ಕ್ರೀಡೆ

ಜಾಗತಿಕ ಕ್ರಿಕೆಟ್‌ಗೆ ಸ್ಮಿತ್ ವಿದಾಯ

Published On :

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಬಳಿಕ ವಿದಾಯ ಹೇಳುವುದಾಗಿ ಗ್ರೇಮ್ ಸ್ಮಿತ್ ಪ್ರಕಟಿಸಿದ್ದಾರೆ.
ದೀರ್ಘಕಾಲದವರೆಗೆ ದಕ್ಷಿಣ ಆಫ್ರಿಕಾ ಪಡೆಯನ್ನು ಮುನ್ನಡೆಸಿದ ದಾಖಲೆ ಹೊಂದಿರುವ ಸ್ಮಿತ್ 33ನೇ ವಯಸ್ಸಿನಲ್ಲಿಯೇ ಕ್ರಿಕೆಟ್‌ಗೆ ನಿವೃತ್ತಿ ಹೇಳಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ನಾನೀಗ ನನ್ನ ಜೀವನದಲ್ಲೇ ಮೊದಲ ಬಾರಿಗೆ ಕಠಿಣ ನಿರ್ಧಾರ ಕೈಗೊಂಡಿದ್ದೇನೆ. ಕಳೆದ ಸಾಲಿನ ಏಪ್ರಿಲ್‌ನಲ್ಲಿ ಹಿಮ್ಮಡಿ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದಾಗಿನಿಂದಲೇ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದೆ ಎಂದು ಸ್ಮಿತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸ್ಮಿತ್ ಒಟ್ಟು 108 ಟೆಸ್ಟ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದಾ. ಅಲ್ಲದೆ, 2005ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲೂ ವಿಶ್ವ ಇಲೆವೆನ್ ತಂಡವನ್ನು ಮುನ್ನಡೆಸಿದ್ದರು. ಇದೂ ಸೇರಿದಂತೆ ಒಟ್ಟಾರೆ 109 ಟೆಸ್ಟ್‌ಗಳಲ್ಲಿ ನಾಯಕರಾಗಿ ಸೇವೆ ಸಲ್ಲಿಸಿರುವ ಅವರು ಈ ಮುನ್ನ ಅತಿ ಹೆಚ್ಚು ಬಾರಿ ನಾಯಕರಾದ ದಾಖಲೆ ಹೊಂದಿದ್ದ ಆಸ್ಟ್ರೇಲಿಯಾದ ಅಲನ್ ಬಾರ್ಡರ್‌ಗಿಂತಲೂ 16 ಹೆಚ್ಚಿನ ಪಂದ್ಯಗಳಲ್ಲಿ ಜವಾಬ್ದಾರಿ ನಿರ್ವಹಿಸಿದಂತಾಗಿದೆ.
ಇವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ 53 ಗೆಲವು ಕಂಡಿದೆ. ಇದರೊಂದಿಗೆ ಸ್ಮಿತ್ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದುಕೊಂಡ ನಾಯಕರೆನಿಸಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ರ ದಾಖಲೆ 48 ಪಂದ್ಯಗಳ ವಿಜಯವನ್ನು ಸ್ಮಿತ್ ಮುರಿದಿದ್ದಾರೆ. ಸ್ಮಿತ್ ಸಾರಥ್ಯದಲ್ಲಿ ದಕ್ಷಿಣ ಆಫ್ರಿಕಾ 27ರಲ್ಲಿ ಸೋಲು ಮತ್ತು 27ರಲ್ಲಿ ಡ್ರಾ ಫಲಿತಾಂಶ ಅನುಭವಿಸಿದೆ.
ಬಾಂಗ್ಲಾದೇಶ ವಿರುದ್ಧ 2003ರಲ್ಲಿ ಮೊದಲ ಬಾರಿಗೆ ತಂಡದ ನಾಯಕರಾಗಿ ನೇಮಕಗೊಳ್ಳುವ ಮೂಲಕ ಅತಿ ಕಿರಿಯ ಸಾರಥಿ ಎಂಬ ದಾಖಲೆಯನ್ನೂ ಅವರು ಮಾಡಿದ್ದರು. ಇವರ ಮುಂದಾಳತ್ವದಲ್ಲಿಯೇ ಆಫ್ರಿಕಾ ಪಡೆ ಜಾಗತಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿದೆ.
ಸ್ಮಿತ್ ನಾಯಕತ್ವದಲ್ಲಿ ಆಡಲಾದ ಎರಡು ಮತ್ತು ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಒಳಗೊಂಡ ಒಟ್ಟಾರೆ 32 ಸರಣಿಗಳಲ್ಲಿ ದಕ್ಷಿಣ ಆಫ್ರಿಕಾ 22ರಲ್ಲಿ ಗೆಲವು ದಾಖಲಿಸಿದ್ದು, 7 ಸೋಲು ಮತ್ತು 9 ಡ್ರಾ ಫಲಿತಾಂಶ ಪಡೆದಿದೆ.
ಸ್ಮಿತ್, 2002ರ ಮಾರ್ಚ್ 2ರಿಂದ ಕೇಪ್‌ಟೌನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾದ ಪಂದ್ಯದ ಮೂಲಕ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. 2002ರ ಮಾರ್ಚ್ 30ರಂದು ಆಸ್ಟ್ರೇಲಿಯಾ ವಿರುದ್ಧವೇ ಬ್ಲೊಯೆಮ್‌ಫಾಂಟೇನ್‌ನಲ್ಲಿನ ಪಂದ್ಯದೊಂದಿಗೆ ಏಕದಿನ  ವೃತ್ತಿ ಬದುಕು ಆರಂಭಿಸಿದ್ದರು.
ಟೆಸ್ಟ್: ಪಂದ್ಯ-117’, ಇನಿಂಗ್ಸ್-203, ರನ್-9265, ಗರಿಷ್ಠ-277, ಶತಕ-27, ಅರ್ಧಶತಕ-38.
ಏಕದಿನ: ಪಂದ್ಯ-197, ಇನಿಂಗ್ಸ್-194, ರನ್-6989, ಗರಿಷ್ಠ-141, ಶತಕ-10, ಅರ್ಧಶತಕ-47.
ಟಿ-20: ಪಂದ್ಯ-33, ಇನಿಂಗ್ಸ್-33, ರನ್-982, VÚÂÎÚr-89’, ಅರ್ಧಶತಕ-47

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.