ಕ್ರೀಡೆ

ಕ್ವಾರ್ಟರ್‌ಫೈನಲ್‌ಗೆ ಸೈನಾ

ಕ್ವಾರ್ಟರ್‌ಫೈನಲ್‌ಗೆ ಸೈನಾ
Published On :

ಬರ್ಮಿಂಗ್‌ಹ್ಯಾಮ್: ಭಾರತದ ಶಟಲ್ ಕ್ವೀನ್ ಸೈನಾ ನೆಹವಾಲ್ ಇಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಿಂದ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ರಾತ್ರಿ ನಡೆದ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಏಳನೇ ಶ್ರೇಯಾಂಕಿತೆ ಸೈನಾ ನೆಹವಾಲ್ 24-22, 18-21, 21-19 ಅಂಕಗಳ ಅಂತರದಿಂದ ಅಮೆರಿಕದ ಬೀವೆನ್ ಝಾಂಗ್ ಅವರನ್ನು ಮಣಿಸಿದರು.
ಅರ್ಹತಾ ಸುತ್ತಿನಿಂದ ಬಂದಿದ್ದ ಅಮೆರಿಕನ್ ಆಟಗಾರ್ತಿಯ ವಿರುದ್ಧ ಭಾರತೀಯ ಆಟಗಾರ್ತಿ ಗೆಲವಿಗಾಗಿ ಭಾರಿ ಪ್ರಯಾಸ ಪಡಬೇಕಾಯಿತು. ಸುಮಾರು ಒಂದು ಗಂಟೆ ಕಾಲ ನಡೆದ ಪಂದ್ಯದಲ್ಲಿ ಸೈನಾ, ಭಾರಿ ಬೆವರು ಸುರಿಸಿದರು.
ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಹೈದರಾಬಾದ್ ಆಟಗಾರ್ತಿಗೆ ಎಂಟರಘಟ್ಟದ ಪಂದ್ಯದಲ್ಲಿ ಚೀನಾದ ವಾಂಗ್ ಶಿಜಿಯಾನ್ ಅವರ ಸವಾಲು ಎದುರಾಗಲಿದೆ.
ಮತ್ತೊಂದು ಮಹಿಳೆಯರ ಸಿಂಗಲ್ಸ್ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತೆ ವಾಂಗ್ ಶಿಜಿಯಾನ್ 21-15, 21-12 ನೇರ ಅಂಕಗಳ ಅಂತರದಲ್ಲಿ ಐರ್ಲೆಂಡ್‌ನ ಚಲೊಯೆ ಮ್ಯಾಗಿ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಹೆಜ್ಜೆ ಹಾಕಿದ್ದಾರೆ.
ಪ್ರಸ್ತುತ ಈ ಪಂದ್ಯಾವಳಿಯಲ್ಲಿ ಉಳಿದುಕೊಂಡಿರುವ ಏಕೈಕ ಭಾರತೀಯ ಆಗಿರುವ ಸೈನಾ ಮುಂದಿನ ಸುತ್ತು ಸಹ ಸುಲಭದ್ದಲ್ಲ. ಶಿಜಿಯಾನ್ ಪ್ರಭಾವಶಾಲಿ ಆಟಗಾರ್ತಿಯಾಗಿದ್ದು, ಸೈನಾಗೆ ಅತ್ಯಂತ ಕಠಿಣ ಸವಾಲುಗಳು ಎದುರಾಗರೂ ಅಚ್ಚರಿಯಿಲ್ಲ.
ಬೀವೆನ್ ಝಾಂಗ್ ಅವರನ್ನು ಮೊದಲ ಬಾರಿಗೆ ಎದುರಿಸಿದ್ದ ಸೈನಾ, ಮೊದಲ ಗೇಮ್‌ನಲ್ಲೇ ಗೆಲವಿಗಾಗಿ ಹರಸಾಹಸ ಪಡಬೇಕಾಯಿತು. 24-22ರಿಂದ ಗೆದ್ದು ಭರ್ಜರಿ ಆರಂಭ ಕಂಡುಕೊಂಡರು, ಎರಡನೇ ಗೇಮ್‌ನಲ್ಲಿ ತಿರುಗಿಬಿದ್ದ ಝಾಂಗ್ ಸವಾಲನ್ನು ಹತ್ತಿಕ್ಕುವಲ್ಲಿ ಮಾತ್ರ ವಿಫಲರಾಗಿ ಹಿನ್ನಡೆ ಅನುಭವಿಸಿದರು.
ಆದರೂ ಸಹ, ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ನೀಡುವ ಮೂಲಕ ಕೇವಲ ಎರಡು ಅಂಕಗಳ ಅಂತರದಲ್ಲಿ ಅಂತಿಮ ಗೆಲವು ದಾಖಲಿಸಿ ಮುಂದಡಿ ಇಟ್ಟರು.
ಮಹಿಳೆಯರ ವಿಭಾಗದ ಮತ್ತೊಂದು ಪಂದ್ಯದಲ್ಲಿ ಅಗ್ರಶ್ರೇಯಾಂಕಿತ ಆಟಗಾರ್ತಿ ಚೀನಾದ ಲೀ ಜೆರುಯಿ 14-21, 21-19, 21-15ರಿಂದ ಜಪಾನಿನ ಮಿನಾಟ್ಸು ಮಿಟಾನಿ ಅವರಿಗೆ ಸೋಲುಣಿಸಿದರು.
ಲೀ, ಚೆನ್ ಮುನ್ನಡೆ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಮುಖ ಆಟಗಾರರಾದ ಮಲೇಷಿಯಾದ ಲೀ ಚಾಂಗ್ ವೀ ಹಾಗೂ ಚೀನಾದ  ಚೆನ್ ಲಾಂಗ್ ಸಹ ಕೂಡ ಗೆಲವು ದಾಖಲಿಸಿದ್ದಾರೆ.
ನಂಬರ್ ಒನ್ ಆಟಗಾರ ಲೀ ಚಾಂಗ್ ವೀ 21-6, 21-12ರಿಂದ ಮಲೇಷಿಯಾದ ಚಾಂಗ್ ವೀ ಫೆಂಗ್‌ರನ್ನು ಸುಲಭವಾಗಿ ಮಣಿಸಿದರೆ, ಎರಡನೇ ಶ್ರೇಯಾಂಕಿತ ಚೆನ್ ಲಾಂಗ್ 21-14, 22-20ರಿಂದ ಜಪಾನಿಲ ಟಕುಮಾ ಉಯೆಡಾ ವಿರುದ್ಧ ಜಯ ಸಂಪಾದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.