ರಣಜಿ ವೀರರಿಗೆ ಸನ್ಮಾನ

ಬೆಂಗಳೂರು: ಪ್ರಸಕ್ತ ಸಾಲಿನ ಚಾಂಪಿಯನ್ ತಂಡ ಸೇರಿದಂತೆ, ಈ ಹಿಂದೆ ಕರ್ನಾಟಕ ಆರು ಬಾರಿ ರಣಜಿ ಪ್ರಶಸ್ತಿ ಗೆದ್ದ ತಂಡಗಳನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ ಶನಿವಾರ ಸನ್ಮಾನಿಸಲಾಯಿತು.
ಆದರೆ, ಇದೇ ಮೊದಲ ಬಾರಿಗೆ ರಣಜಿ, ಇರಾನಿ ಹಾಗೂ ವಿಜಯ್ ಹಜಾರೆ ಪಂದ್ಯಾವಳಿಗಳಲ್ಲಿ ಚಾಂಪಿಯನ್ ಎನಿಸಿದ ತಂಡವನ್ನು ಸನ್ಮಾನ ಮಾಡಲು ಆಯೋಜಿಸಿದ್ದ ಕಾರ್ಯಕ್ರಮಕ್ಕೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ರಾಜ್ಯದ ಪ್ರತಿಭೆಗಳಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಬಾರದಿರುವುದು ಬೇಸರ ಮೂಡಿಸಿತ್ತು.
ಅದೂ, ನಮ್ಮದೇ ತಂಡಕ್ಕೆ ನಮ್ಮ ಮನೆಯಲ್ಲೇ ನಡೆದ ಕಾರ್ಯಕ್ರಮಕ್ಕೆ ಅವರು ಆಗಮಿಸದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಈ ಬಾರಿ ಕೆಎಸ್ಸಿಎ ಚುನಾವಣೆಯಲ್ಲಿ ಎದುರಾಳಿ ಬಣ ಅಧಿಕಾರ ಹಿಡಿದಿರುವುದೇ ಅವರೆಲ್ಲ ಕಾರ್ಯಕ್ರಮಕ್ಕೆ ಆಗಮಿಸದಿರುವುದಕ್ಕೆ ಕಾರಣ ಎಂಬ ಗುಸುಗುಸು ಸಹ ಕೇಳಿಬಂದಿತು. ಆದರೆ, ಕುಂಬ್ಳೆ, ಶ್ರೀನಾಥ್ ಹಾಗೂ ದ್ರಾವಿಡ್ ಅವರು ಕಾರ್ಯ ನಿಮಿತ್ತ ವಿದೇಶದಲ್ಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದರು.
ಹಿರಿಯ ಆಟಗಾರ ಸೈಯದ್ ಕಿರ್ಮಾನಿ ಹಾಗೂ ವಿಜಯ್ ಭಾರದ್ವಾಜ್ ಅವರೂ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಸನ್ಮಾನದೊಂದಿಗೆ, ಪ್ರತಿಯೊಬ್ಬ ಆಟಗಾರನಿಗೆ ಶುದ್ಧ ಬೆಳ್ಳಿಯಲ್ಲಿ ಮಾಡಿಸಿದ ರಣಜಿ ಟ್ರೋಫಿಯ ಮಾದರಿಯನ್ನು ನೀಡಲಾಯಿತು. ಈ ಹಿಂದಿನ ಆರು ತಂಡಗಳ ಆಟಗಾರರಿಗೆ ರು. 1 ಲಕ್ಷ ಬಹುಮಾನ ನೀಡಿದರೆ, ಪ್ರಸಕ್ತ ತಂಡಕ್ಕೆ ಒಟ್ಟಾರೆ ರು. 4 ಕೋಟಿ ಹಣವನ್ನು ಹಂಚಲಾಯಿತು. ಈ ಹಿಂದೆ ಕರ್ನಾಟಕ 1973-74, 1977-1978, 1982-1983, 1995-1996, 1997-1998, 1998-1999ರ ಸಾಲಿನಲ್ಲಿ ಚಾಂಪಿಯನ್ ಆಗಿತ್ತು.
ಬಾಂಗ್ಲಾ ವಿರುದ್ಧದ ಏಕದಿನ ಪಂದ್ಯದಲ್ಲಿ 4 ರನ್ ನೀಡಿ 6 ವಿಕೆಟ್ ಪಡೆದ ಸ್ಟುವರ್ಟ್ ಬಿನ್ನಿ ಸಾಧನೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು.
ಬಿಸಿಸಿಐ ಹಂಗಾಮಿ ಅಧ್ಯಕ್ಷ ಶಿವಲಾಲ್ ಯಾದವ್, ಕೆಎಸ್ಸಿಎ ಅಧ್ಯಕ್ಷ ಅಶೋಕ್ ಆನಂದ, ಕಾರ್ಯದರ್ಶಿ ಬೃಜೇಶ್ ಪಟೇಲ್ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು. 'ಬರುವ ಆಗಸ್ಟ್ ತಿಂಗಳಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಆರಂಭಿಸುತ್ತೇವೆ. ಲೀಗ್ ಪಂದ್ಯಗಳೆಲ್ಲ ರಾಜ್ಯದ ಇತರ ನಗರಗಳಲ್ಲಿ ನಡೆಯಲಿವೆ ಗ್ರಾಮೀಣ ಕ್ರಿಕೆಟ್ ಮೂಲಭೂತೊ ಸೌಲಭ್ಯಗಳನ್ನು ಹೆಚ್ಚಿಸುತ್ತೇವೆ' ಎಂದು ಬೃಜೇಶ್ ಪಟೇಲ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


