ಅರವಿಂದ್ ಭಟ್ ಪ್ರಶಸ್ತಿ ಸುತ್ತಿಗೆ ಲಗ್ಗೆ
ಮುಲೇಂ ಆನ್ ಡೇರ್ ರುಹ್ರ (ಜರ್ಮನಿ): ರಾಷ್ಟ್ರೀಯ ಮಾಜಿ ಚಾಂಪಿಯನ್ ಅರವಿಂದ್ ಭಟ್ ಒಂದು ಲಕ್ಷದ 20 ಸಾವಿರ ಡಾಲರ್ ಬಹುಮಾನ ಮೊತ್ತದ ಜರ್ಮನ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೆ ಹೆಜ್ಜೆ ಹಾಕಿದ್ದಾರೆ.
ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಮೂಲಕ ಅರವಿಂದ್ ಭಟ್, 21-12, 12-21, 22-20 ಅಂಕಗಳ ಅಂತರದಲ್ಲಿ ಚೈನೀಸ್ ತೈಪೇನ ಟಿಯನ್ ಚೆನ್ ಚೊವು ಅವರನ್ನು ಪರಾಭವಗೊಳಿಸಿದರು. ಬೆಂಗಳೂರಿನ ಹುಡುಗ 34ರ ಭಟ್, ಮೂರು ಸುತ್ತುಗಳ ಹೋರಾಟದಲ್ಲಿ 55 ನಿಮಿಷಗಳ ಕಾಲ ರೋಚಕ ಆಟ ಪ್ರದರ್ಶಿಸಿ ಅಂತಿಮ ಗೆಲವು ತನ್ನದಾಗಿಸಿಕೊಂಡರು.
ಹದಿನೈದನೇ ಶ್ರೇಯಾಂಕಿತ ಟಿಯನ್ ಚೆನ್ ಚೊವು ಎರಡನೇ ಸುತ್ತಿನ ಪಂದ್ಯದಲ್ಲಿ ಮೈಕೊಡವಿ ಮೇಲೇಳುವುದರೊಂದಿಗೆ ಭಾರತೀಯ ಆಟಗಾರನಿಗೆ ಉತ್ತಮ ತಿರುಗೇಟು ನೀಡಿದ್ದರು. ಆದರೆ, ತೀವ್ರ ರೋಚಕತೆಯಿಂದ ಸಾಗಿದ ನಿರ್ಣಾಯಕ ಮೂರನೇ ಗೇಮ್ನಲ್ಲಿ ಅರವಿಂದ್ ಭಟ್, ಕೊನೆಯವರೆಗೂ ದಿಟ್ಟ ಹೋರಾಟ ನಡೆಸುವ ಮೂಲಕ ಫೈನಲ್ಗೆ ಲಗ್ಗೆ ಹಾಕುವಲ್ಲಿ ಸಫಲರಾದರು. ವಿಶ್ವದ 24ನೇ ಶ್ರೇಯಾಂಕಿತ ಚೈನೀಸ್ ತೈಪೇ ಆಟಗಾರ ಈ ಮುನ್ನ ಸಹ ಅರವಿಂದ್ ಎದುರು ಎರಡು ಬಾರಿ ಸೋಲನುಭವಿಸಿದ್ದರು. ಈ ಪಂದ್ಯದಲ್ಲಿ ಕೂಡ ಭಾರತೀಯ ಆಟಗಾರನ ಅನುಭವದ ಮುಂದೆ ಟಿಯಾನ್ಗೆ ಪ್ರತ್ಯುತ್ತರ ನೀಡಲು ಸಾಧ್ಯವಾಗಲಿಲ್ಲ.
ಪ್ರಶಸ್ತಿ ಸುತ್ತಿನ ಮುಖಾಬಲದಲ್ಲಿ ಅರವಿಂದ್ ಅವರು ಡೆನ್ಮಾರ್ಕ್ನ ಹ್ಯಾನ್ಸ್-ಕ್ರಿಸ್ಟಿಯನ್ ವಿಟಿಂಗಸ್ ಅವರನ್ನು ಎದುರಿಸಲಿದ್ದಾರೆ.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಹ್ಯಾನ್ಸ್-ಕ್ರಿಸ್ಟಿಯನ್ 21-16, 21-13 ಅಂಕಗಳ ಅಂತರದಲ್ಲಿ ನಾಲ್ಕನೇ ಶ್ರೇಯಾಂಕಿತ ಜರ್ಮನಿಯ ಮಾರ್ಕ್ ಜ್ವೆಬ್ಲರ್ ಅವರನ್ನು ಮಣಿಸಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.
ಭಾರತೀಯ ಆಟಗಾರ ಈವರೆಗೆ ಒಟ್ಟು ಆರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇದರಲ್ಲಿ 2004ರ ಸ್ಕಾಟಿಷ್ ಓಪನ್ ಮತ್ತು 2007ರ ಜೆಕ್ ಇಂಟರ್ನ್ಯಾಷನಲ್ ಪ್ರಶಸ್ತಿ ಸಹ ಸೇರಿದೆ. ಚೀನಾದ ಗುವಾಂಗ್ಜೂನಲ್ಲಿ ನಡೆದ 2010ರ ಏಷ್ಯನ್ ಗೇಮ್ಸ್ ಹಾಗೂ 2011ರ ಸುಧೀರ್ಮನ್ ಕಪ್ ಪಂದ್ಯಾವಳಿಯಲ್ಲೂ ಸಹ ಅರವಿಂದ್ ಭಟ್, ಭಾರತ ತಂಡವನ್ನು ಪ್ರತಿನಿಧಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

