ಎಫ್1 ಜ್ವರ ಹೆಚ್ಚಿಸಲು ಹೊಸ ರೂಪ

ಫಾರ್ಮುಲಾ ಒನ್ ಕಾರ್ ರೇಸ್ ಎಂದರೆ ಯಾರ ಮೈ ನವಿರೇಳುವುದಿಲ್ಲ ಹೇಳಿ. ಈ ಕ್ರೀಡೆಯೇ ಹಾಗೆ ಟ್ರ್ಯಾಕ್ನಲ್ಲಿ ಕಾರು ತನ ವೇಗ ಹೆಚ್ಚಿಸಿದಂತೆ ಪ್ರೇಕ್ಷಕರ ಮೈಯಲ್ಲಿನ ರಕ್ತ ಸಂಚಾರವೂ ಹೆಚ್ಚುತ್ತದೆ. ಇಷ್ಟು ಕುತೂಲಕಾರಿ ಫಾರ್ಮುಲಾ ಒನ್ ಈಗ ತಾಂತ್ರಿಕ ಹಾಗೂ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದು, ಪ್ರೇಕ್ಷಕರನ್ನು ಮತ್ತಷ್ಟು ಹುಚ್ಚೆಬ್ಬಿಸಲು ಸಿದ್ಧವಾಗಿದೆ. ಮಾ.16ರಂದು ಮೆಲ್ಬೋರ್ನ್ನಲ್ಲಿ 2014ನೇ ಸಾಲಿನ ಮೊದಲ ಗ್ರ್ಯಾನ್ ಪ್ರೀ ರೇಸ್ ಆರಂಭವಾಗಲಿದ್ದು, ಹೊಸ ರೂಪದೊಂದಿಗೆ ಕಾಣಿಸಿಕೊಳ್ಳಲಿದೆ. ಈ ಬಾರಿ ಕಾರುಗಳಿಗೆ ಎನರ್ಜಿ ರಿಕವರಿ ಸಿಸ್ಟಮ್ವುಳ್ಳ ವಿ6 ಎಂಜಿನ್ ಅನ್ನು ಪರಿಚಯಿಸಲಾಗುತ್ತಿದೆ. ಅಲ್ಲದೆ ನಿಯಮದಲ್ಲೂ ಕೆಲವು ಬದಲಾವಣೆಗಳನ್ನು ಕಂಡಿದ್ದು, ಆಸಕ್ತಿ ಹೆಚ್ಚಿಸಿದೆ.
ಪವರ್ ಯುನಿಟ್: ಇಷ್ಟು ದಿನಗಳ ಕಾಲ ಹಳೆಯ ಮಾದರಿಯ 18,000ಆರ್ಪಿಎಮ್(ರೆವೊಲ್ಯೂಷನ್ ಪರ್ ಮಿನಿಟ್) ಹಾಗೂ ಕೈನೆಟಿಕ್ ಎನರ್ಜಿ ರಿಕವರಿ ಸಿಸ್ಟಮ್(ಕೆಇಆರ್ಎಸ್)ವುಳ್ಳ 2.4ಲೀಟರ್ ವಿ8 ಎಂಜಿನ್ ಬಳಸುತ್ತಿದ್ದು, ಈಗ ಇದರ ಬದಲಿಗೆ 15,000ಆರ್ಪಿಎಮ್ ಎರಡು ಎನರ್ಜಿ ರಿಕವರಿ ಸಿಸ್ಟಮ್(ಇಆರ್ಎಸ್) ಹಾಗೂ 1.6 ಲೀಟರ್ನ ಟರ್ಬೊಚಾರ್ಜ್ ಎಂಜಿನ್ ಅನ್ನು ಬಳಸಲಾಗುತ್ತಿದೆ. ಈ ಬಾರಿ ಪ್ರತಿ ತಂಡಕ್ಕೆ ಐದು ಪವರ್ ಯುನಿಟ್ ಬಳಸುವ ಅವಕಾಶ ನೀಡಲಾಗಿದೆ.
ಕೆಇಆರ್ಎಸ್ ಎಂಜಿನ್ ಹಳೆಯ ಮಾದರಿಯದ್ದಾಗಿದ್ದು, ಇದು ಪ್ರತಿ 6ಸೆ. 80ಬಿಎಚ್ಪಿ(ಬ್ರೇಕ್ ಹಾರ್ಸ್ಪವರ್) ಅನ್ನು ಹೆಚ್ಚಿಸುತ್ತದೆ. ಆದರೆ ಇಆರ್ಎಸ್ ಹೊಸ ಮಾದರಿಯ ಎಂಜಿನ್ ಆಗಿದ್ದು, ಎರಡು ಎಲೆಕ್ಟ್ರಿಕಲ್ ಮೊಟಾರ್ ಜೆನರೇಟರ್ ಯುನಿಟ್ಸ್ ಅನ್ನು ಒಳಗೊಂಡಿದೆ. ಈ ಯುನಿಟ್ಗಳು ಬ್ರೇಕ್ ಮೂಲಕ ಕೈನೆಟಿಕ್ ಹಾಗೂ ಹೀಟ್ ಎನರ್ಜಿಯನ್ನು ಒದಗಿಸುತ್ತದೆ. ಈ ಮೂಲಕ ಚಾಲಕ ಕಾರನ್ನು ಆರಂಭಿಸುವಾಗ ತನ್ನ ಹೆಚ್ಚಿನ ವೇಗ ಪಡೆಯಲು ಅನುಕೂಲವಾಗುತ್ತದೆ.
ಎಕ್ಸ್ಹಾಟ್ಸ್(ಎಂಜಿನ್ನ ಹೊಗೆ ಹೊಗುವ ಕೊಳವೆ): ಈ ಬಾರಿ ಕಾರುಗಳಲ್ಲಿ ಮಧ್ಯಭಾಗದ ಒಂದು ಎಕ್ಸ್ಹಾಟ್ಸ್ ಅನ್ನು ಬಳಸಲಾಗುತ್ತಿದ್ದು, ಕಳೆದ ಬಾರಿ ಬಳಸಲಾಗುತ್ತಿದ್ದ ಜೋಡಿ ಮಾದರಿಯ ಎಕ್ಸ್ಹಾಟ್ಸ್ ಅನ್ನು ತೆಗೆದುಹಾಕಲಾಗಿದೆ.
ಇಂಧನ ನಿಯಂತ್ರಣ: ಈ ಬಾರಿ ಬಳಸಲಾಗುತ್ತಿರುವ ಹೊಸ ಯುನಿಟ್ಗಳಲ್ಲಿ ಕಳೆದ ಬಾರಿಗಿಂತ ಶೇ.35ರಷ್ಟು ಕಡಿಮೆ ಇಂಧನ ಸಾಮರ್ಥ್ಯವನ್ನು ಹೊಂದಿದೆ. ಕಳೆದ ಬಾರಿ 150ರಿಂದ 160ಕೆ.ಜಿ ಇಂಧನವನ್ನು ಬಳಸಲಾಗುತ್ತಿದ್ದು ಈ ಬಾರಿ ಕೇವಲ 100 ಕೆ.ಜಿ ಇಂಧನದಲ್ಲಿ ರೇಸ್ ಮುಕ್ತಾಯಗೊಳಿಸಬೇಕಿದೆ. ಅಲ್ಲದೆ ರೇಸ್ ಮಧ್ಯದಲ್ಲಿ ಇಂಧನ ತುಂಬಿಸಿಕೊಳ್ಳುವಂತಿಲ್ಲ.
ಗೇರ್ ಬಾಕ್ಸಸ್: ಈ ಬಾರಿ ನಿಯಮದ ಪ್ರಕಾರ ಎಂಟು ವೇಗದ ಫಿಕ್ಸ್ ರೇಶಿಯೊ ಗೇರ್ ಬಾಕ್ಸಸ್ಗಳನ್ನು ಬಳಸಲಾಗುತ್ತಿದೆ. ಕಳೆದ ಬಾರಿ 30 ಗೇರ್ನಲ್ಲಿ ಆಯ್ಕೆಯ ಅವಕಾಶವಿತ್ತು ಆದರೆ ಈ ಬಾರಿ ಎಲ್ಲಾ ಕಡೆಯಲ್ಲೂ ಒಂದೇ ಪ್ರಮಾಣದ ಗೇರ್ ಅನ್ನು ಬಳಸಬೇಕಾಗಿದೆ. ಆದರೆ ಅಗತ್ಯ ಬಿದ್ದರೆ ಮಾತ್ರ ಒಂದು ಗೇರ್ನಷ್ಟು ಬದಲಾವಣೆ ಮಾಡಿಕೊಳ್ಳಬಹುದು. ಒಂದುವೇಳೆ ಅದಕ್ಕಿಂತ ಹೆಚ್ಚಿನ ಗೇರ್ ಬದಲಿಸಿದರೆ, ಪೆನಾಲ್ಟಿ ಹಾಕಲಾಗುವುದು.
ವಾಯುಬಲ(ಏರೋಡೈನಾಮಿಕ್ಸ್): ಈ ಬಾರಿ ಕಾರುಗಳಲ್ಲಿ ಮುಂಬಾಗದ ರೆಕ್ಕೆಗಳನ್ನು 150 ಎಂ.ಎಂ ಸಂಕುಚಿತವಾಗಿದ್ದು, ಕಾರ್ಗಳು ಹೆಚ್ಚು ಪಂಚರ್ ಆಗುವ ಸಮಸ್ಯೆಯನ್ನು ಬಗೆ ಹರಿಸಲಿದೆ. ಇನ್ನು ಕಾರ್ನ ಬೇಸ್ 415 ಎಂ.ಎಂನಷ್ಟು ಕಡಿಮೆ ಮಾಡಲಾಗಿದೆ.
ಕಾರಿನ ತೂಕ: ಈ ಬಾರಿ ಪವರ್ ಯುನಿಟ್ಗಳ ಅಳವಡಿಕೆಯಿಂದಾಗಿ ಕಾರುಗಳ ಕನಿಷ್ಠ ತೂಕ 642ಕೆ.ಜಿಯಿಂದ 691ಕೆ.ಜಿಯವರೆಗೆ ಹೆಚ್ಚಿಸಲಾಗಿದೆ. ಕಾರಿನಲ್ಲಿ ಪ್ರತಿ ತೂಕ ಹೆಚ್ಚಾದಂತೆ ಚಾಲಕನ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ.
ಶಬ್ಧದಲ್ಲಿ ಬದಲಾವಣೆ: 2006ರಲ್ಲಿ ಪರಿಚಯಿಸಲಾದ ವಿ8 ಎಂಜಿನ್ನಿಂದ ಬರುತ್ತಿದ್ದ ಶಬ್ಧಕ್ಕಿಂತ, ಈ ಬಾರಿ ಅಳವಡಿಸಲಾಗಿರುವ ಪವರ್ ಯುನಿಟ್ ಶಬ್ಧ ಸ್ವಲ್ಪಮಟ್ಟಿಗೆ ತಗ್ಗಲಿದೆ. ಇಲ್ಲಿ ಎಂಜಿನ್ 15,000ಆರ್ಪಿಎಂ ನಿಂದ 125,000 ಆರ್ಪಿಎಂಗೆ ತಿರುಗುತ್ತಿದ್ದಂತೆ ಶಬ್ಧದ ಪ್ರಮಾಣವನ್ನು ಭಿನ್ನವಾಗಿ ಕಡಿಮೆ ಮಾಡುತ್ತದೆ.
ಡಬಲ್ ಪಾಯಿಂಟ್: ಈ ಬಾರಿ ಋತುವಿನ ಅಂತಿಮ ರೇಸ್ ಆದ ಅಬುಧಾಬಿ ರೇಸ್ನಲ್ಲಿ ಅಗ್ರ ಹತ್ತು ಸ್ಥಾನ ಪಡೆಯುವ ರೇಸರ್ಗಳು ಉಳಿದ ರೇಸ್ಗಳಿಗಿಂತ ದ್ವಿಗುಣ ಅಂಕಗಳನ್ನು ಪಡೆಯಲಿದ್ದಾರೆ. ಉದಾ: ಪ್ರತಿ ರೇಸ್ನಲ್ಲಿ ಅಗ್ರಸ್ಥಾನ ಪಡೆಯುವ ಚಾಲಕ 25 ಅಂಕಗಳನ್ನು ಪಡೆಯುತ್ತಾನೆ. ಆದರೆ ಅಂತಿಮ ರೇಸ್ನಲ್ಲಿ ಅಗ್ರಸ್ಥಾನ ಪಡೆಯುವ ಚಾಲಕ 50 ಅಂಕಗಳನ್ನು ಪಡೆಯಲಿದ್ದಾನೆ.
ಪೆನಾಲ್ಟಿ ಪಾಯಿಂಟ್: ಒಬ್ಬ ಚಾಲಕ ಪ್ರತಿ ಋತುವಿನಲ್ಲಿ 12 ಪೆನಾಲ್ಟಿ ಅಂಕಗಳನ್ನು ಪಡೆದರೆ ಆತ ಒಂದು ರೇಸ್ನಿಂದ ನಿಷೇಧಕ್ಕೊಳಗಾಗುತ್ತಾನೆ. ಈ ಬಾರಿ ರೇಸರ್ಗಳು ತಮ್ಮ ರೇಸಿಂಗ್ ಸಂಖ್ಯೆಯನ್ನು ಆರಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಈ ಸಂಖ್ಯೆ ಅವರ ವೃತ್ತಿಜೀವನದುದ್ದಕ್ಕೂ ರೇಸಿಂಗ್ ಸಂಖ್ಯೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


