ಕ್ರೀಡೆ

ಕ್ವಾರ್ಟರ್‌ಗೆ ಸೈನಾ, ಸಿಂಧು

ಕ್ವಾರ್ಟರ್‌ಗೆ ಸೈನಾ, ಸಿಂಧು
Published On :

ಸಿಡ್ನಿ: ಭಾರತದ ಅಗ್ರಮಾನ್ಯ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ಅವರು ಆಸ್ಟ್ರೇಲಿಯನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಆದರೆ, ಪುರುಷರ ವಿಭಾಗದಲ್ಲಿ ನಿರಾಶಾದಾಯಕ ಪ್ರದರ್ಶನ ಹೊರಹೊಮ್ಮಿದ್ದು, ಸಿಂಗಲ್ಸ್ ಮತ್ತು ಡಬಲ್ಸ್‌ಗಳೆರಡರಲ್ಲೂ ಭಾರತದ ಸವಾಲು ಅಂತ್ಯಗೊಂಡಿದೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವದ 8ನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ 21-18, 21-15 ನೇರ ಅಂಕಗಳ ಅಂತರದಲ್ಲಿ ಭಾರತದವರೇ ಆದ ಪಿ.ಸಿ. ತುಳಸಿ ಅವರನ್ನು ಪರಾಭವಗೊಳಿಸಿದರು.   ಮೊದಲ ಗೇಮ್‌ನಲ್ಲಿ ಸೈನಾಗೆ ಕಠಿಣ ಸವಾಲು ಒಡ್ಡಿದ್ದ ತುಳಸಿ, ಎರಡನೇ ಗೇಮ್‌ನಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲಿಲ್ಲ. ತುಳಸಿ ಎಸಗಿದ ತಪ್ಪುಗಳ ಲಾಭ ಪಡೆದ ಸೈನಾ 42 ನಿಮಿಷಗಳ ಆಟದಲ್ಲಿಯೇ ಅಂತಿಮ ಗೆಲವು ದಾಖಲಿಸಿ ಎಂಟರಘಟ್ಟಕ್ಕೆ ಅರ್ಹತೆ ಪಡೆದುಕೊಂಡರು.
ಮೊದಲ ಗೇಮ್‌ನ ಆರಂಭದಲ್ಲಿ ಸೈನಾ 3-0 ಅಂತರದಿಂದ ಮುನ್ನಡೆ ಸಾಧಿಸುವ ಮೂಲಕ ಸುಲಭ ಗೆಲವಿನ ನಿರೀಕ್ಷೆಯಲ್ಲಿದ್ದರು. ಆದರೆ, ನಂತರದಲ್ಲಿ ತಿರುಗಿಬಿದ್ದ ತುಳಸಿ ಕ್ರಮವಾಗಿ ಮೂರು ಅಂಕಗಳನ್ನು ತಮ್ಮ ಖಾತೆಗೆ ಹಾಕಿಕೊಳ್ಳುವ ಮೂಲಕ 3-3ರಿಂದ ಸಮಗೌರವ ಸಾಧಿಸಿ ಪಂದ್ಯ ಹೆಚ್ಚು ರೋಚಕತೆ ಪಡೆಯುವಂತೆ ಮಾಡಿದರು. ಆದರೂ, ಮುಂದಿನ ಹಾದಿಯಲ್ಲಿ ಸೈನಾರ ಅಂತಾರಾಷ್ಟ್ರೀಯ ಅನುಭವದಾಟದ ಮುಂದೆ ತುಳಸಿ ಸೋಲೊಪ್ಪಿಕೊಳ್ಳದೇ ವಿಧಿ ಇರಲಿಲ್ಲ.
ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಭಾರತೀಯ ಆಟಗಾರ್ತಿಗೆ ಜಪಾನಿನ ಎರಿಕೊ ಹೀರೋಸ್ ಅವರ ಸವಾಲು ಎದುರಾಗಲಿದೆ.
ಈ ಮಧ್ಯೆ ಟೂರ್ನಿಯ ಎಂಟನೇ ಶ್ರೇಯಾಂಕಿತ ಆಟಗಾರ್ತಿ ಪಿ.ವಿ. ಸಿಂಧು ಅವರು 21-13, 21-7 ನೇರ ಅಂಕಗಳ ಅಂತರದಲ್ಲಿ ಥಾಯ್ಲೆಂಡ್‌ನ ನಿಚಾನ್ ಜಿಂದಾಪಾನ್ ವಿರುದ್ಧ ಸುಲಭ ಜಯ ದಾಖಲಿಸಿದರು. ಪಂದ್ಯದಲ್ಲಿ ಅಕ್ರಮಣಕಾರಿ ಮನೋಭಾವ ಪ್ರದರ್ಶಿಸಿದ ಸಿಂಧು, ಕೇವಲ 31 ನಿಮಿಷಗಳ ಆಟದಲ್ಲಿ ಗೆಲವು ಸಂಪಾದಿಸಿ ಕ್ವಾರ್ಟರ್‌ಫೈನಲ್ ತಲುಪಿದರು.
ಮುಂದಿನ ಸುತ್ತಿನಲ್ಲಿ ಸಿಂಧು, ಸ್ಪೇನಿನ ಕರೊಲಿಯಾ ಮಾರಿನ್ ಅವರನ್ನು ಎದುರಿಸಲಿದ್ದಾರೆ.
ಇನ್ನು ಪುರುಷರ ವಿಭಾಗದಲ್ಲಿ ವಿಶ್ವದ 77ನೇ ಶ್ರೇಯಾಂಕಿತ ಬಿ. ಸಾಯಿ ಪ್ರಣೀತ್ ಸೋಲಿನ ಕಹಿ ಉಂಡಿದ್ದಾರೆ. ಆರನೇ ಶ್ರೇಯಾಂಕಿತ ಆಟಗಾರ ಚೀನಾದ ಝೆಂಗ್‌ಮಿಂಗ್ ವಾಂಗ್ ವಿರುದ್ಧ ಭಾರತೀಯ ಆಟಗಾರ 15-21, 21-8, 19-21 ಅಂಕಗಳಿಂದ ತಲೆಬಾಗಿಸಿದರು.
ಅದೇ ರೀತಿ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಆಲ್ವಿನ್ ಫ್ರಾನ್ಸಿಸ್ ಮತ್ತು ಅರುಣ್ ವಿಷ್ಣು ಜೋಡಿ 18-21, 9-21ರಿಂದ ತೈಪೇನ ಲೀ ಶೆಂಗ್ ಮುವಾ ಮತ್ತು ಸಾಯಿ ಚಿಯಾ ಶಿನ್ ಎದುರು ಎರಡನೇ ಸುತ್ತಿನ ಮುಖಾಬಲದಲ್ಲಿ ಸೋಲನುಭವಿಸಿತು.
ಮತ್ತೊಂದು ಪಂದ್ಯದಲ್ಲಿ ಪ್ರಣಯ್ ಜೆರ್ರಿ ಛೋಪ್ರಾ ಮತ್ತು ಅಕ್ಷಯ್ ದಿವಾಲ್ಕರ್ ಅವರು 13-21, 19-21 ಅಂಕಗಳಿಂದ ಕೊರಿಯಾದ ಸಂಗ್ ಹ್ಯೂನ್ ಕೊ ಮತ್ತು ಬೇಕ್ ಚೊಯೆಲ್ ಶಿನ್ ಎದುರು ತಲೆಬಾಗಿಸಿದರು.
8ನೇ ಸ್ಥಾನಕ್ಕೇರಿದ ಸೈನಾ
ನವದೆಹಲಿ: ಜಕಾರ್ತದಲ್ಲಿ ಇತ್ತೀಚೆಗೆ ನಡೆದ ಇಂಡೋನೇಶಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿದ್ದ ಭಾರತದ ಸೈನಾ ನೆಹ್ವಾಲ್ ನೂತನ ವಿಶ್ವ ರ್ಯಾಂಕಿಂಗ್‌ನಲ್ಲಿ 8ನೇ ಸ್ಥಾನಕ್ಕೇರಿದ್ದಾರೆ.
ಹೊಸ ರ್ಯಾಂಕಿಂಗ್ ಪಟ್ಟಿಯ ಪ್ರಕಾರ ಸೈನಾ, ಮಹಿಳೆಯರ ಸಿಂಗಲ್ಸ್ ಕ್ರಮಾಂಕದಲ್ಲಿ ಒಂದು ಸ್ಥಾನ ಮೇಲೆರಿದಂತಾಗಿದೆ. ಈ ಮಧ್ಯೆ ಭಾರತದ ಮತ್ತೊಬ್ಬ ಉದಯೋನ್ಮುಖ ಆಟಗಾರ್ತಿ ಪಿ.ವಿ. ಸಿಂಧು, 10ನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.