ಕುಸ್ತಿ ಮೂರು ಮಸ್ತಿ
ಗ್ಲಾಸ್ಗೋ: ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ಕುಸ್ತಿಪಟುಗಳು ಮಂಗಳವಾರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ಒಟ್ಟು ಮೂರುಚಿನ್ನ ಮತ್ತು 1 ಬೆಳ್ಳಿ ಗೆದ್ದುಕೊಂಡರು.
ಒಲಿಂಪಿಯನ್ ಸುಶೀಲ್ ಕುಮಾರ್, ಅಮಿತ್ ಕುಮಾರ್ ಹಾಗೂ ಮಹಿಳೆಯರ ವಿಭಾಗದಲ್ಲಿ ವಿನೇಶ್ ಫೋಗತ್ ಅವರು ಚಿನ್ನದ ಪದಕ ತಂದುಕೊಟ್ಟರು. ಇನ್ನು ಫೈನಲ್ ಪಂದ್ಯದಲ್ಲಿ ಸೋತ ರಾಜೀವ್ ತೋಮರ್ ಬೆಳ್ಳಿಗೆ ತೃಪ್ತಿಪಟ್ಟರು.4ನೇ ಚಿನ್ನದ ನಿರೀಕ್ಷೆ ಮೂಡಿಸಿದ್ದ ರಾಜೀವ್ ತೋಮರ್ ಅವರು ಕೆನಡಾದ ಕೊರಿ ಜಾರ್ವಿಸ್ ವಿರುದ್ಧ 125ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಫೈನಲ್ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟರು.ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿರುವ ಸುಶೀಲ್ ಕುಮಾರ್ ಅವರು, ಪುರುಷರ 74ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಖ್ಯುಮರ್ ಅಬ್ಬಾಸ್ ವಿರುದ್ಧ ಕೇವಲ 107 ಸೆಕೆಂಡ್ಗಳಲ್ಲಿ ಜಯ ಕಾಣುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು. 2010ರ ಕ್ರೀಡಾಕೂಟದಲ್ಲಿ 66ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಮತ್ತು ಮಾಜಿ ವಿಶ್ವ ಚಾಂಪಿಯನ್ ಸುಶೀಲ್ ಕುಮಾರ್ ಮೊದಲ ಅವಧಿಯಲ್ಲೇ 6-2 ಅಂಕಗಳಿಂದ ಮುನ್ನಡೆ ಕಂಡುಕೊಂಡಿದ್ದರು. ಅಬ್ಬಾಸ್ ಅವರನ್ನು ಪಳಗಿಸುವಲ್ಲಿ ಯಶಸ್ವಿಯಾದ ಸುಶೀಲ್ ಪರ, ರೆಫರಿ ವಿ. ಕೀಲನ್ ಅವರು ತೀರ್ಪು ನೀಡಿದರು.ಇನ್ನು ಅಮಿತ್ ಕುಮಾರ್ ಅವರು 57ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ನೈಜೀರಿಯಾದ ಎಬಿಕ್ವೆಮಿನೋಮೊ ವೆಲ್ಸನ್ ಅವರನ್ನು 3-1 ಅಂಕಗಳಿಂದ ಸೋಲಿಸುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. ಮಹಿಳೆಯರ 48ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ವಿನೇಶ್ ಫೊಗತ್ ಅವರು, ಇಂಗ್ಲೆಂಡ್ನ ಯಾನಾ ರೊಟ್ಟಿಗಾನ್ ಅವರನ್ನು 11-8 ಅಂಕಗಳ ಅಂತರದಿಂದ ಸೋಲಿಸುವ ಮೂಲಕ ಚಿನ್ನ ಮುಡಿಗೇರಿಸಿಕೊಂಡರು. 19 ವರ್ಷದ ವಿನೇಶ್ ಅವರ ಸಂಬಂಧಿ ಗೀತಾ ಫೊಗತ್ ಅವರು 2010ರ ಡೆಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಮಹಿಳಾ ಕುಸ್ತಿ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ವಿನೇಶ್ ಅವರು ಸೆಮಿಫೈನಲ್ ಪಂದ್ಯದಲ್ಲಿ ಕೆನಡಾದ ಜಾಸ್ಮಿನ್ ಮೈನ್ ಮತ್ತು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ನೈಜಿರಿಯಾದ ರೊಸೆಮರಿ ನ್ವೆಕೆ ಅವರನ್ನು ಸೋಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

