ಪಂಕಜ್ಗೆ ಐತಿಹಾಸಿಕ ವಿಜಯ

ಶರ್ಮ್ ಎಲ್ ಶೇಖ್ (ಈಜಿಪ್ಟ್): ಭಾರತದ ಖ್ಯಾತ ಸ್ನೂಕರ್ ತಾರೆ ಪಂಕಜ್ ಅಡ್ವಾಣಿ ಐಬಿಎಸ್ಎಫ್ ವಿಶ್ವ 6-ರೆಡ್ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.
ಶನಿವಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪಂಕಜ್ ಅಡ್ವಾಣಿ, ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಎರಡೂ ವಿಭಾಗಗಳಲ್ಲೂ ದೀರ್ಘ ಹಾಗೂ ಅಲ್ಪ ಮಾದರಿಯ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿ ಸುತ್ತಿನಲ್ಲಿ ಪೊಲೆಂಡ್ನ ಕೆಸ್ಪರ್ ಫ್ಲಿಲ್ಪಿಯಕ್ ವಿರುದ್ಧ ಅತ್ಯುತ್ತಮ ಪ್ರದರ್ಶನ ತೋರಿದ ಅಡ್ವಾಣಿ, ಮೊದಲ 6-ರೆಡ್ ಸ್ನೂಕರ್ ವಿಶ್ವ ಚಾಂಪಿಯನ್ಶಿಪ್ ಹಾಗೂ ಒಟ್ಟಾರೆಯಾಗಿ 9ನೇ ವಿಶ್ವ ಚಾಂಪಿಯನ್ಶಿಪ್ ಪ್ರಸಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಪಂಕಜ್ ಅಡ್ವಾಣಿ ಬಿಲಿಯರ್ಡ್ಸ್ನಲ್ಲಿ 7 ಬಾರಿ, 1 ಬಾರಿ ಸ್ನೂಕರ್ನಲ್ಲಿ ವಿಶ್ವ ಚಾಂಪಿಯನ್ಶಿಪ್ ಗೆದ್ದುಕೊಂಡಿದ್ದು, ಇದಕ್ಕೆ ಹೊಸ ಗರಿಯೊಂದು ಸೇರ್ಪಡೆಯಾಗಿದೆ. ಈ ಮೂಲಕ ಅಡ್ವಾಣಿ ಸ್ನೂಕರ್ನ ಎರಡೂ ಮಾದರಿಯ ವಿಶ್ವ ಚಾಂಪಿಯನ್ಶಿಪ್ ಅನ್ನು ಪದಾರ್ಪಣೆ ಮಾಡಿದ ಟೂರ್ನಿಯಲ್ಲೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.
ಈ ಹಿಂದೆ ಚೀನಾದಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್, ಈಗ ಈಜಿಪ್ಟ್ನಲ್ಲಿ ಐಬಿಎಸ್ಎಫ್ 6-ರೆಡ್ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಮೂಲಕ ಭಾರತೀಯ ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ವಿಶ್ವಚಾಂಪಿಯನ್ಶಿಪ್ ಗೆದ್ದ ಆಟಗಾರ ಎಂಬ ಖ್ಯಾತಿ ಗಳಿಸಿದ್ದಾರೆ.
ಆರಂಭದಲ್ಲೇ 30 ಅಂಕಗಳನ್ನು ಪಡೆಯುವ ಮೂಲಕ ಪಂಕಜ್ ಅಡ್ವಾಣಿ 2-0 ಮುನ್ನಡೆ ಪಡೆದುಕೊಂಡರು. ನಂತರ ಎಚ್ಚೆತ್ತ ಪೊಲೆಂಡ್ ಆಟಗಾರ ಉತ್ತಮ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದರು. ಈ ವೇಳೆ ತನ್ನ ಚಾಣಕ್ಯತನ ಹಾಗೂ ಅನುಭವವನ್ನು ಬಳಸಿದ ಬೆಂಗಳೂರಿಗ, ಅದ್ಭುತ ರೀತಿಯಲ್ಲಿ ಎರಡು ಸ್ನೂಕರ್ ಅನ್ನು ಹೊಡೆಯುವ ಮೂಲಕ ಎದುರಾಳಿಗಿದ್ದ ಅವಕಾಶವನ್ನು ಸಂಪೂರ್ಣವಾಗಿ ಕಸಿದುಕೊಂಡು ಪಂದ್ಯಕ್ಕೆ ತೆರೆ ಎಳೆದರು.
ಇದೊಂದು ಕನಸಿನ ಅನುಭವವಾಗಿದೆ. ಈ ಚಾಂಪಿಯನ್ಶಿಪ್ನಲ್ಲಿ ಯಾವುದೇ ಯಶಸ್ಸನ್ನು ಊಹಿಸಿರಲಿಲ್ಲ. ಕೇವಲ ಉತ್ತಮ ಗುಣಮಟ್ಟದ ಆಟವಾಡುವತ್ತ ಮಾತ್ರ ಗಮನ ಹರಿಸಿದೆ. ಹಾಗಾಗಿ ಇದು ಬಹಳ ಸರಳವಾಗಿ ಕಾಣುತ್ತಿದ್ದು, ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅಡ್ವಾಣಿ ಸಂತಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


