ಕ್ರೀಡೆ

ಇಂಡಿಯಾನ ವೆಲ್ಸ್: ಕ್ವಾರ್ಟರ್‌ಗೆ ಸಾನಿಯಾ ಜೋಡಿ

Published On :

ಇಂಡಿಯಾನ ವೆಲ್ಸ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕಾರಾ ಬ್ಲ್ಯಾಕ್ ಜೋಡಿಯು ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಇಂಡಿಯಾನ ವೆಲ್ಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ.
ಶನಿವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಜೋಡಿಯು ತಮ್ಮ ಎದುರಾಳಿ ರಾಕ್ವಲ್ ಕೊಪ್ಸ್ ಜೋನ್ಸ್ ಹಾಗೂ ಅಬಿಗೈಲ್ ಸ್ಪೀರ್ಸ್ ಜೋಡಿಯ ವಿರುದ್ಧ 6-3, 6-4 ನೇರ ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿತು.
1 ಗಂಟೆ 12 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಭುತ್ವ ಸಾಧಿಸಿದ ಮಿರ್ಜಾ ಜೋಡಿ ಮೊದಲ ಸೆಟ್‌ನಲ್ಲಿ 6-3 ಅಂತರದಲ್ಲಿ ಮುನ್ನಡೆ ಪಡೆಯಿತು. ಇದೇ ಪ್ರದರ್ಶನವನ್ನು ಎರಡನೇ ಸೆಟ್‌ನಲ್ಲೂ ಮುಂದುವರಿಸಿದ ಸಾನಿಯಾ ಜೋಡಿ 6-4 ಅಂತರದಿಂದ ಮೇಲುಗೈ ಸಾಧಿಸಿ ಗೆಲವಿನ ನಗೆ ಬೀರಿತು.
ಸಾನಿಯಾ ಮಿರ್ಜಾ ಹಾಗೂ ಕಾರಾ ಬ್ಲ್ಯಾಕ್ ಜೋಡಿಯು ಪ್ರಸಕ್ತ ಋತುವಿನಲ್ಲಿ ಆಡಿರುವ ನಾಲ್ಕು ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ತಮ್ಮ ಹೋರಾಟ ಅಂತ್ಯಗೊಳಿಸಿದೆ. ಹಾಗಾಗಿ ಈ ಜೋಡಿ ಮುಂದಿನ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ.
ನಡಾಲ್‌ಗೆ ಪ್ರಯಾಸದ ಜಯ: ಇನ್ನು ಪುರುಷರ ಎರಡನೇ ಸುತ್ತಿನ ಪಂದ್ಯದಲ್ಲಿ ರಾಫೆಲ್ ನಡಾಲ್ ತಮ್ಮ ಎದುರಾಳಿ ರಾಡೆಕ್ ಸ್ಟಿಪಾನೆಕ್ ಅವರಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಆದರೂ ನಿಯಂತ್ರಣ ಕಳೆದುಕೊಳ್ಳದ ನಡಾಲ್ 2-6, 6-4, 7-5 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಎರಡು ಗಂಟೆ 24 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸ್ಟಿಪಾನೆಕ್ ಆರಂಭಿಕ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾದರು. ಮೊದಲ ಸೆಟ್‌ನಲ್ಲಿ ಅತ್ಯದ್ಭುತ ನಿಯಂತ್ರಣ ಸಾಧಿಸಿದ ಸ್ಟಿಪಾನೆಕ್ 6-2 ಅಂತರದಲ್ಲಿ ಮುನ್ನಡೆ ಸಾಧಿಸಿದರು.
ನಂತರ ಎರಡನೇ ಸೆಟ್‌ನಲ್ಲಿ ತಿರುಗಿ ಬಿದ್ದ ನಡಾಲ್, ಪಂದ್ಯದಲ್ಲಿ ನಿಯಂತ್ರಣ ಪಡೆದುಕೊಂಡರು. ಅಲ್ಲದೆ 6-4 ಅಂತರದಲ್ಲಿ ಸೆಟ್ ಅನ್ನು ತಮ್ಮದಾಗಿಸಿಕೊಂಡು ಪಂದ್ಯದಲ್ಲಿ ಸಮಬಲ ಸಾಧಿಸಿದರು. ಇನ್ನು ಅಂತಿಮ ಹಾಗೂ ಮೂರನೇ ಸೆಟ್‌ನಲ್ಲಿ ಉಭಯ ಆಟಗಾರರು ತೀವ್ರ ಜಿದ್ದಾಜಿದ್ದಿನ ಹೋರಾಟ ನಡೆಸಿದರಾದರೂ ಅಂತಿಮವಾಗಿ ನಡಾಲ್ 7-5 ಅಂತರದ ಮುನ್ನಡೆ ಪಡದು ಗೆಲವು ದಾಖಲಿಸಿದರು.
ಇನ್ನು ಪುರುಷರ ಸಿಂಗಲ್ಸ್‌ನ ಮತ್ತೊಂದು ಪಂದ್ಯದಲ್ಲಿ ಐದನೇ ಶ್ರೇಯಾಂಕಿತ ಆ್ಯಂಡಿ ಮರ್ರೆ ತಮ್ಮ ಪಂದ್ಯದಲ್ಲಿ ಮಂದಗತಿಯ ಆರಂಭ ಪಡೆದರಾದರೂ ಅಂತಿಮವಾಗಿ 4-6, 6-3, 6-2 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಇನ್ನು ಏಳನೇ ಶ್ರೇಯಾಂಕಿತ ರೋಜರ್ ಫೆಡರರ್ ತಮ್ಮ ಎದುರಾಳಿ ಫ್ರ್ಯಾನ್ಸ್‌ನ ಪೌಲ್ ಹೆನ್ರಿ ವಿರುದ್ಧ 6-2 7-6(5) ನೇರ ಸೆಟ್‌ಗಳ ಗೆಲವು ದಾಖಲಿಸಿದ್ದಾರೆ.
ಮೊದಲ ಸೆಟ್‌ನಲ್ಲಿ ಅನಾಯಾಸವಾಗಿ ಮೇಲುಗೈ ಸಾಧಿಸಿದ ಫೆಡರರ್, ಎರಡನೇ ಸೆಟ್‌ನಲ್ಲಿ ಪ್ರತಿರೋಧ ಎದುರಿಸಬೇಕಾಯಿತು. ಹಾಗಾಗಿ ಎರಡನೇ ಸೆಟ್ ಟೈಬ್ರೇಕರ್‌ಗೆ ಪಡೆಯಿತು. ಇಲ್ಲಿ ಹಿಡಿತ ಸಾಧಿಸಿದ ಫೆಡರರ್ ಪಂದ್ಯದಲ್ಲಿ ಗೆಲವು ದಾಖಲಿಸಿದರು.
ಇನ್ನು ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ, ತಮ್ಮ ಎದುರಾಳಿ ಕ್ರೊವೆಶಿಯಾದ ಐವೊ ಕಾರ್ಲೊವಿಕ್ ವಿರುದ್ಧ 6-3, 7-5 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಶರಪೋವಾ ಸುಲಭ ಗೆಲವು: ಹಾಲಿ ಚಾಂಪಿಯನ್ ಮಾರಿಯಾ ಶರಪೋವಾ ಈ ಬಾರಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಶರಪೋವಾ ತಮ್ಮ ಎದುರಾಳಿ ಜರ್ಮನಿಯ ಜುಲಿಯಾ ಜಾರ್ಜಸ್ ವಿರುದ್ಧ 6-1, 6-4 ನೇರ ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಅಗ್ರಶ್ರೇಯಾಂಕಿತೆ ಲೀ ನಾ ತಮ್ಮ ಎದುರಾಳಿ ಜೆಂಗ್ ಝೀ ವಿರುದ್ಧ 6-1, 7-5 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.