1962- ಬ್ರೆಜಿಲ್ 2ನೇ ಬಾರಿ ಚಾಂಪಿಯನ್

ಹಾಲಿ ಚಾಂಪಿಯನ್ ಪಟ್ಟದೊಂದಿಗೆ 1962ರಲ್ಲಿ ಚಿಲೆಯ ಫಿಫಾ ವಿಶ್ವಕಪ್ಗೆ ಕಣಕ್ಕಿಳಿದ ಬ್ರೆಜಿಲ್, ಪ್ರಶಸ್ತಿಯನ್ನು ತನ್ನಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಪಂದ್ಯಾವಳಿಯಲ್ಲಿ ಒಟ್ಟು 57 ತಂಡಗಳು ಅರ್ಹತಾ ಸುತ್ತಿನಲ್ಲಿ ಕಾದಾಟ ನಡೆಸಿದ್ದವು. ನಂತರ 16 ತಂಡಗಳು ಪ್ರಮುಖ ಟೂರ್ನಿಯಲ್ಲಿ ಕಾದಾಟ ನಡೆಸಿದವು. ಫೈನಲ್ ಪಂದ್ಯದಲ್ಲಿ ಚೆಕೊಸ್ಲೊವಾಕಿಯಾದ ವಿರುದ್ಧ 3-1 ಅಂತರದೊಂದಿಗೆ ಬ್ರೆಜಿಲ್ ಪ್ರಶಸ್ತಿ ಎರಡನೇ ಬಾರಿಗೆ ಎತ್ತಿ ಹಿಡಿಯಿತು. ಪಂದ್ಯಾವಳಿ ಆಯೋಜನೆಗೆ ಎರಡು ವರ್ಷಕ್ಕೂ ಮುನ್ನ ಚಿಲೆ ಭೂಕಂಪದಿಂದ ತತ್ತರಿಸಿದ್ದರೂ, ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿ ಗಮನ ಸೆಳೆದಿತ್ತು. ಈ ಪಂದ್ಯಾವಳಿಯಲ್ಲಿ ನಾಲ್ಕು ಗುಂಪಿಗಳನ್ನಾಗಿ ವಿಂಗಡಿಸಿ ಅಗ್ರ ಎರಡು ತಂಡ ಎಂಟರ ಘಟ್ಟಕ್ಕೆ ಪ್ರವೇಶಿಸುವಂತಿತ್ತು. ಟೂರ್ನಿಯಲ್ಲಿ ಒಟ್ಟು 32 ಪಂದ್ಯಗಳು ನಡೆದಿದ್ದು, 89 ಗೋಲುಗಳು ದಾಖಲಾಗಿದ್ದವು. ಅದರಲ್ಲಿ ಬ್ರೆಜಿಲ್ 14 ಗೋಲು ದಾಖಲಿಸಿ ಪಾರಮ್ಯ ಮೆರೆದಿತ್ತು. ಪಂದ್ಯಾವಳಿಯ ಗುಂಪು ಹಂತದಲ್ಲಿ ಚಿಲೆ ಹಾಗೂ ಇಟಲಿ ನಡುವಣ ಪಂದ್ಯ ಆಟಕ್ಕಿಂತ ದ್ವೇಷ ಸಾಧಿಸಿದ್ದು, ಹೆಚ್ಚಾಗಿತ್ತು. ಅಲ್ಲದೆ ಪಂದ್ಯದ ರೆಫ್ರಿ ಕಾರ್ಲೊಸ್ ಡಿಟ್ಬಾರ್ನ್, ನಾನು ಫುಟ್ಬಾಲ್ ಪಂದ್ಯದ ಬದಲು ಯುದ್ಧವೊಂದಕ್ಕೆ ರೆಫ್ರಿಯಾಗಿದ್ದೆ ಎಂದು ತಿಳಿಸಿದ್ದರು.
1966
ಆಂಗ್ಲರ ವಶಕ್ಕೆ ಕಪ್
ಈ ಫಿಫಾ ವಿಶ್ವಕಪ್ ಪಂದ್ಯಾವಳಿಯು ಹಲವು ಕಾರಣಗಳಿಂದ ವಿಶೇಷವೆನಿಸಿತ್ತು. ಮೊದಲ ಬಾರಿಗೆ ಟಿವಿಯಲ್ಲಿ ಎಲ್ಲಾ ಪಂದ್ಯಗಳ ಪ್ರಸಾರವಾಗಿದ್ದು, ವಿಶ್ವದಾದ್ಯಂತ ಅಭಿಮಾನಿಗಳು ಟಿವಿ ಮೂಲಕ ರೋಚಕ ಕ್ಷಣಗಳನ್ನು ಆಸ್ವಾದಿಸಿದರು. ಈ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಬರೋಬ್ಬರಿ 70 ತಂಡಗಳು ಕಾದಾಟ ನಡಸಿದ್ದವು. ಅವುಗಳಲ್ಲಿ 16 ತಂಡಗಳು ಪ್ರಮುಖ ಪಂದ್ಯಾವಳಿಗೆ ಪ್ರವೇಶ ಪಡೆದವು. ಈ ಟೂರ್ನಿಯನ್ನು ಕಳೆದೆರಡು ವಿಶ್ವಕಪ್ ಮಾದರಿಯಲ್ಲೇ ನಡೆಸಲಾಗಿತ್ತು. ಅಲ್ಲದೆ ಈ ವಿಶ್ವಕಪ್ನಲ್ಲಿ ಎಲ್ಲಾ ಪ್ರಮುಖ ಫುಟ್ಬಾಲ್ ತಂಡಗಳು ಭಾಗವಹಿಸಿದ್ದು, ಮತ್ತೊಂದು ವಿಶೇಷ. ಈ ಟೂರ್ನಿಯಿಂದ ಡೋಪಿಂಗ್ ಪರೀಕ್ಷೆಯನ್ನು ಪರಿಚಯಿಸಿದ್ದು, ಪಂದ್ಯವಳಿಯ ಮತ್ತೊಂದು ಆಕರ್ಷಣೆಯ ಅಂಶ. ಅಲ್ಲದೆ ಮೊದಲ ಬಾರಿಗೆ ಟೂರ್ನಿಯ ಮ್ಯಾಸ್ಕಾಟ್ ಅನ್ನು ಪರಿಚಯಿಸಲಾಯಿತು. ಈ ಟೂರ್ನಿಯಲ್ಲಿ ಒಟ್ಟು 32 ಪಂದ್ಯಗಳು ನಡೆದಿದ್ದು, 89 ಗೋಲುಗಳು ದಾಖಲಾದವು. ಪೊರ್ಚುಗಲ್ 17 ಗೋಲು ಬಾರಿಸಿ ಹೆಚ್ಚು ಗೋಲು ದಾಖಲಿಸಿದ ತಂಡವಾಯಿತು. ಈ ವಿಶ್ವಕಪ್ ಅನ್ನು ಇಂಗ್ಲೆಂಡ್ನಲ್ಲಿ ಆಯೋಜಿಸಲಾಯಿತಾದರೂ, ಆತಿಥೇಯ ಇಂಗ್ಲೆಂಡ್ ತಂಡ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪಶ್ಚಿಮ ಜರ್ಮನಿ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿ ಚಾಂಪಿಯನ್ ಪಟ್ಟಕ್ಕೇರಿತು.
1970
ಬ್ರೆಜಿಲ್ ಮಡಿಲಿಗೆ 3ನೇ ಪ್ರಶಸ್ತಿ
1958ರ ವಿಶ್ವಕಪ್ ಗೆದ್ದ ನಂತರ ಬ್ರೆಜಿಲ್ ತಂಡ ವಿಶ್ವ ಫುಟ್ಬಾಲ್ನಲ್ಲಿ ದೈತ್ಯಾಕಾರವಾಗಿ ಬೆಳೆಯಿತು. 12 ವರ್ಷಗಳ ಅಂತರದಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಬ್ರೆಜಿಲ್ ತನ್ನ ಪ್ರಭುತ್ವವನ್ನು ಮತ್ತೊಮ್ಮೆ ಸಾಬೀತು ಪಡಿಸಿತು. ಈ ಟೂರ್ನಿಯನ್ನು ಮೆಕ್ಸಿಕೊನಲ್ಲಿ ಆಯೋಜಿಸಲಾಗಿತ್ತು. ಮೊದಲ ಬಾರಿಗೆ ಫಿಫಾ ವಿಶ್ವಕಪ್ ಪಂದ್ಯಾವಳಿಯನ್ನು ದಕ್ಷಿಣ ಅಮೆರಿಕಾ ಹಾಗೂ ಯೂರೋಪ್ ಹೊರಗಿನ ರಾಷ್ಟ್ರದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಯಿತು. ಈ ಟೂರ್ನಿಯಿಂದ ಪ್ರತಿ ತಂಡ ಪಂದ್ಯದ ವೇಳೆ ಇಬ್ಬರು ಆಟಗಾರರಿಗೆ ಸಬ್ಟಿಟ್ಯೂಟ್ ಅವಕಾಶ ನೀಡಲಾಯಿತು. ಅಲ್ಲದೆ ಮೊದಲ ಬಾರಿಗೆ ಕಲರ್ ಟಿವಿಯಲ್ಲಿ ಫುಟ್ಬಾಲ್ ಪಂದ್ಯ ಪ್ರಸಾರವಾಯಿತು. ಈ ಪಂದ್ಯಾವಳಿಯಿಂದ ರೆಡ್ ಹಾಗೂ ಹಳದಿ ಕಾರ್ಡ್ ಮತ್ತು ಫೇರ್ಪ್ಲೇ ಪ್ರಶಸ್ತಿ ಪರಿಚಯಿಸಲಾಯಿತು. ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಿದ್ದು, 32 ಪಂದ್ಯಗಳು ನಡೆದವು. ಮೊರೊಕೊ ಪಂದ್ಯಾವಳಿಯಲ್ಲಿ ಭಾಗವಹಿಸುವ ಮೂಲಕ ಎರಡನೇ ಮಹಾಯುದ್ಧದ ಬಳಿಕ ಮೊದಲ ಬಾರಿಗೆ ಆಫ್ರಿಕಾ ತಂಡವೊಂದು ಅರ್ಹತೆ ಪಡೆದಂತಾಯಿತು. ಅರ್ಜೆಂಟೀನಾ, ಫ್ರಾನ್ಸ್, ಪೊರ್ಚುಗಲ್ ಮತ್ತು ಸ್ಪೇನ್ ತಂಡಗಳ ಗೈರು ಪಂದ್ಯಾವಳಿಯ ಮತ್ತೊಂದು ಅಂಶವಾಗಿತ್ತು. ಪ್ರಶಸ್ತಿ ಸುತ್ತಿನಲ್ಲಿ ಇಟಲಿ ವಿರುದ್ಧ 4-1 ಗೋಲುಗಳ ಅಂತರದಿಂದ ಬ್ರೆಜಿಲ್ ಜಯಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


