾಂದ್ 53, ಮನನ್ ವೋಹ್ರಾ 52, ರಾಬಿನ್ ಉತ್ತಪ್ಪ 46, ಕರಣ್ ಶರ್ಮಾ ಅಜೇಯ 39, ಸಂಜು ಸ್ಯಾಮ್ಸನ್ 28, ಮರ್ಚಂಟ್ ಡಿ ಲ್ಯಾಂಗ್ 71ಕ್ಕೆ3, ಜಸ್ಟಿನ್ ಆಂಟಾಂಗ್ 32ಕ್ಕೆ2, ಮಿಥೋಕೋಸಿ ಶೆಜಿ 26ಕ್ಕೆ2).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

