ಕ್ರೀಡೆ

ನಡಾಲ್ ಗೆಲವಿನ ನರ್ತನ

Published On :

ಪ್ಯಾರಿಸ್: ವಿಶ್ವದ ನಂಬರ್ ಒನ್ ಆಟಗಾರ ಸ್ಪೇನ್‌ನ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ತಮ್ಮ ಗೆಲವಿನ ಯಾತ್ರೆ ಮುಂದುವರಿಸಿದ್ದು, ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಗೆಲವು ದಾಖಲಿಸಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ರಾಫೆಲ್ ನಡಾಲ್, ಎದುರಾಳಿ ಸರ್ಬಿಯಾದ ಡೂಸನ್ ಲ್ಯಾಜೊವಿಕ್ ವಿರುದ್ಧ 6-1, 6-2, 6-1 ನೇರ ಸೆಟ್‌ಗಳ ಸುಲಭ ಗೆಲವು ದಾಖಲಿಸಿದ್ದಾರೆ.
ಆರಂಭದಿಂದ ಅಂತ್ಯದವರೆಗೂ ಎದುರಾಳಿ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದ ನಡಾಲ್, ಯಾವುದೇ ಹಂತದಲ್ಲೂ ತಮ್ಮ ನಿಯಂತ್ರಣ ಕೈಬಿಡಲಿಲ್ಲ. ಆರಂಭಿಕ ಸೆಟ್‌ನಲ್ಲಿ 6-1 ಅಂತರದ ಮುನ್ನಡೆ ಕಂಡುಕೊಂಡ ನಡಾಲ್, ಎರಡನೇ ಸೆಟ್‌ನಲ್ಲೂ 6-2 ಅಂತರದ ಮುನ್ನಡೆ ಸಾಧಿಸಿದರು. ನಂತರ ಮೂರನೇ ಸೆಟ್‌ನಲ್ಲಿಯೂ ಎದುರಾಳಿಯಿಂದ ಪ್ರತಿರೋಧ ಎದುರಿಸದ ನಡಾಲ್ ಮತ್ತೆ 6-1 ಅಂತರ ಸಾಧಿಸಿ ಪಂದ್ಯವನ್ನು ವಶಪಡಿಸಿಕೊಂಡರು.
ಪುರುಷರ ವಿಭಾಗ ಮತ್ತೊಂದು ಪಂದ್ಯದಲ್ಲಿ ಸ್ಪೇನ್‌ನ ಇನ್ನೊಬ್ಬ ಆಟಗಾರ 5ನೇ ರ್ಯಾಂಕಿಂಗ್‌ನ ಡೇವಿಡ್ ಫೆರರ್ ಸಹ ಗೆಲವಿನ ಸಿಹಿ ಸವಿದಿದ್ದಾರೆ.
19ನೇ ರ್ಯಾಂಕಿಂಗ್‌ನ ದಕ್ಷಿಣ ಆಫ್ರಿಕಾದ ಆಟಗಾರ ಕೆವಿನ್ ಆ್ಯಂಡರ್‌ಸನ್ ವಿರುದ್ಧ ಕಾದಾಟ ನಡೆಸಿದ ಫೆರರ್ ಅಂತಿಮವಾಗಿ 6-3, 6-3, 6-7 (5-7), 6-1 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.ಆರಂಭಿಕ ಎರಡು ಸೆಟ್‌ಗಳಲ್ಲಿ ಪ್ರಾಬಲ್ಯ ಮೆರೆದ ಫೆರರ್, ನಂತರ ಮೂರನೇ ಸೆಟ್‌ನಲ್ಲಿ ಕೆವಿನ್ ಅವರಿಂದ ತೀವ್ರ ಪ್ರತಿರೋಧ ಪಡೆದು ಸೆಟ್ ಅನ್ನು ಕೈ ಚೆಲ್ಲಿದರು. ನಂತರ ನಾಲ್ಕನೇ ಸೆಟ್‌ನಲ್ಲಿ ಮತ್ತೆ ಲಯ ಕಂಡುಕೊಂಡ ಡೇವಿಡ್ ಮುನ್ನಡೆ ಪಡೆದು ಪಂದ್ಯವನ್ನು ಮುಕ್ತಾಯಗೊಳಿಸಿದರು.  ಇನ್ನು ದಿನದ ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ 28ನೇ ರ್ಯಾಂಕಿಂಗ್‌ನ ಜರ್ಮನಿಯ ಆ್ಯಂಡ್ರಿಯಾ ಪೆಟ್ಕೊವಿಚ್ ತಮ್ಮ ಎದುರಾಳಿ ಹಾಲೆಂಡ್‌ನ ಕಿಕಿ ಬರ್ಟೆನ್ಸ್ ವಿರುದ್ಧ 1-6, 6-2, 7-5 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಇನ್ನು ಭಾನುವಾರ ತಡ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ 2ನೇ ರ್ಯಾಂಕಿಂಗ್‌ನ ನೊವಾಕ್ ಜೋಕೊವಿಚ್, ಫ್ರಾನ್ಸ್‌ನ ಜೊ ವಿಲ್ಫರ್ಡ್ ತ್ಸೊಂಗಾ ವಿರುದ್ಧ 6-1, 6-4, 6-1 ನೇರ ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ 7ನೇ ರ್ಯಾಂಕಿಂಗ್‌ನ ರಷ್ಯಾದ ಟೆನಿಸ್ ತಾರೆ ಮಾರಿಯಾ ಶರಪೋವಾ ತಮ್ಮ ಎದುರಾಳಿ ಆಸ್ಟ್ರೇಲಿಯಾದ ಸಮಾಂತ ಸೊಸೂರ್ ವಿರುದ್ಧ 3-6, 6-4, 6-0 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.