ಆಂಗ್ಲರ ಬಂಧನದಲ್ಲಿ ಮಹಿ ಪಡೆ

ಸೌಥಂಪ್ಟನ್: ಇಂಗ್ಲೆಂಡ್ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡಲು ಭಾರತೀಯ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಂಡ ಈಗ ಸಂಕಷ್ಟಕ್ಕೆ ಸಿಲುಕಿದೆ. ಈ ಮೂಲಕ ಭಾರತ ತಂಡ ಅಮೂಲ್ಯ ಜತೆಯಾಟದ ನಿರೀಕ್ಷೆಯಲ್ಲಿದೆ. ಇನ್ನು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದಿರುವ ಆಂಗ್ಲ ಬೌಲರ್‌ಗಳು, ತಮ್ಮ ನಿಯಂತ್ರಣವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಹಾಗಾಗಿ ಪಂದ್ಯ ಹೆಚ್ಚಿನ ಕುತೂಹಲ ಪಡೆದಿದೆ.
ಮಂಗಳವಾರ ಪಂದ್ಯದ ಮೂರನೇ ದಿನದಾಟದ ಚಹಾ ವಿರಾಮದ ವೇಳೆಗೆ ಭಾರತ 5 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿದ್ದು, ಫಾಲೋ ಆನ್‌ನಿಂದ ಪಾರಾಗಲು ಯೋಜನೆ ರೂಪಿಸಿದೆ. ಆದರೆ ಲಾರ್ಡ್ಸ್ ಪಂದ್ಯದ ಸೋಲಿನಿಂದ ಕಂಗೆಟ್ಟಿರುವ ಇಂಗ್ಲೆಂಡ್ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವ ಹಠದಲ್ಲಿರುವ ಆಂಗ್ಲ ಬೌಲರ್‌ಗಳು ತಮ್ಮ ವೇಗದ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ.
ಭಾರತ ತಂಡ ಫಾಲೋ ಆನ್‌ನಿಂದ ಪಾರಾಗಲು ಒಟ್ಟು 370 ರನ್ ದಾಖಲಿಸಬೇಕಿದ್ದು, ಇನ್ನು 156 ರನ್ ದಾಖಲಿಸಬೇಕಿದೆ. ಎರಡನೇ ದಿನದಾಟದ ಅಂತ್ಯದಲ್ಲಿ 25 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತ, ಮೂರನೇ ದಿನದಾಟದಲ್ಲಿ ಉತ್ತಮವಾಗಿ ರನ್‌ಗಳಿಸುವ ವಿಶ್ವಾಸದಲ್ಲಿತ್ತು. ಆದರೆ ಭಾರತೀಯ ಬ್ಯಾಟ್ಸ್‌ಮನ್‌ಗಳ ಹೊಡೆತಗಳ ಆಯ್ಕೆ ತೀರಾ ಕಳಪೆಯಾದ ಪರಿಣಾಮ ತಂಡಕ್ಕೆ ಯಾವುದೇ ಹಂತದಲ್ಲೂ ಪರಿಣಾಮಕಾರಿಯಾದ ಜತೆಯಾಟ ಸಿಗಲಿಲ್ಲ. ಹಾಗಾಗಿ ಭಾರತ ಹಂತ ಹಂತವಾಗಿ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಾ ಸಾಗಿತು.
ನಿರಂತರ ಕುಸಿತ: ದಿನದಾಟದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ಪಡೆದರಾದರೂ ಅದನ್ನು ಬೃಹತ್ ಇನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾದರು. ಆರಂಭದಲ್ಲಿ ತೋರಿದ ಎಚ್ಚರಿಕೆ ಹಾಗೂ ಏಕಾಗ್ರತೆಯನ್ನು ಮಹತ್ವದ ಹಂತದಲ್ಲಿ ಕಳೆದುಕೊಂಡರು. ಹಾಗಾಗಿ ತಂಡ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುವಂತಾಯಿತು. ದಿನದಾಟ ಆರಂಭಿಸಿದ ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಈ ವೇಳೆ 5 ಬೌಂಡರಿಗಳಿಂದ 35 ರನ್ ದಾಖಲಿಸಿ ಉತ್ತಮ ಆರಂಭ ಪಡೆದಿದ್ದ ಮುರಳಿ ವಿಜಯ್, ಸ್ಟುವರ್ಟ್ ಬ್ರಾಡ್ ಸ್ವಿಂಗ್ ಅನ್ನು ಅರಿಯದೇ ಬೌಲ್ಡ್ ಆಗುವ ಮೂಲಕ ಭಾರತದ ಕುಸಿತಕ್ಕೆ ನಾಂದಿಯಾಡಿದರು.
ನಂತರ ತಂಡದ ಭರವಸೆಯ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ ಸಹ 3 ಬೌಂಡರಿ ನೆರವಿನಿಂದ 24 ರನ್ ದಾಖಲಿಸಿದ್ದರು. ಬ್ರಾಡ್ ಎಸೆತದಲ್ಲಿ ಬಟ್ಲರ್‌ಗೆ ಕ್ಯಾಚಿತ್ತು ಪೂಜಾರ ತಲೆತಗ್ಗಿಸಿದರು.
ಜವಾಬ್ದಾರಿ ಹೊತ್ತ ರಹಾನೆ: ಭಾರತ ತಂಡವನ್ನು ಫಾಲೋ ಆನ್‌ನಿಂದ ಪಾರು ಮಾಡುವ ಜವಾಬ್ದಾರಿ ಈಗ ಸಂಪೂರ್ಣವಾಗಿ ಅಜಿಂಕ್ಯ ರಹಾನೆ ಹೆಗಲ ಮೇಲಿದೆ. ಐದನೇ ವಿಕೆಟ್‌ಗೆ ರೋಹಿತ್ ಶರ್ಮಾ ಜತೆಗೂಡಿ 74 ರನ್‌ಗಳ ಜತೆಯಾಟದ ಮೂಲಕ ತಂಡವನ್ನು ಚೇತರಿಕೆಯತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ 28 ರನ್ ಗಳಿಸಿದ್ದ ರೋಹಿತ್, ಮೋಯಿನ್ ಅಲಿಗೆ ವಿಕೆಟ್ ಒಪ್ಪಿಸಿದ್ದು, ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು.
ಈಗ ರಹಾನೆ (ಬ್ಯಾಟಿಂಗ್ 52) ಹಾಗೂ (ಧೋನಿ ಬ್ಯಾಟಿಂಗ್ 2) ಕ್ರೀಸ್‌ನಲ್ಲಿದ್ದು, ತಂಡವನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯಬೇಕಿದೆ.
ಸ್ಕೋರ್ ವಿವರ
ಇಂಗ್ಲೆಂಡ್ ಮೊದಲ ಇನಿಂಗ್ಸ್ 569ಕ್ಕೆ7 (ಡಿಕ್ಲೇರ್)
ಭಾರತ ಮೊದಲ ಇನಿಂಗ್ಸ್ 5 ವಿಕೆಟ್‌ಗೆ 214 (3ನೇ ದಿನ ಚಹಾ ವಿರಾಮಕ್ಕೆ)
ಮುರಳಿ ವಿಜಯ್ ಬಿ ಬ್ರಾಡ್ 35, ಪೂಜಾರ ಸಿ ಬಟ್ಲರ್ ಬಿ ಬ್ರಾಡ್ 24, ಕೊಹ್ಲಿ ಸಿ ಕುಕ್ ಬಿ ಆ್ಯಂಡರ್ಸನ್ 39, ರಹಾನೆ ಬ್ಯಾಟಿಂಗ್ 52, ರೋಹಿತ್ ಸಿ ಬ್ರಾಡ್ ಬಿ ಅಲಿ 28, ಧೋನಿ ಬ್ಯಾಟಿಂಗ್ 2, ಇತರೆ: (ಬೈ 12, ಲೆಗ್‌ಬೈ 9, ವೈಡ್ 7) ಒಟ್ಟು 28
ವಿಕೆಟ್ ಪತನ: 1-17, 2-56, 3-88, 4-136, 5-210
ಬೌಲಿಂಗ್ ವಿವರ: ಆ್ಯಂಡರ್ಸನ್ 18-7-36-2, ಬ್ರಾಡ್ 14-3-34-2, ಜೋರ್ಡನ್ 11-3-46-0, ವೋಕ್ಸ್ 15-7-40-0, ಅಲಿ 10-0-37-1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


