ಕ್ರೀಡೆ

ಕರಗಿದ ಪ್ರೀತಿ, ಕಿಂಗ್ ಖಾನ್

ಕರಗಿದ ಪ್ರೀತಿ, ಕಿಂಗ್ ಖಾನ್
Published On :

ವಿಜೇತರಿಗೆ ರು. 15 ಕೋಟಿ, ರನ್ನರ್‌ಅಪ್‌ಗೆ ರು. 10 ಕೋಟಿ
ಬೆಂಗಳೂರು:
ಕೊನೆ ಕ್ಷಣದವರೆಗೂ ಕುತೂಹಲ ಮೂಡಿಸಿದ್ದ ಐಪಿಎಲ್-7ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಚಮತ್ಕಾರ ಮೆರೆದ ಕೋಲ್ಕತಾ ನೈಟ್ ರೈಡರ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 3 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಇದರೊಂದಿಗೆ ಕೋಲ್ಕತಾ 2ನೇ ಬಾರಿಗೆ ಚಾಂಪಿಯನ್ ಎನಿಸಿತು.
ಟಾಸ್ ಗೆದ್ದರೂ ಫ್ಲೀಲ್ಡಿಂಗ್ ಆಯ್ದುಕೊಂಡ ಕೋಲ್ಕತಾ ನೈಟ್ ರೈಡರ್ಸ್ ತಂಡ, ಎದುರಾಳಿ ಪಂಜಾಬ್ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ವೈಫಲ್ಯ ಕಂಡಿತು. ಪಂಜಾಬ್ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ಗೆ 199 ರನ್ ಬೃಹತ್‌ಮೊತ್ತ ಸಂಪಾದಿಸಿತು. ನಂತರ 200 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಕೋಲ್ಕತಾ, ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ ಕಳೆದುಕೊಂಡು 200 ರನ್ ಗಳಿಸುವ ಮೂಲಕ ವಿಜಯದ ಕೇಕೆ ಹಾಕಿತು.
ನಗರ ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಕೊನೆಯ ಪಂದ್ಯದಲ್ಲಿ, ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಕರ್ನಾಟಕದ ಯುವ ಬ್ಯಾಟ್ಸ್‌ಮನ್ ಮನೀಷ್ (94) ಶತಕ ವಂಚಿತರಾದರೂ, ತಂಡ ಗೆಲ್ಲಿಸುವಲ್ಲಿ ಅವರ ಪ್ರಯತ್ನ ವ್ಯರ್ಥವಾಗಲಿಲ್ಲ. ಪಾಂಡೆ ಮೊತ್ತದಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿ ಸೇರಿದ್ದವು.  ಮನೀಷ್ ಪಾಂಡೆ ಅವರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ತಕ್ಕ ಜತೆಯಾಟ ಪ್ರದರ್ಶಿಸಿದ ಯೂಸುಫ್ ಪಠಾಣ್ (36) ತಂಡಕ್ಕೆ ಆಸರೆಯಾದ ಇನ್ನೊಬ್ಬ ಬ್ಯಾಟ್ಸ್‌ಮನ್ ಎನಿಸಿದರು. 22 ಎಸೆತಗಳನ್ನು ಎದುರಿಸಿದ ಅವರ ಮೊತ್ತದಲ್ಲಿ 4 ಸಿಕ್ಸರ್ ಸೇರಿದ್ದವು. ಇಬ್ಬರ ಜತೆಯಾಟದಲ್ಲಿ 3ನೇ ವಿಕೆಟ್‌ಗೆ 71 ರನ್ ಕಲೆ ಹಾಕಿದರು.
ಪಂಜಾಬ್ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಕರಣ್‌ವೀರ್ ಸಿಂಗ್ 4 ವಿಕೆಟ್ ಕಬಳಿಸಿದರೆ, ಮಿಚೆಲ್ ಜಾನ್ಸನ್ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಸಹಾ ಕೇವಲ 55 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್ ಒಳಗೊಂಡ ಅಜೇಯ 115 ರನ್ ಚಚ್ಚಿದರು. ಇದು ಸಹಾರ ಚೊಚ್ಚಲ ಶತಕವಾಗಿರುವುದು ವಿಶೇಷ.  ಪಂಜಾಬ್‌ಗೆ ನಿರೀಕ್ಷೆಯಂತೆ ಉತ್ತಮ ಆರಂಭ ದೊರೆಯಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಎರಡನೇ ಕ್ವಾಲಿಫಾಯರ್ ಪಂದ್ಯದಲ್ಲಿ ರನ್ ಹೊಳೆ ಹರಿಸಿ ಅಬ್ಬರದ ಶತಕ ಸಂಪಾದಿಸಿದ್ದ ಆರಂಭಿಕ ವೀರೇಂದ್ರ ಸೆಹ್ವಾಗ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು.
ದುರಾದೃಷ್ಟವಶಾತ್ ಸೆಹ್ವಾಗ್ 10 ಎಸೆತಗಳಲ್ಲಿ 1 ಬೌಂಡರಿ ಸೇರಿದಂತೆ ಕೇವಲ 7 ರನ್‌ಗಳಿಸಿ ಪೆವಿಲಿಯನ್ ಸೇರುವ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದರು. ನಂತರ ಅಚ್ಚರಿ ಎಂಬಂತೆ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿಯೇ ಆಡಲಿಳಿದ ನಾಯಕ ಜಾರ್ಜ್ ಬೇಯ್ಲಿ ಮತ್ತೊಮ್ಮೆ ತಂಡಕ್ಕೆ ಕೈಕೊಟ್ಟರು. ಈ ಹಂತದಲ್ಲಿ ಒತ್ತಡಕ್ಕೆ ಸಿಲುಕಿದ ಪಂಜಾಬ್ ಮೊತ್ತ 5.1 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 30 ರನ್‌ಗಳಷ್ಟೇ ಆಗಿತ್ತು.   ಆದರೆ, ಆರಂಭಿಕ ಮನನ್ ವೋಹ್ರಾ ಮತ್ತು ಸಂಕಷ್ಟದ ಪರಿಸ್ಥಿತಿಯಲ್ಲಿ ತಂಡದ ರಕ್ಷಣೆಗೆ ನಿಂತ ವೃದ್ಧಿಮಾನ್ ಸಹಾ ಕೆಚ್ಚೆದೆಯ ಆಟ ಪ್ರದರ್ಶಿಸುವಲ್ಲಿ ಯಶಸ್ವಿಯಾಗುವುದರೊಂದಿಗೆ ಪಂಜಾಬ್ ಆಸೆ ಗರಿಗೆದರುವಂತೆ ಮಾಡಿದರು.
ನತದೃಷ್ಟ ಕೆಕೆಆರ್: ಕೆಕೆಆರ್ ಇಂದು ನತದೃಷ್ಟ ಎಂತಲೇ ಹೇಳಬಹುದು. ಏಕೆಂದರೆ, ಇನಿಂಗ್ಸ್‌ನ 16ನೇ ಓವರ್ ಎಸೆದ ಸುನೀಲ್ ನಾರಾಯಣ್‌ರ 3ನೇ ಎಸೆತದಲ್ಲಿ ಸಹಾ ಕ್ಯಾಚ್ ನೀಡಿದ್ದರು. ಆದರೆ, ಅದನ್ನು ಸ್ವತಃ ನಾರಾಯಣ್ ನೆಲಕ್ಕೆ ಹಾಕಿದರು. ಇದಾದ ಮರು ಎಸೆತದಲ್ಲಿ ವೋಹ್ರಾ ಸ್ಟಂಪಿಂಗ್ ಆಗಿ ಪೆವಿಲಿಯನ್‌ನತ್ತ ಸಾಗಿದ್ದರು. ಈ ಹಂತದಲ್ಲಿ ವಿಕೆಟ್ ಕೀಪರ್ ರಾಬಿನ್ ಉತ್ತಪ್ಪ ಮಾಡಿದ ಈ ಸ್ಟಂಪಿಂಗ್ ಅನುಮಾನದಿಂದ ಕೂಡಿತ್ತು. ಹಾಗಾಗಿ, ಮೂರನೇ ಅಂಪೈರ್‌ಗೆ ಸೂಚಿಸಲಾಯಿತು. ಆಗ ರೀಪ್ಲೆ ನೋಡಿದಾಗ, ಉತ್ತಪ್ಪ ಅವರು ಇನ್ನೂ ಚೆಂಡು ವಿಕೆಟ್ ದಾಟಿ ಬರುವ ಮುಂಚೆಯೇ ಮುಂದೆ ಹೋಗಿ ಅದನ್ನು ತೆಗೆದುಕೊಂಡು ಬೇಲ್ಸ್ ಎಗರಿಸಿದ್ದರು. ಈ ರೀತಿಯಾದರೆ ಅದು ನೋಬಾಲ್. ಹಾಗಾಗಿ, ವೋಹ್ರಾ ಕ್ರೀಸ್‌ನಿಂದ ಮಾರುದ್ದ ದೂರವಿದು ಸ್ಟಂಪಿಂಗ್ ಆಗಿದ್ದರೂ ಸಹ ನಾಟೌಟ್ ತೀರ್ಪು ನೀಡಿ ಮತ್ತೆ ಅವರನ್ನು ವಾಪಸ್ ಕರೆಸಲಾಯಿತು. ಅಂತಿಮವಾಗಿ ಸಹಾ ಅವರೊಂದಿಗೆ ಮೂರನೇ ವಿಕೆಟ್‌ಗೆ ವೋಹ್ರಾ 12 ಓವರುಗಳಲ್ಲಿ 129 ರನ್ ಪೇರಿಸಿದ ನಂತರ ವಿಕೆಟ್ ಒಪ್ಪಿಸಿದರು. ಅವರು 52 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸೇರಿದಂತೆ 67 ರನ್ ಗಳಿಸಿದರು. ಈ ಮಧ್ಯೆ ಗ್ಲೆನ್ ಮ್ಯಾಕ್ಸ್‌ವೆಲ್ ಶೂನ್ಯ ಸಂಪಾದನೆಯೊಂದಿಗೆ ಭಾರಿ ವೈಫಲ್ಯ ಅನುಭವಿಸಿದರು.
ಕ್ರೀಡಾಂಗಣಕ್ಕೆ ಜನಸಾಗರ: ಕ್ರೀಡಾಂಗಣದಲ್ಲಿ ಜನಸಾಗರವೇ ಹರಿದುಬಂದಿತ್ತು. ಕ್ರೀಡಾಂಗಣದೊಳಕ್ಕೆ ಪ್ರವೇಶಿಸುವ ವೇಳೆ ಅಭಿಮಾನಿಗಳ ಮಧ್ಯೆ ಭಾರಿ ನೂಕುನುಗ್ಗಲು ಉಂಟಾಯಿತು. ಕ್ರೀಡಾಂಗಣದಲ್ಲಿ ತುಂಬಿತುಳುಕುತ್ತಿದ್ದ ಪ್ರೇಕ್ಷಕರು ಎರಡೂ ತಂಡಗಳ ಆಟಗಾರರನ್ನು ಹುರಿದುಂಬಿಸಿದರು. ಚಪ್ಪಾಳೆಗಳ ಸುರಿಮಳೆ, ಕೂಗಾಟ ಎಲ್ಲೆ ಮೀರಿತ್ತು. ಬೌಂಡರಿ-ಸಿಕ್ಸರ್‌ಗಳು ಸಿಡಿದಾಗ, ವಿಕೆಟ್ ಉರುಳಿದಾಗ ಹುರಿದುಂಬಿಗಳ ಜೊತೆಗೆ ಸಹ ಕುಣಿದು ಕುಪ್ಪಳಿಸಿದರು.

ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರುಗಳಲ್ಲಿ 4ಕ್ಕೆ 199
ಸೆಹ್ವಾಗ್ ಸಿ ಗಂಭೀರ್ ಬಿ ಯಾದವ್ 7, ವೋಹ್ರಾ ಸಿ ಅಂಡ್ ಬಿ ಚಾವ್ಲಾ 67, ಬೇಯ್ಲಿ ಬಿ ನಾರಾಯಣ್ 1, ಸಹಾ ಅಜೇಯ 115, ಮ್ಯಾಕ್ಸ್‌ವೆಲ್ ಸಿ ಮಾರ್ಕೆಲ್ ಬಿ ಚಾವ್ಲಾ 0, ಮಿಲ್ಲರ್ ಅಜೇಯ 1.
ಇತರೆ: (ಲೆಗ್‌ಬೈ-4, ವೈ-3, ನೋಬಾಲ್-1) 8.
ವಿಕೆಟ್ ಪತನ: 1-23, 2-30, 3-159, 4-170.  
ಬೌಲಿಂಗ್ ವಿವರ: ಮಾರ್ಕೆಲ್ 4-0-40-0, ಉಮೇಶ್ ಯಾದವ್ 4-0-39-1, ನಾರಾಯಣ್ 4-0-46-1, ಶಕೀಬ್ 4-0-26-0, ಚಾವ್ಲಾ 4-0-44-2,
ಕೋಲ್ಕತಾ ನೈಟ್ ರೈಡರ್ಸ್ 19.3 ಓವರ್‌ಗಳಲ್ಲಿ 7 ವಿಕೆಟ್‌ಗೆ 200
ಉತ್ತಪ್ಪ ಸಿ ಪಟೇಲ್ ಬಿ ಜಾನ್ಸನ್ 5, ಗಂಭೀರ್ ಸಿ ಮಿಲ್ಲರ್ ಬಿ ಕರಣ್‌ವೀರ್ 23 , ಮನೀಷ್ ಪಾಂಡೆ ಸಿ ಬೇಯ್ಲಿ ಬಿ ಕರಣ್‌ವೀರ್ 94, ಯೂಸುಫ್ ಸಿ ಮ್ಯಾಕ್ಸ್‌ವೆಲ್ ಬಿ ಕರಣ್‌ವೀರ್ 36, ಶಕಿಬ್  ರನೌಟ್ 12, ಡಾಶ್ಕೆಟ್ ಸಿ ಮಿಲ್ಲರ್ ಬಿ ಕರಣ್‌ವೀರ್ 4, ಸೂರ್ಯಕುಮಾರ್ ಸಿ ವೋಹ್ರಾ ಬಿ ಜಾನ್ಸನ್ 5, ಪಿಯುಶ್ ಚಾವ್ಲಾ ಅಜೇಯ 13, ಸುನಿಲ್ 2. ಇತರೆ (ವೈಡ್-6) 6
ವಿಕೆಟ್ ಪತನ: 1-6, 2-59, 3-130, 4-156, 5-168, 6-179, 7-187,
ಬೌಲಿಂಗ್ ವಿವರ:  ಜಾನ್ಸನ್ 4-0-41-2, ಬಾಲಾಜಿ 4-0-41-0      ಅವಾನಾ 3.3-0-43-0
ಕರಣ್‌ವೀರ್ ಸಿಂಗ್ 4-0-54-4
ಅಕ್ಷರ್ ಪಟೇಲ್ 4-0-21-0.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.