ಕ್ರೀಡೆ

ಮಲೇಷ್ಯಾ ಮೇಲೆ ಮೇಲುಗೈ

Published On :

ದಿ ಹೇಗ್ (ಹಾಲೆಂಡ್): ಟೂರ್ನಿಯಲ್ಲಿ ಗೆಲವಿನ ಮುಖ ನೋಡದೇ ಕಂಗೆಟ್ಟಿದ್ದ ಭಾರತ ತಂಡ, ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಈ ಮೂಲಕ ಭಾರತ ಪ್ರಸಕ್ತ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಮೊದಲ ಬಾರಿಗೆ ಗೆಲವು ದಾಖಲಿಸಿದೆ.    
ಶನಿವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮಲೇಷ್ಯಾದ ವೇಗದ ಸ್ಟ್ರೈಕರ್‌ಗಳ ಹೋರಾಟವನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದ ಭಾರತ ತಂಡ 3-2 ಅಂತರ ಕಾಯ್ದುಕೊಳ್ಳುವ ಮೂಲಕ ಗೆಲವಿನ ನಗೆ ಬೀರಿತು.
ಭಾರತ ಆರಂಭಿಕ ಮೂರು ಪಂದ್ಯಗಳಿಂದ ಕೇವಲ 1 ಅಂಕವನ್ನು ದಾಖಲಿಸುವ ಮೂಲಕ ನಿರಾಸೆ ಮೂಡಿಸಿತ್ತು. ಇನ್ನು ಮಲೇಷ್ಯಾ ತಂಡವು ಸಹ ಭಾರತದ ರೀತಿಯಲ್ಲೇ ಒತ್ತಡದಿಂದ ಕಣಕ್ಕಿಳಿದಿತ್ತು. ಕಾರಣ ಮಲೇಷ್ಯಾ ಸಹ ಪಂದ್ಯಾವಳಿಯಲ್ಲಿ ಅಂಕ ಖಾತೆ ತೆರೆದಿರಲಿಲ್ಲ.
ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಭಾರತ, ಸ್ಪೇನ್ ವಿರುದ್ಧದ ಮೂರನೇ ಪಂದ್ಯದಲ್ಲಿ 1-1 ಅಂತರದ ಡ್ರಾ ಸಾಧಿಸಿ 1 ಅಂಕವನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈ ಗೆಲವಿನಿಂದ ಭಾರತ ಎ ಗುಂಪಿನಲ್ಲಿ ಕೆಳ ಸ್ಥಾನ ಪಡೆಯುವುದರಿಂದ ಪಾರಾಗಿದೆ.  ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತ ತಂಡದ ಆಟಗಾರರು ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಪಂದ್ಯದ 14ನೇ ನಿಮಿಷದಲ್ಲಿ ಭಾರತದ ಜಸ್‌ಜೀತ್ ಸಿಂಗ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ, ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ನಂತರ ಮೊದಲ ಅವಧಿ ಮುಕ್ತಾಯದ ವೇಳೆಗೆ ಭಾರತ 1-0 ಮುನ್ನಡೆ ಕಾಯ್ದುಕೊಂಡಿತು.
ನಂತರ ಎರಡನೇ ಅವಧಿಯಲ್ಲಿ ಉಭಯ ತಂಡಗಳ ಕಾದಾಟ ತೀವ್ರಗೊಂಡಿತು. 46ನೇ ನಿಮಿಷದಲ್ಲಿ ಮಲೇಷ್ಯಾದ ರಾಜೀ ಗೋಲು ದಾಖಲಿಸುವ ಮೂಲಕ ತಂಡದ ಅಂತರವನ್ನು ಸಮಗೊಳಿಸಿದರು. ಕೆಲವೇ ನಿಮಿಷಗಳಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಆಕಾಶ್‌ದೀಪ್ ಸಿಂಗ್ (49 ಹಾಗೂ 52ನೇ ನಿಮಿಷ) ಸತತ ಎರಡು ಗೋಲು ದಾಖಲಿಸಿ, ತಂಡ ಮತ್ತೆ ಮುನ್ನಡೆ ಕಾಯ್ದುಕೊಳ್ಳುವಂತೆ ನೋಡಿಕೊಂಡರು.
ಈ ವೇಳೆ ಎಚ್ಚರಿಕೆಯ ಆಟ ಪ್ರದರ್ಶಿಸಲು ಮುಂದಾದ ಮಲೇಷ್ಯಾ ಮಹ್ರಾನ್ ಜಲಿಲ್ ಅವರ ಗೋಲಿನಿಂದ ಅಂತರವನ್ನು 2-3ಕ್ಕೆ ಇಳಿಸಿಕೊಂಡಿತಾದರೂ, ನಂತರ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಪಂದ್ಯದಲ್ಲಿ ಪರಾಭವಗೊಂಡಿತು. ಇನ್ನು ಭಾರತದ ಪರ ಗೋಲ್‌ಕೀಪರ್ ಶ್ರೀಜೇಶ್ ಮತ್ತೊಮ್ಮೆ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಮಹತ್ವದ ಹಂತಗಳಲ್ಲಿ ಎದುರಾಳಿಗಳ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.