ಕ್ಲೇ ಕೋರ್ಟ್ಗೆ ನಡಾಲ್ಲೇ ಕಿಂಗ್

ಪ್ಯಾರೀಸ್: ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ, ನಂತರ ಅದ್ಭುತ ಪ್ರದರ್ಶನ ನೀಡಿದ ರಾಫೆಲ್ ನಡಾಲ್ ಅವರು, ತಮ್ಮ ಬಲಿಷ್ಠ ಎದುರಾಳಿ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸುವ ಮೂಲಕ ಫ್ರೆಂಚ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಇದರೊಂದಿಗೆ ಕ್ಲೇ ಕೋರ್ಟ್ ಕಿಂಗ್ ಎಂಬ ಬಿರುದನ್ನು ಸಾಬೀತುಪಡಿಸಿದರು. ಅಲ್ಲದೆ, 5 ಬಾರಿ ಫ್ರೆಂಚ್ ಓಪನ್ ಗೆದ್ದ ಮೊದಲ ಆಟಗಾರ ಎಂಬ ಕೀರ್ತಿಗೆ ನಡಾಲ್ ಪಾತ್ರರಾದರು.
ಭಾನುವಾರ ತೀವ್ರ ಪೈಪೋಟಿಯಿಂದ ನಡೆದ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಸ್ಪೇನ್ನ ನಡಾಲ್ ಅವರು, ಸರ್ಬಿಯಾದ ನೊವಾಕ್ ಜೊಕೊವಿಚ್ ವಿರುದ್ಧ 3-6, 7-5, 6-2, 6-4 ಸೆಟ್ಗಳಿಂದ ವಿಜಯ ಸಾಧಿಸುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ 66ನೇ ಜಯ ಸಾಧಿಸಿ ದಾಖಲೆ ಬರೆದ ನಡಾಲ್, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲನುಭವಿಸಿದ್ದಾರೆ.
ಇದರೊಂದಿಗೆ ವಿಶ್ವದ ನಂಬರ್ 1 ಆಟಗಾರ, 28ರ ಹರೆಯದ ನಡಾಲ್ ತಮ್ಮ ಟೆನಿಸ್ ವೃತ್ತಿಜೀವನದ 14ನೇ ಗ್ರ್ಯಾನ್ ಸ್ಲ್ಯಾಮ್ ಮತ್ತು ತಮ್ಮ 9ನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಲ್ಲದೆ, ಅಮೆರಿಕದ ಮಾಜಿ ಟೆನಿಸ್ ತಾರೆ ಪೀಟ್ ಸ್ಯಾಂಪ್ರಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಪ್ರಮುಖ 17 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ರೋಜರ್ ಫೆಡರರ್ ಅಗ್ರಸ್ಥಾನದಲ್ಲಿದ್ದಾರೆ. ಆದರೆ, ವಿಶ್ವದ ನಂಬರ್ 2 ಆಟಗಾರ ಸರ್ಬಿಯಾದ ಜೊಕೊವಿಚ್ ಅವರ ಫ್ರೆಂಚ್ ಓಪನ್ ಗೆಲ್ಲುವ ಕನಸು ಹಾಗೇ ಉಳಿದುಕೊಂಡಿತು. ಈ ಪಂದ್ಯಾವಳಿಯಲ್ಲಿ 2012ರಲ್ಲಿ ರನ್ನರ್ ಆಗಿದ್ದ ಜೊಕೊವಿಚ್, ಈಗ ಮತ್ತೆ ಎರಡನೇ ಬಾರಿಗೆ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿದ್ದಾರೆ. ಮೊದಲ ಸೆಟ್ನಲ್ಲಿ ನಡಾಲ್ ಅವರು 3-6 ಅಂತರದಿಂದ ಕೈಚೆಲ್ಲುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು. ಆದರೆ, ನಂತರ ಬಿರುಸಿನಿಂದ ನಡೆದ ಎರಡನೇ ಸೆಟ್ನಲ್ಲಿ 7-5 ಅಂತರದಿಂದ ಮೇಲುಗೈ ಸಾಧಿಸುವ ಮೂಲಕ ವಿಶ್ವಾಸ ಹೆಚ್ಚಿಸಿಕೊಂಡರು. ನಂತರ 3ನೇ ಸೆಟ್ನಲ್ಲಿ 6-2 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು. 4ನೇ ಸೆಟ್ನಲ್ಲಿ ಎದುರಾಳಿ ಜೊಕೊವಿಚ್ ಕೊಂಚ ಪ್ರತಿರೋಧ ಒಡ್ಡಿದರಾದರೂ, ವಿಜಯದ ಸಂಭ್ರಮ ಆಚರಿಸುವಲ್ಲಿ ನಡಾಲ್ ಯಶಸ್ವಿಯಾದರು.
ಜೊಕೊವಚ್ ಎರಡು ತಪ್ಪು ಮಾಡುವುದರೊಂದಿಗೆ 3 ಗಂಟೆ 31 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯ ಅಂತ್ಯಗೊಂಡಿತು. ಪಂದ್ಯ ವೀಕ್ಷಿಸಲು ಆಗಮಿಸಿದ್ದ ನಡಾಲ್ ಅಭಿಮಾನಿಗಳು ಜಯಘೋಷ ಮೊಳಗಿಸದರು. ಶೀ- ಶಾಯಿ ಪೆಂಗ್ಗೆ ಡಬಲ್ಸ್ ಪ್ರಶಸ್ತಿ: ಚೈನೀಸ್ ತೈಪೇನ ಸೂ ವೀ ಶೀ ಮತ್ತು ಚೀನಾದ ಶಾಯಿ ಪೆಂಗ್ ಅವರು ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸೂ ವೀ ಶೀ ಮತ್ತು ಶಾಯಿ ಪೆಂಗ್ ಅವರು ಇಟಲಿಯ ಸಾರಾ ಎರಾನಿ ಮತ್ತು ರಾಬರ್ಟಾ ವಿನ್ಸಿ ಅವರನ್ನು 6-4, 6-1 ನೇರ ಸೆಟ್ಗಳಿಂದ ಸೋಲಿಸಿದರು. ಅಗ್ರಶ್ರೇಯಾಂಕ ಹೊಂದಿದ್ದ ಚೈನೀಸ್ ತೈಪೇ ಮತ್ತು ಚೀನಾ ಜೋಡಿಯು ಎರಡೂ ಸೆಟ್ಗಳಲ್ಲಿ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸುವ ಮೂಲಕ ಎರಡನೇ ಶ್ರೇಯಾಂಕಿತ ಸಾರಾ ಮತ್ತು ರಾಬರ್ಟಾ ವಿರುದ್ಧ ನಿರೀಕ್ಷಿತ ಗೆಲವು ದಾಖಲಿಸುವಲ್ಲಿ ಯಶಸ್ವಿಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


