ಕ್ರೀಡೆ

ಬೆನ್‌ಗೆ ಬಾಗಿದ ಕಿವೀಸ್

ಬೆನ್‌ಗೆ ಬಾಗಿದ ಕಿವೀಸ್
Published On :

ಬಾರ್ಬಡಾಸ್: ಎಡಗೈ ಸ್ಪಿನ್ನರ್ ಸುಲೇಮನ್ ಬೆನ್ ಅವರ ಸ್ಪಿನ್ ಮೋಡಿಗೆ ಪರದಾಡಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಎದುರು ಸಾಧಾರಣ ಮೊತ್ತಕ್ಕೆ ಕುಸಿದಿದ್ದಾರೆ.
ಕಿಂಗ್‌ಸ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನವಾದ ಗುರುವಾರದ ಆಟದಲ್ಲಿ ನ್ಯೂಜಿಲೆಂಡ್ 293 ರನ್‌ಗಳಿಗೆ ಆಲೌಟ್ ಆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡ ನಿರೀಕ್ಷಿತ ಮಟ್ಟದಲ್ಲಿ ರನ್ ಕಲೆ ಹಾಕಲು ವಿಫಲವಾಯಿತು. ನಂತರ ಮೊದಲ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ದಿನದಾಟ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 32 ರನ್ ದಾಖಲಿಸಿ ಉತ್ತಮ ಆರಂಭ ಪಡೆದಿತ್ತು.
ಆರಂಭಿಕರಾಗಿ ಕಣಕ್ಕಿಳಿದ ಟಾಮ್ ಲ್ಯಾತಮ್ (14) ಹಾಗೂ ಹಮೀಶ್ ರುದರ್‌ಫೋರ್ಡ್ (4) ಬೇಗನೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಕೇನ್ ವಿಲಿಯಮ್ಸನ್ (43), ರಾಸ್ ಟೇಲರ್ (45), ಬ್ರೆಂಡನ್ ಮೆಕಲಂ (31), ಉತ್ತಮ ಆರಂಭ ಪಡೆದರಾದರೂ ಬೃಹತ್ ಇನಿಂಗ್ಸ್ ಆಡುವಲ್ಲಿ ವಿಫಲರಾದರು.
ಆದರೆ ಜಿಮ್ಮಿ ನಿಶಾಮ್ (78) ಹಾಗೂ ಮಾರ್ಕ್ ಕ್ರೇಗ್ (ಅಜೇಯ 46) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕಿವೀಸ್ 250ರ ಗಡಿ ದಾಟಲು ನೆರವಾಯಿತು. ವೆಸ್ಟ್ ಇಂಡೀಸ್ ಪರ ಸುಲೇಮನ್ ಬೆನ್ 93 ರನ್‌ಗಳಿಗೆ 5 ವಿಕೆಟ್ ಪಡೆದರೆ, ಕೆಮಾರ್ ರೋಚ್ 61 ರನ್‌ಗಳಿಗೆ 4 ವಿಕೆಟ್ ಪಡೆದರು.
ನಂತರ ವೆಸ್ಟ್ ಇಂಡೀಸ್ ಇನಿಂಗ್ಸ್ ಆರಂಭಿಸಿದ ಕ್ರಿಸ್ ಗೇಯ್ಲ್ (18) ಹಾಗೂ ಕ್ರೇಗ್ ಬ್ರಾತ್‌ವೈಟ್ (11) ದಿನದ ಅಂತ್ಯಕ್ಕೆ ಅಜೇಯರಾಗುಳಿದಿದ್ದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 78.2 ಓವರ್‌ಗಳಲ್ಲಿ 293
(ಜಿಮ್ಮಿ ನಿಶಾಮ್ 78, ಮಾರ್ಕ್ ಕ್ರೇಗ್ ಅಜೇಯ 46, ಸುಲೇಮನ್ ಬೆನ್ 93ಕ್ಕೆ5, ಕೆಮಾರ್ ರೋಚ್ 61ಕ್ಕೆ4)
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್  9 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 32
(ಕ್ರಿಸ್ ಗೇಯ್ಲ್ ಅಜೇಯ 18, ಬ್ರಾತ್‌ವೈಟ್ ಅಜೇಯ 11)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.