ಕ್ರೀಡೆ

ಸ್ಪೇನ್ ಎದುರು ಭಾರತಕ್ಕೆ ಜಯ ಅಗತ್ಯ

Published On :

ದಿ ಹೇಗ್ (ಹಾಲೆಂಡ್): ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡದ ಆಟಗಾರರು ವಿಶ್ವ ಕಪ್ ಹಾಕಿ ಚಾಂಪಿಯನ್ಶಿಪ್ನಲ್ಲಿ ತೀವ್ರ ಒತ್ತಡದಲ್ಲಿದ್ದು ಮತ್ತೊಂದು ಕಠಿಣ ಸವಾಲು ಎದುರಿಸಲು ಸಿದ್ಧರಾಗಬೇಕಿದೆ.
ಗ್ರೀನ್ಫೀಲ್ಡ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ 'ಎ' ಗುಂಪಿನ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಸ್ಪೇನ್ ವಿರುದ್ಧ ಸೆಣಸಲಿದ್ದಾರೆ.
ಆರಂಭಿಕ ಪಂದ್ಯದಲ್ಲಿ ಬೆಲ್ಜಿಯಂ ಹಾಗೂ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಗೆಲ್ಲುವ ಉತ್ತಮ ಅವಕಾಶಗಳನ್ನು ಕೊನೆಗಳಿಗೆಯಲ್ಲಿ ಹಾಳುಮಾಡಿಕೊಂಡಿದ್ದ ಭಾರತ ಅದಕ್ಕಾಗಿ ಪಶ್ಚಾತ್ತಾಪ ಪಟ್ಟಿದೆ. ಆದರೆ, ಸ್ಪೇನ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಭಾರತ ಪ್ರಮುಖವಾಗಿ ಸೋಲಿನ ಸರಪಳಿ ಕಳಚಿಕೊಂಡು ಟೂರ್ನಿಯಲ್ಲೇ ಮೊದಲ ಗೆಲವು ದಾಖಲಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕಿದೆ.
ಮೂರನೇ ಪಂದ್ಯದಲ್ಲೂ ಸ್ಪೇನ್ ಆಟಗಾರರಿಂದ ಭಾರತಕ್ಕೆ ಕಠಿಣ ಸವಾಲು ಎದುರಾಗುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ಎದುರಾಳಿ ತಂಡದ ಸ್ಯಾಂಟಿ ಫ್ರೆಕ್ಸಿಯಾ ಮತ್ತು ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಎಡ್ವರ್ಡ್ ಟುಬಾವು, ಭಾರತದ ಪಾಲಿಗೆ ಹೆಚ್ಚು ಅಪಾಯಕಾರಿಯಾಗಿದ್ದಾರೆ.
ಸ್ಪೇನ್ ತಂಡದಲ್ಲಿ ಹೆಚ್ಚು ಗುಣಮಟ್ಟದ ಆಟಗಾರರಿದ್ದು ನಿಜವಾಗಿಯೂ ನಮ್ಮ ಆಟಗಾರರಿಗೆ ಸಂಕಷ್ಟಗಳನ್ನು ತಂದೊಡ್ಡಬಲ್ಲರು. ಆದರೆ, ನಮ್ಮ ಆಟಗಾರರಲ್ಲೂ ವೃತ್ತಿಪರತೆ ಕೊರತೆಯಿಲ್ಲ. ಸ್ಪೇನ್ ಮುಂದೆ ಉತ್ತಮ ಪ್ರದರ್ಶನ ನೀಡುವಷ್ಟು ಸಾಮರ್ಥ್ಯ ಹೊಂದಿದ್ದಾರೆ ಎಂದು ಭಾರತ ತಂಡದ ತಾಂತ್ರಿಕ ನಿರ್ದೇಶಕ ರೋಲ್ಯಾಂಟ್ ಓಲ್ಟ್ಮನ್ಸ್ ಹೇಳಿದ್ದಾರೆ.
ಭಾರತ ತಂಡದಲ್ಲಿ ನಾಯಕ ಸರ್ದಾರ್ ಸಿಂಗ್  (182 ಪಂದ್ಯ) ಅತಿ ಹೆಚ್ಚು ಅನುಭವ ಹೊಂದಿರುವ ಆಟಗಾರರಾಗಿದ್ದಾರೆ. ಉಳಿದಂತೆ, ಗುರ್ಬಾಜ್ ಸಿಂಗ್, ವಿ.ಆರ್. ರಘುನಾಥ್ ಮತ್ತು ಎಸ್.ವಿ. ಸುನೀಲ್ ಸಹ 100 ಕ್ಕೂ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಉಳಿದ ಆಟಗಾರರೂ ಸಹ ಉತ್ತಮ ಫಾರ್ಮ್ನಲ್ಲಿದ್ದಾರೆ.
ಮತ್ತೊಂದೆಡೆ ಸ್ಪೇನ್ ತಂಡ ಆಡಿರುವ ಎರಡು ಪಂದ್ಯಗಳ ಪೈಕಿ ಇಂಗ್ಲೆಂಡ್ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿದ್ದರೆ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರು 0-3 ಗೋಲುಗಳಿಂದ ಸೋಲನುಭವಿಸಿದೆ. ಹಾಗಾಗಿ, ಸ್ಪೇನ್ ತಂಡಕ್ಕೂ ಸಹ ಇಲ್ಲಿ ಗೆಲವು ಅಗತ್ಯವಾಗಿದೆ.
ಸ್ಪೇನ್ ತಂಡದಲ್ಲಿ ಎಂಟು ಆಟಗಾರರು 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವಿಗಳಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.