ಕ್ರೀಡೆ

ರೇಲ್‌ಗೆ ಹಳಿ ತಪ್ಪಿಸಿದ ಎಡಿಇ

Published On :

ಬೆಂಗಳೂರು: ಎಡಿಇ ತಂಡದ ಆಟಗಾರರು ರಾಜ್ಯ ಸೂಪರ್ ಡಿವಿಜನ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ರೋಚಕ ಗೆಲವು ದಾಖಲಿಸಿದ್ದಾರೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎಡಇ ತಂಡದ ಆಟಗಾರರು 4-1 ಗೋಲುಗಳಿಂದ ರೇಲ್ ವೀಲ್ ಫ್ಯಾಕ್ಟರಿ ತಂಡವನ್ನು ಪರಾಭವಗೊಳಿಸಿದರು.
ವಿಜೇತ ಎಡಿಇ ತಂಡದ ಪರ ದೀಪಕ್ 24ನೇ ಮತ್ತು 86ನೇ ನಿಮಿಷಗಳಲ್ಲಿ ಗೋಲು ಬಾರಿಸಿ ಮಿಂಚಿದರೆ, ಜೈವಂದನ್ 26ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಗೋಲು ಬಾರಿಸಿದರು.
ರೇಲ್ ವೀಲ್ ಫ್ಯಾಕ್ಟರಿ ತಂಡದ ಆಟಗಾರ ಅಜರ್ ಜಮಾಲ್ ಅವರು 'ಡಿ' ಆವರಣದ ಬಳಿ ಎಡಿಇ ತಂಡದ ಮುನ್ಪಡೆ ಆಟಗಾರ ಕವಿರಾಸನ್ ಅವರನ್ನು ಬೀಳಿಸಿದ ಪರಿಣಾಮ ರೆಫರಿ ಮಾರಿಯ ಜೋಸೆಫ್ ಅವರು ಪೆನಾಲ್ಟಿ ಅವಕಾಶವನ್ನು ನೀಡಿದರು.
ಈ ಅವಕಾಶದಲ್ಲಿ ಚೆಂಡನ್ನು ತೆಗೆದುಕೊಂಡ ಜೈವಂದನ್ ಆಕರ್ಷಕ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಇನ್ನು ಕೊನೆಯ ಘಟ್ಟದಲ್ಲಿ ಪಂದ್ಯದ ಹೆಚ್ಚುವರಿ ಸಮಯದ ಆಟದಲ್ಲಿ (90೤1ನೇ ನಿಮಿಷ) ಡ್ಯಾನಿ ಚಿರು ಅವರು ಎಡಿಇ ತಂಡದ ನಾಲ್ಕನೇ ಗೋಲು ಸಂಪಾದಿಸಿದರು.  ಇನ್ನು ರೇಲ್ ವೀಲ್ ಫ್ಯಾಕ್ಟರಿ ತಂಡದ ಪರ ಪ್ರಕಾಶ್ 67ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿದರು.
ಪಂದ್ಯದುದ್ದಕ್ಕೂ ಹೆಚ್ಚು ಆಕ್ರಮಣಕಾರಿ ಮನೋಭಾವ ತೋರಿದ ಎಡಿಇ ಆಟಗಾರರು ಎದುರಾಳಿ ಕೋಟೆಯ ಮೇಲೆ ನಿರಂತರ ದಂಡೆತ್ತಿ ಹೋಗುವ ಮೂಲಕ ಅವಕಾಶಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.
ಈ ಮಧ್ಯೆ ಇಂದೇ ನಡೆದ 'ಎ' ಡಿವಿಜನ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್ ಫುಟ್ಬಾಲ್ ಕ್ಲಬ್ ತಂಡದ ಆಟಗಾರರು ಬೆಂಗಳೂರು ಇಂಡಿಪೆಂಡೆಂಟ್ಸ್ ತಂಡದ ವಿರುದ್ಧ ಗೋಲುರಹಿತ ಡ್ರಾ ಫಲಿತಾಂಶಕ್ಕೆ ಸಮಾಧಾನಗೊಂಡರು.
ಎರಡೂ ತಂಡಗಳಿಗೆ ಗೋಲುಗಳಿಸುವ ಕೆಲವು ಉತ್ತಮ ಅವಕಾಶಗಳು ದೊರೆತಿದ್ದವು. ಆದರೆ, ಗುರಿ ಸೇರುವ ಹಾದಿಯಲ್ಲಿ ವೈಫಲ್ಯ ಅನುಭವಿಸಿ ನಿರಾಸೆಗೊಂಡವು.
ಮಂಗಳವಾರ ನಡೆಯಲಿರುವ 'ಎ' ಡಿವಿಜನ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಕಿಕರ್ಸ್ ಮತ್ತು ಡಿವೈಇಎಸ್ ಹಾಗೂ ಸೂಪರ್ ಡಿವಿಜನ್ ಲೀಗ್ ಪಂದ್ಯದಲ್ಲಿ ಜವಾಹರ್ ಯೂನಿಯನ್ ಮತ್ತು ಎಚ್‌ಎಎಲ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.