ಕಿಕ್ಬ್ಯಾಕ್

ಪ್ರತಿಷ್ಠಿತ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಈಗಾಗಲೇ 19 ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಈಗ ಬ್ರೆಜಿಲ್ನಲ್ಲಿ 20ನೇ ವಿಶ್ವಕಪ್ ಆಯೋಜನೆಗೊಳ್ಳುತ್ತಿದೆ. ಫೆಡರೇಷನ್ ಇಂಟರ್ನ್ಯಾಷ್ನಲ್ ಡಿ ಫುಟ್ಬಾಲ್ ಅಸೋಶಿಯೇಷನ್-ಫಿಫಾ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಪಂದ್ಯಾವಳಿಯನ್ನು ಅತ್ಯಂತ ಅದ್ಧೂರಿಯಾಗಿ ಸಂಘಟಿಸುತ್ತ ಬಂದಿದೆ. 1930ರಲ್ಲಿ ಪ್ರಪ್ರಥಮ ಬಾರಿಗೆ ವಿಶ್ವಕಪ್ ಟೂರ್ನಿ ಉರುಗ್ವೆ ಆತಿಥ್ಯದಲ್ಲಿ ಜರುಗಿತು. ಎರಡನೇ ಮಹಾಯುದ್ಧದ ಕಾರಣ 1942 ಮತ್ತು 1946ರಲ್ಲಿ ಈ ಟೂರ್ನಿ ನಡೆದಿರಲಿಲ್ಲ. ಈ ಎರಡು ಸಂದರ್ಭ ಬಿಟ್ಟರೆ, ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಈಗ ಬ್ರೆಜಿಲ್ ವಿಶ್ವಕಪ್ನ ಜೊತೆಗೆ ಈ ಹಿಂದಿನ ವಿಶ್ವಕಪ್ಗಳ ಬಗ್ಗೆಯೂ ಸಂಕ್ಷಿಪ್ತವಾಗಿ ತಿಳಿಸುವ, ಗತವೈಭವದ ನೆನಪಿನ ಬುತ್ತಿ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ.
1930
ಉರುಗ್ವೆಗೆ ಚೊಚ್ಚಲ ಪ್ರಶಸ್ತಿ
ಮೊದಲ ವಿಶ್ವಕಪ್ 1930ರಲ್ಲಿ ಜರುಗಿತು. ಈ ವಿಶ್ವಕಪ್ ಪ್ರಪಂಚದ ಮೊದಲ ವಿಶ್ವ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಾಗಿ ಹೊರಹೊಮ್ಮಿತು. ಈ ಪಂದ್ಯಾವಳಿಯನ್ನು ಆಯೋಜಿಸಲು ಫಿಫಾ ಆಡಳಿತ ಮಂಡಳಿ ಉರುಗ್ವೆಯನ್ನು ಆರಿಸಿಕೊಂಡಿತು.
ಈ ಪಂದ್ಯಾವಳಿಯಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದು, ನಾಲ್ಕು ತಂಡಗಳ ಒಂದು ಗುಂಪು ಹಾಗೂ ಮೂರು ತಂಡಗಳ ಮೂರು ಗುಂಪುಗಳನ್ನಾಗಿ ವಿಂಗಡಿಸಿ ಲೀಗ್ ಹಂತದ ಪಂದ್ಯಗಳನ್ನು ನಡೆಸಲಾಯಿತು. ನಂತರ ಪ್ರತಿ ಗುಂಪಿನಿಂದ ಅಗ್ರಸ್ಥಾನ ಪಡೆದ ತಂಡಗಳು ಸೆಮಿಫೈನಲ್ನಲ್ಲಿ ಕಾದಾಟ ನಡೆಸಿದವು.
ಈ ಪಂದ್ಯಾವಳಿಯಲ್ಲಿ ಉರುಗ್ವೆ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ಅಮೆರಿಕಾ ರಾಷ್ಟ್ರಗಳು ವೃತ್ತಿಪರ ಲೀಗ್ ಹೊಂದಿದ್ದರಿಂದ, ಈ ತಂಡಗಳಿಗೆ ಶ್ರೇಯಾಂಕ ನೀಡಲಾಗಿತ್ತು. ಇನ್ನು ಯುರೋಪಿಯನ್ ರಾಷ್ಟ್ರಗಳ ಪೈಕಿ ಕೇವಲ ಫ್ರಾನ್ಸ್ ಮಾತ್ರ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು. ಇತರೆ ರಾಷ್ಟ್ರಗಳ ಅನುಪಸ್ಥಿತಿ ಅಚ್ಚರಿ ಮೂಡಿಸಿತು.
ಈ ಪಂದ್ಯಾವಳಿಯಲ್ಲಿ 18 ಪಂದ್ಯಗಳಿಂದ ಒಟ್ಟು 70 ಗೋಲುಗಳು ದಾಖಲಾಗಿದ್ದು, 18 ಗೋಲು ದಾಖಲಿಸಿದ ಅರ್ಜೆಂಟೀನಾ ಅತಿ ಹೆಚ್ಚು ಗೋಲು ದಾಖಲಿಸಿದ ತಂಡವಾಯಿತು. ಉರುಗ್ವೆ ಮುಂದೆ ಫೈನಲ್ನಲ್ಲಿ 4-2 ಅಂತರದಿಂದ ಮಂಕಾದ ಅರ್ಜೆಂಟೀನಾ ತಂಡ ರನ್ನರ್ ಅಪ್ ಆಗಿತ್ತು. ಈ ಪಂದ್ಯಾವಳಿಯ ಪ್ರಶಸ್ತಿಯ ಹೆಸರನ್ನು ವಿಕ್ಟರಿ ಎಂದು ಕರೆಯಲಾಗಿದ್ದು, ಇದನ್ನು ಫ್ರಾನ್ಸ್ನ ಶಿಲ್ಪಕಾರ ಅಬೆಲ್ ಲಾಫ್ಲರ್ ವಿನ್ಯಾಸ ಮಾಡಿದ್ದರು.
1934
ತವರಿನಲ್ಲಿ ಇಟಲಿ ಆಟ
ಎರಡನೇ ಫಿಫಾ ವಿಶ್ವಕಪ್ ಪಂದ್ಯಾವಳಿಯು ಇಟಲಿಯಲ್ಲಿ ಮೇ 27ರಿಂದ ಜೂನ್ 10ರವರೆಗೆ ನಡೆದಿದ್ದು, ಈ ಪಂದ್ಯಾವಳಿಯಲ್ಲಿ ಆತಿಥೇಯ ಇಟಲಿ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ಈ ಪಂದ್ಯಾವಳಿಯ ಅರ್ಹತಾ ಸುತ್ತಿನಲ್ಲಿ 32 ತಂಡಗಳು ಸೆಣೆಸಾಟ ನಡೆಸಿತ್ತಾದರು ಅದರಲ್ಲಿ 16 ತಂಡಗಳು ಅಂತಿಮವಾಗಿ ವಿಶ್ವಕಪ್ಗೆ ಅರ್ಹತೆ ಪಡೆದವು. ಈ ಬಾರಿ ಆರಂಭದಿಂದಲೇ ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿಯನ್ನು ನಡೆಸಲಾಗಿದ್ದು, ಒಟ್ಟು 17 ಪಂದ್ಯಗಳನ್ನು ನಡೆಸಲಾಗಿತ್ತು. ಒಂದುವೇಳೆ ಪಂದ್ಯ ಡ್ರಾಗೊಂಡಲ್ಲಿ ಮತ್ತೆ ಪಂದ್ಯವನ್ನು ನಡೆಸಲಾಗಿತ್ತು. ಈ ಬಾರಿಯ ಪಂದ್ಯಾವಳಿಗೆ ಹಾಲಿ ಚಾಂಪಿಯನ್ ಆಗಿದ್ದ ಉರುಗ್ವೆ ತಂಡ ಇಟಲಿ ಜತೆಗಿನ ಮನಸ್ತಾಪದಿಂದ ಈ ಪಂದ್ಯಾವಳಿಯಲ್ಲಿ ಭಾಗವಹಿಸಿರಲಿಲ್ಲ. ಅಲ್ಲದೆ ಇಂಗ್ಲೆಂಡ್ ತಂಡ ಗೈರು ಅಚ್ಚರಿಯ ಬೆಳವಣಿಗೆಯಾಗಿತ್ತು. 1930ರ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಪರ ಆಡಿದ್ದ ಲೂಸಿ ಮಾಂಟಿ, ಈ ಪಂದ್ಯಾವಳಿಯಲ್ಲಿ ಇಟಲಿಯ ತಂಡದ ಪರ ಆಡಿದ್ದರು.
ಈ ಪಂದ್ಯಾವಳಿಯಲ್ಲಿ 17 ಪಂದ್ಯಗಳಿಂದ ಒಟ್ಟು 70 ಗೋಲುಗಳು ದಾಖಲಾಗಿದ್ದು, ಚಾಂಪಿಯನ್ ಇಟಲಿ ತಂಡ 12 ಗೋಲು ದಾಖಲಿಸಿ ಹೆಚ್ಚು ಗೋಲು ದಾಖಲಿಸಿದ ತಂಡವಾಗಿತ್ತು. ಇನ್ನು ಇಟಲಿಗೆ 2-1 ಅಂತರದಿಂದ ಮಣಿದ ಜೆಕೊಸ್ಲೊವಾಕಿಯಾ ತಂಡ ರನ್ನರ್ ಅಪ್ಗೆ ತೃಪ್ತಿಪಟ್ಟುಕೊಂಡಿತು.
1938
ಬಿಟ್ಟುಕೊಡದ ಇಟಲಿ
ಮೂರನೇ ಫಿಫಾ ವಿಶ್ವಕಪ್ನಲ್ಲೂ ಇಟಲಿ ಆರ್ಭಟ ಮುಂದುವರಿಯಿತು. ಈ ಪಂದ್ಯಾವಳಿಯಲ್ಲೂ ಉತ್ತಮ ಪ್ರದರ್ಶನ ನೀಡಿದ ಇಟಲಿ ತಂಡ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಪಂದ್ಯಾವಳಿಯ ಆತಿಥ್ಯ ಫ್ರಾನ್ಸ್ ಪಾಲಾಗಿತ್ತು.
ಈ ಟೂರ್ನಿಯಲ್ಲಿ 15 ತಂಡಗಳು ಭಾಗವಹಿಸಿದ್ದು, ಅರ್ಜೆಂಟೀನಾ, ಉರುಗ್ವೆ, ಇಂಗ್ಲೆಂಡ್ ಹಾಗೂ ಸ್ಪೇನ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿರಲಿಲ್ಲ. ಈ ಪಂದ್ಯಾವಳಿಗೆ ಆಸ್ಟ್ರಿಯಾ ತಂಡ ಅರ್ಹತೆ ಪಡೆದಿತ್ತಾದರೂ, ಆ ವರ್ಷ ಮಾರ್ಚ್ನಲ್ಲಿ ಜರ್ಮನಿ ತಂಡವನ್ನು ಟೂರ್ನಿಗೆ ಸೇರಿಸಿಕೊಂಡ ಪರಿಣಾಮ ಆಸ್ಟ್ರಿಯಾ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತವಾಯಿತು. ಈ ಟೂರ್ನಿಯಿಂದ ಮೊದಲ ಬಾರಿಗೆ ವಿಶ್ವಕಪ್ ಆತಿಥ್ಯ ವಹಿಸುವ ರಾಷ್ಟ್ರ ನೇರವಾಗಿ ಟೂರ್ನಿಗೆ ಅರ್ಹತೆ ಪಡೆಯುವಂತಾಯಿತು. ಅಲ್ಲದೆ ಈ ಪಂದ್ಯಾವಳಿಯಲ್ಲಿ ಆಟಗಾರರ ಶರ್ಟ್ಗಳಲ್ಲಿ ಸಂಖ್ಯೆಗಳನ್ನು ಬಳಸುವ ಪದ್ಧತಿ ಪರಿಚಯಿಸಲಾಯಿತು. ಟೂರ್ನಿಯಲ್ಲಿ 1934ರ ಮಾದರಿಯಲ್ಲೇ ಪಂದ್ಯಾವಳಿ ನಡೆಸಲಾಗಿದ್ದು, ಒಟ್ಟು 18 ಪಂದ್ಯಗಳು ನಡೆದವು. ಇಲ್ಲಿ 84 ಗೋಲುಗಳು ದಾಖಲಾಗಿದ್ದು, ಹಂಗೇರಿ 15 ಗೋಲು ದಾಖಲಿಸಿ ಅತಿ ಹೆಚ್ಚು ಗೋಲು ದಾಖಲಿಸಿದ ತಂಡವಾಯಿತು. ಇಟಲಿ ವಿರುದ್ಧ ಫೈನಲ್ನಲ್ಲಿ ಸೋತ ಹಂಗೇರಿ ರನ್ನರ್ ಅಪ್ ಆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


